ಮುಂಬೈ: ಹಲವು ದಿನಗಳ ಊಹಾಪೋಹಗಳು ಕೊನೆಗೂ ನಿಜವಾಗಿದೆ. ಟಿ20 ಬಳಿಕ ಏಕದಿನ ತಂಡದ ನಾಯಕತ್ವವನ್ನೂ ರೋಹಿತ್ ಶರ್ಮಾಗೆ ನೀಡಲಾಗಿದೆ. ವಿರಾಟ್ ಕೊಹ್ಲಿ ಅವರನ್ನು ಸೀಮಿತ ಓವರ್ ನ ನಾಯಕತ್ವದಿಂದ ಕೆಳಗಿಳಿಸಿ ಟೆಸ್ಟ್ ಜವಾಬ್ದಾರಿ ಮಾತ್ರ ನೀಡಲಾಗಿದೆ.
ವರದಿಗಳ ಪ್ರಕಾರ, ಬಿಸಿಸಿಐನ ಆಯ್ಕೆ ಸಮಿತಿಯು ವಿರಾಟ್ ಕೊಹ್ಲಿಗೆ ಏಕದಿನ ನಾಯಕತ್ವದಿಂದ ಕೆಳಗಿಳಿಯಲು 48 ಗಂಟೆಗಳ ಕಾಲಾವಕಾಶ ನೀಡಿದೆ. ವಿರಾಟ್ ತಾನಾಗಿಯೇ ಏಕದಿನ ನಾಯಕತ್ವ ತ್ಯಜಿಸುವ ಘೋಷಣೆ ಮಾಡಬೇಕು ಎಂದು ಬಿಸಿಸಿಐ ಇಚ್ಛಿಸಿತ್ತು. ಆದರೆ ವಿರಾಟ್ ಕೊಹ್ಲಿ ಸತತ ಎರಡು ದಿನಗಳವರೆಗೆ (48 ಗಂಟೆಗಳ) ಪ್ರತಿಕ್ರಿಯಿಸದ ಕಾರಣ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾಗೆ ಸ್ಥಾನ ನೀಡಲು ನಿರ್ಧರಿಸಿತು.
ಬುಧವಾರ ಬಿಸಿಸಿಐ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲೂ ವಿರಾಟ್ ಕೊಹ್ಲಿಯ ಯಾವುದೇ ಹೇಳಿಕೆಯನ್ನು ಉಲ್ಲೇಖ ಮಾಡಲಾಗಿಲ್ಲ. ಏಕದಿನ ಮತ್ತು ಟಿ20 ತಂಡಗಳ ನಾಯಕನಾಗಿ ರೋಹಿತ್ ಶರ್ಮಾ ಅವರನ್ನು ಹೆಸರಿಸಲು ಆಯ್ಕೆ ಸಮಿತಿಯು ನಿರ್ಧರಿಸಿದೆ ಎಂದಷ್ಟೇ ಹೇಳಲಾಗಿದೆ.
ಇದನ್ನೂ ಓದಿ:ಏಕದಿನ ನಾಯಕತ್ವ , ಟೆಸ್ಟ್ ಉಪನಾಯಕತ್ವ ರೋಹಿತ್ ಪಾಲು
2023ರ ಏಕದಿನ ವಿಶ್ವಕಪ್ ವರೆಗೆ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ನಾಯಕನಾಗಿರುತ್ತಾರೆ ಎನ್ನಲಾಗಿದೆ. ