Advertisement

ಅಂಧರ ಕ್ರಿಕೆಟ್‌ಗೆ ಇನ್ನೂ ಸಿಕ್ಕಿಲ್ಲ ಬಿಸಿಸಿಐ ಮಾನ್ಯತೆ

01:05 AM Jul 28, 2018 | Team Udayavani |

ಭಾರತ ಕ್ರಿಕೆಟ್‌ ಪ್ರಿಯರ ರಾಷ್ಟ್ರ. ಕ್ರಿಕೆಟ್‌ ಇಲ್ಲಿನ ಜನರಿಗೆ ಅಚ್ಚುಮೆಚ್ಚು. ಧರ್ಮಕ್ಕಿಂತಲೂ ಹೆಚ್ಚು ಕ್ರಿಕೆಟ್‌ ಅನ್ನು ಪ್ರೀತಿಸುವ ಕೋಟ್ಯಂತರ ಜನ ದೇಶದಲ್ಲಿದ್ದಾರೆ,

Advertisement

ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಕ್ರಿಕೆಟಿಗರಿಗೂ ಕೋಟ್ಯಂತರ ರೂ. ಹಣ ನೀಡುತ್ತಿದೆ. ವಿವಿಧ ಜಾಹೀರಾತು ಕಂಪನಿಗಳು ಸ್ಟಾರ್‌ ಕ್ರಿಕೆಟಿಗರ ಹಿಂದೆ ಒಡಂಬಡಿಕೆಗಾಗಿ ಹಿಂದೆ ಬಿದ್ದಿವೆ. ಇಷ್ಟೆಲ್ಲ ಸೌಲಭ್ಯಗಳು ಸಾಮಾನ್ಯ ಕ್ರಿಕೆಟಿಗರಿಗೆ ಸಿಕ್ಕಿರುವಾಗ ಅಂಧ ಕ್ರಿಕೆಟಿಗರು ಮಾತ್ರ ಯಾವುದೇ ಸೌಲಭ್ಯಗಳಿಲ್ಲದೆ ಇಂದಿಗೂ ಕಷ್ಟದಲ್ಲಿದ್ದಾರೆ. 

ಬಿಸಿಸಿಐ ಗೆ ಅಂಧ ಕ್ರಿಕೆಟಿಗರು ಹಲವು ಬಾರಿ ನಮಗೂ ಮಾನ್ಯತೆ ನೀಡಿ ಎನ್ನುವ ಮನವಿಯನ್ನು ಸಲ್ಲಿಸಿದ್ದಾರೆ. ಇದುವರೆಗೆ ಬಿಸಿಸಿಐನಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಕೊರತೆಗಳ ನಡುವೆಯೂ ತಮ್ಮ ಪ್ರತಿಭೆಯಿಂದಲೇ ಅಂಧ ಕ್ರಿಕೆಟಿಗರು ಗಮನ ಸೆಳೆದಿದ್ದಾರೆ. 

ಪ್ರಸ್ತುತ ಶ್ರೀಲಂಕಾದಲ್ಲಿ ಮುಕ್ತಾಯಗೊಂಡ ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತೀಯ ಅಂಧರ ಕ್ರಿಕೆಟ್‌ ತಂಡ 4-1 ಅಂತರದಿಂದ ಸರಣಿ ಗೆದ್ದು ಲಂಕಾ ನೆಲದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿ ತವರಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಧರ ತಂಡದ ಸಾಧನೆ, ಪ್ರಸ್ತುತ ತಂಡದ ಸಾಧನೆ, ಗೆದ್ದಿರುವ ವಿಶ್ವ ಅಂತಾರಾಷ್ಟ್ರೀಯ ಕೂಟಗಳು, ಮತ್ತಿತರ ಕುರಿತ ಮಾಹಿತಿ ಇಲ್ಲಿದೆ. 

