Advertisement

ಲೀಗ್‌ ಆಯೋಜನೆ: ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ  ಮಾರ್ಗಸೂಚಿ

06:00 AM Jul 05, 2018 | |

ಮುಂಬಯಿ: ರಾಜ್ಯ ಮಟ್ಟದ ಕ್ರಿಕೆಟ್‌ ಟಿ20 ಲೀಗ್‌ಗಳ ಆಯೋಜನೆಗೆ ಸಂಬಂಧಿಸಿದಂತೆ ದೇಶದ ಎಲ್ಲ ರಾಜ್ಯ ಮಟ್ಟದ ಕ್ರಿಕೆಟ್‌ ಸಂಸ್ಥೆಗಳಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಹೊಸ ಮಾರ್ಗ ಸೂಚಿಗಳನ್ನು ನೀಡಿದೆ. ಲೀಗ್‌ಗಳ ಆಯೋಜನೆಯನ್ನು ಬೇಕೆಂದಾಗ ಆಯೋಜಿಸುವ ಸ್ವಾತಂತ್ರ್ಯಕ್ಕೆ, ಲೀಗ್‌ಗಳ ಪಂದ್ಯಗಳಿಗೆ ಸಹಾಯಕ ಸಿಬಂದಿಯಾಗಿ ಹೊರ ರಾಜ್ಯದವರು ಬರುವ ಸಂಪ್ರದಾಯಕ್ಕೆ ಬ್ರೇಕ್‌ ಸೇರಿದಂತೆ ಹಲವಾರು ನಿರ್ಧಾರಗಳನ್ನು ತೆಗೆದುಕೊಂಡಿದೆ.

Advertisement

ಏನಿದೆ ಮಾರ್ಗಸೂಚಿಯಲ್ಲಿ?
ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸುವ ಲೀಗ್‌ಗಳಲ್ಲಿ ಹೊರ ರಾಜ್ಯದ ಆಟಗಾರರಿಗೆ ಅವಕಾಶವಿಲ್ಲ. ಲೀಗ್‌ನಲ್ಲಿ ಭಾಗವಹಿಸುವ ತಂಡಗಳ ತರಬೇತುದಾರರು, ಅಂಪಾಯರ್‌ಗಳು, ರೆಫ್ರಿಗಳು ಸೇರಿದಂತೆ ಎಲ್ಲ ಸಹಾಯಕ ಸಿಬಂದಿಯೂ ಸಂಬಂಧ ಪಟ್ಟ ರಾಜ್ಯದವರೇ ಆಗಿರಬೇಕು. ಲೀಗ್‌ಗಳನ್ನು ಯಾವಾಗಬೇಕೆಂದರೆ ಆಗ ಆಯೋಜಿಸುವ ಸ್ವಾತಂತ್ರ್ಯವಿಲ್ಲ. ಯಾವುದೇ ರಾಜ್ಯ ಮಟ್ಟದ ಲೀಗ್‌, ಐಪಿಎಲ್‌ ವೇಳೆ ಆಯೋಜನೆಗೊಳ್ಳುವಂತಿಲ್ಲ. ಐಪಿಎಲ್‌ಗಿಂತ ಮುಂಚಿನ 15 ದಿನ ಅಥವಾ ಐಪಿಎಲ್‌ ಅನಂತರದ 15 ದಿನಗಳವರೆಗೆ ಲೀಗ್‌ ಆಯೋಜನೆ ಕೂಡದು ಎಂದು ಬಿಸಿಸಿಐ ಮಾರ್ಗಸೂಚಿ ಹೊರಡಿಸಿದೆ.

ಉಡುಗೊರೆ ಪಡೆದರೆ ಎಚ್ಚರ!
ರಾಜ್ಯ ಮಟ್ಟದ ಕ್ರಿಕೆಟ್‌ ಲೀಗ್‌ಗಳಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳುವ ನಿಟ್ಟಿನಲ್ಲಿ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳ, ಪ್ರತಿ ಲೀಗ್‌ಗೆ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಿದೆ. ಲೀಗ್‌ ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಎಲ್ಲ ದ್ವಾರಗಳಿಗೆ, ಆಟಗಾರರ ಪೆವಿಲಿಯನ್‌, ಪಂದ್ಯದ ಅಧಿಕಾರಿಗಳ ಪ್ರಾಂತ್ಯಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಗೆ ಸೂಚಿಸಲಾಗಿದ್ದು, ತಂಡಗಳ ಮಾಲಕರು ಹಾಗೂ ಸಂಬಂಧಿಗಳಿಗೆ ಪಿಎಂಒಎಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಆಟಗಾರರು 30 ಸಾವಿರ ರೂ.ಗಿಂತ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ಪಡೆದರೆ ಅದನ್ನು ಕಡ್ಡಾಯವಾಗಿ ಮಂಡಳಿಯ ಗಮನಕ್ಕೆ ತರಬೇಕೆಂದು ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next