ಮುಂಬೈ: 2006ರ ಬಳಿಕ ಭಾರತ ಕ್ರಿಕೆಟ್ ತಂಡವು ಮತ್ತೆ ಪಾಕಿಸ್ಥಾನದ ನೆಲದಲ್ಲಿ ಕ್ರಿಕೆಟ್ ಆಡಲು ಸಜ್ಜಾಗಿದೆ. 2023ರ ಏಷ್ಯಾ ಕಪ್ ಕೂಟವು ಪಾಕಿಸ್ಥಾನದಲ್ಲಿ ನಡೆಯಲಿದ್ದು, ಈ ಕೂಟಕ್ಕೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಒಲವು ತೋರಿದೆ.
ಪಾಕಿಸ್ತಾನವು 2023ರಲ್ಲಿ 50 ಓವರ್‌ಗಳ ಏಷ್ಯಾಕಪ್ ಕೂಟವನ್ನು ಆಯೋಜಿಸಲು ನಿರ್ಧರಿಸಿದೆ, ಇದರ ಬಳಿಕ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಏಷ್ಯಾಕಪ್ ನಲ್ಲಿ ಭಾಗವಹಿಸಲು ಬಿಸಿಸಿಐ ಉತ್ಸುಕತೆ ತೋರಿದೆ. ಆದರೆ ಉಭಯ ದೇಶಗಳ ನಡುವಿನ ರಾಜಕೀಯ ಸಂಘರ್ಷದ ಕಾರಣದಿಂದ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಮಾಡಲಿದೆ.
ಬಿಸಿಸಿಐ ತನ್ನ ವಾರ್ಷಿಕ ಸಾಮಾನ್ಯ ಸಭೆಯನ್ನು ಅಕ್ಟೋಬರ್ 18 ರಂದು ನಡೆಸಲಿದೆ. ಈ ವೇಳೆ ಏಷ್ಯಾ ಕಪ್ ಬಗ್ಗೆ ಚರ್ಚೆಯಾಗಲಿದೆ.
ಇದನ್ನೂ ಓದಿ:ಸೌಂದರ್ಯ ಸ್ಪರ್ಧೆಯ ಜಾಹೀರಾತು ವೈರಲ್; ಪ್ರಕರಣ ದಾಖಲಿಸಿಕೊಂಡ ಪೊಲೀಸರು
ಭಾರತ ಮತ್ತು ಪಾಕಿಸ್ಥಾನ ತಂಡವು 2012-13ರಲ್ಲಿ ಕೊನೆಯದಾಗಿ ದ್ವಿಪಕ್ಷೀಯ ಸರಣಿ ಆಡಿದ್ದವು. ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿ ಎರಡು ಟಿ20 ಮತ್ತು ಮೂರು ಏಕದಿನ ಪಂದ್ಯಗಳು ನಡೆದಿದ್ದವು.