ಲಂಕಾದಲ್ಲಿ ಗೆದ್ದ ಭಾರತ
 ಶ್ರೀಲಂಕಾ ವಿರುದ್ಧ ಕೂಟದ ಆರಂಭದ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಲಂಕಾ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತ್ತು. ಆದರೆ ಆನಂತರ ನಡೆದ ಎರಡು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಭಾರತೀಯರು 2-1 ಅಂತರದ ಮುನ್ನಡೆ ಪಡೆದರು. ಸರಣಿ ಜಯಿಸುವ ಕನಸನ್ನು ಚಿಗುರಿಸಿಕೊಂಡಿದ್ದರು. ಅಂತಿಮವಾಗಿ ಮುಂದಿನ ಎರಡೂ ಪಂದ್ಯಗಳು ಲಂಕಾಕ್ಕೆ ಮಹತ್ವದ್ದು ಎನಿಸಿಕೊಂಡಿದ್ದವು. ಆದರೆ ಭಾರತೀಯ ಅಂಧ ಕ್ರಿಕೆಟಿಗರು ಲಂಕಾದ ಕನಸನ್ನು ಭಗ್ನಗೊಳಿಸಿ ಎರಡೂ ಪಂದ್ಯವನ್ನು ಗೆದ್ದರು. ಈ ಮೂಲಕ ಮೊದಲ ಟಿ20 ಸರಣಿ 4-1ರಿಂದ ತನ್ನದಾಗಿಸಿಕೊಂಡರು. ವಿಜೇತ ಭಾರತ ತಂಡಕ್ಕೆ ಶ್ರೀಲಂಕಾ ಕ್ರಿಕೆಟ್‌ ದಂತಕಥೆ ಅರ್ಜುನ್‌ ರಣತುಂಗಾ ಪ್ರಶಸ್ತಿ ವಿತರಿಸಿದರು. 

Advertisement

 40 ಓವರ್‌ಗಳಲ್ಲಿ 2 ಸಲ ಚಾಂಪಿಯನ್ಸ್‌
 ಭಾರತ ಅಂಧರ ತಂಡ ಒಟ್ಟಾರೆ 40 ಓವರ್‌ಗಳ ವಿಶ್ವಕಪ್‌ನಲ್ಲಿ 5 ಸಲ ವಿಶ್ವಕಪ್‌ನಲ್ಲಿ ಭಾಗವಹಿಸಿದೆ. ಇದರಲ್ಲಿ ಎರಡು ಸಲ ಚಾಂಪಿಯನ್‌ ಆಗಿದೆ, ಮೊತ್ತ ಮೊದಲು 40 ಓವರ್‌ ವಿಶ್ವಕಪ್‌ ಕೂಟದಲ್ಲಿ ಪಾಲ್ಗೊಂಡಿದ್ದು 1998ರಲ್ಲಿ. ಭಾರತ ತಂಡ ಈ ಕೂಟದಲ್ಲಿ ಸೆಮಿಫೈನಲ್‌ ತನಕ ಪ್ರವೇಶ ಮಾಡಿತ್ತು. 2002ರಲ್ಲಿ ಗುಂಪು ಹಂತದಲ್ಲಿ ನಿರ್ಗಮಿಸಿತ್ತು. 2006ರಲ್ಲೂ ಭಾರತಕ್ಕೆ ಅದೃಷ್ಟ ಖುಲಾಯಿಸಲಿಲ್ಲ. ಲೀಗ್‌ನಿಂದಲೇ ಮತ್ತೂಮ್ಮೆ ಹೊರಬಿತ್ತು. ಆದರೆ 2014ರಲ್ಲಿ ಭಾರತ ಹಿಂದಿನ ಎಲ್ಲ ತಪ್ಪನ್ನು ತಿದ್ದಿಕೊಂಡು ಚೇತರಿಸಿತು, ಮೊದಲ ಸಲ 40 ಓವರ್‌ ವಿಶ್ವಕಪ್‌ ಕೂಟವನ್ನು ಮುಡಿಗೇರಿಸಿಕೊಂಡಿತು. ಅಷ್ಟೇ ಅಲ್ಲ 2018ರಲ್ಲೂ ನಡೆದ ವಿಶ್ವಕಪ್‌ ಕೂಟದಲ್ಲಿ ಭಾರತೀಯರು ಎರಡನೇ ಸಲ ಪ್ರಶಸ್ತಿ ಜಯಿಸಿಕೊಂಡರು. 

