ಹೊಸದಿಲ್ಲಿ: ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಈ ಸಲದ ದೇಶಿ ಕ್ರಿಕೆಟ್ ಋತು ವಿಳಂಬವಾಗಿ ಆರಂಭಗೊಂಡಿದೆ. ಹೀಗಿದ್ದರೂ ಪ್ರತಿಷ್ಠಿತ ರಣಜಿ ಟ್ರೋಫಿ ಪಂದ್ಯಾವಳಿಯನ್ನು ನಡೆಸಲು ಬಿಸಿಸಿಐ ಪಣತೊಟ್ಟಿದೆ. ಅದರಂತೆ ಮುಂದಿನ ತಿಂಗಳಿನಿಂದ ಎರಡು ಹಂತಗಳಲ್ಲಿ ಕೂಟವನ್ನು ನಡೆಸಲು ಚಿಂತನೆ ನಡೆಸಿದೆ. ರವಿವಾರ ನಡೆಯುವ ಬಿಸಿಸಿಐ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಪ್ರಸಕ್ತ ನಡೆಯುತ್ತಿರುವ “ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ’ಯ ಬಯೋ ಬಬಲ್ ಮಾದರಿಯಂತೆ ರಣಜಿ ಕೂಟವನ್ನು ಆಯೋಜಿಸುವುದು ಬಿಸಿಸಿಐಯೋಜನೆಯಾಗಿದೆ.
“ರಣಜಿ ಕೂಟ ನಡೆಯುವುದು ಶೇ. 90ರಷ್ಟು ಖಚಿತ. ಎಲ್ಲ ಪಂದ್ಯಗಳು ಸಯ್ಯದ್ ಮುಷ್ತಾಕ್ ಅಲಿ ಕೂಟದಂತೆ ಜೈವಿಕ ಸುರಕ್ಷಾ ವಲಯದಲ್ಲಿ ನಡೆಯಲಿವೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದು ಉಲ್ಲೇಖನೀಯ. 14ನೇ ಆವೃತ್ತಿಯ ಐಪಿಎಲ್ ಕೂಟಕ್ಕೂ ಮುನ್ನ ಫೆಬ್ರವರಿ-ಮಾರ್ಚ್ ನಲ್ಲಿ ಎರಡು ತಿಂಗಳ ಕಾಲ ರಣಜಿ ಲೀಗ್ ಪಂದ್ಯಗಳನ್ನು ಆಯೋಜಿಸಿ ಬಳಿಕ ನಾಕೌಟ್ ಪಂದ್ಯಗಳನ್ನು ನಡೆಸುವುದು ಬಿಸಿಸಿಐ ಯೋಜನೆಯಾಗಿದೆ.
ಬಿಸಿಸಿಐ ಅಜೆಂಡಾ :
ಜ. 17ರ ಬಿಸಿಸಿಐ ಸಭೆಯಲ್ಲಿ ರಣಜಿ ಟ್ರೋಫಿ ಆಯೋಜನೆಯ ಜತೆಗೆ ಒಟ್ಟು 7 ಪ್ರಮುಖ ಅಜೆಂಡಾ ಗಳಿರಲಿವೆ. 2023-31ರ ಐಸಿಸಿ ವೇಳಾಪಟ್ಟಿ ಪರಿಶೀಲನೆ ಹಾಗೂ ಅವಲೋಕನ, ಮುಂದಿನ ವರ್ಷದ ಐಪಿಎಲ್‌ನಲ್ಲಿ ತಂಡಗಳನ್ನು 10ಕ್ಕೆ ಏರಿಸುವ ನಿಟ್ಟಿನಲ್ಲಿ ಹೆಚ್ಚಿನ ಅವಧಿ ಮೀಸಲಿಡುವುದು, ಟಿ20 ವಿಶ್ವಕಪ್ ತೆರಿಗೆ ವಿನಾಯಿತಿ, ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕಟ್ಟಡದ ಪ್ರಗತಿ ಬಗ್ಗೆಯೂ ಮಾತುಕತೆ ನಡೆಯಲಿದೆ.