ಟಿ20ಯಲ್ಲೂ ಭಾರತವೇ ಚಾಂಪಿಯನ್‌
 2012ರಲ್ಲಿ ಮೊದಲ ಅಂಧರ ಟ20 ಕ್ರಿಕೆಟ್‌ ವಿಶ್ವಕಪ್‌ ಕೂಟವನ್ನು ಆಯೋಜಿಸಲಾಗಿತ್ತು. ಈ ಕೂಟದ ಫೈನಲ್‌ ಕಿರೀಟವನ್ನು ಭಾರತ ಗೆದ್ದುಕೊಂಡಿತು. 2017ರಲ್ಲೂ ಟಿ20 ವಿಶ್ವಕಪ್‌ ನಡೆಯಿತು. ಹಾಲಿ ಚಾಂಪಿಯನ್‌ ಹಣೆಪಟ್ಟಿಯೊಂದಿಗೆ ಕಣಕ್ಕೆ ಇಳಿದಿದ್ದ ಭಾರತ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಷ್ಟೇ ಅಲ್ಲ 2015ರಲ್ಲಿ ನಡೆದಿದ್ದ ಏಷ್ಯಾಕಪ್‌ ಅಂಧರ ಟಿ20 ಕ್ರಿಕೆಟ್‌ ಕೂಟದಲ್ಲೂ ಭಾರತ ಪ್ರಶಸ್ತಿ ಗೆದ್ದಿತ್ತು. 
ಮೂರು ಹೆಗ್ಗಳಿಕೆ: ಭಾರತ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಮೂರು ಹೆಗ್ಗಳಿಕೆ ನಿರ್ಮಿಸಿದೆ. ಮೊದಲನೆಯದ್ದು ಟಿ20 ಪ್ರಶಸ್ತಿ ಗೆದ್ದ ಮೊದಲ ಅಂಧರ ಕ್ರಿಕೆಟ್‌ ತಂಡ ಭಾರತ. ಎರಡನೆಯದ್ದು ಆತಿಥೇಯತ್ವ ವಹಿಸಿದ ಭಾರತವೇ ವಿಶ್ವಕಪ್‌ ಗೆದ್ದಿದ್ದು. ಮೊದಲ ಬಾರಿ ಟಿ20 ವಿಶ್ವಕಪ್‌ ಆಯೋಜಿಸಿದ್ದು ಭಾರತ ಎನ್ನುವುದು ಮೂರನೇ ಹೆಗ್ಗಳಿಕೆ. 

ಬಿಸಿಸಿಐನಿಂದ ಭರವಸೆ
ಅಂಧರ ಕ್ರಿಕೆಟ್‌ಗೆ ಮಾನ್ಯತೆ ನೀಡುವ ಭರವಸೆಯನ್ನು ಕಳೆದ ವರ್ಷ ಬಿಸಿಸಿಐ ನೀಡಿದೆ. ಬಿಸಿಸಿಐ ಆಡಳಿತಾಧಿಕಾರಿಗಳನ್ನು ಸಿಎಬಿಐ (ಭಾರತೀಯ ಅಂಧರ ಕ್ರಿಕೆಟ್‌ ಮಂಡಳಿ) ಅಧ್ಯಕ್ಷ ಜಿ.ಕೆ.ಮಹಾಂತೇಶ್‌ ಭೇಟಿ ನೀಡಿದ್ದರು. ಈ ವೇಳೆ ಬಿಸಿಸಿಐನಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರಕಿದೆ ಎನ್ನಲಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಎರಡು ಮೂರು ವರ್ಷಗಳಲ್ಲಿ ಅಂಧ ಕ್ರಿಕೆಟಿಗರು ಕೂಡ ಬಿಸಿಸಿಐನಿಂದ ಎಲ್ಲ ಸೌಲಭ್ಯ ಪಡೆದುಕೊಳ್ಳುವ ನಿರೀಕ್ಷೆ ಇದೆ.  

ಹೇಮಂತ್‌ ಸಂಪಾಜೆ

Advertisement

Udayavani is now on Telegram. Click here to join our channel and stay updated with the latest news.

Next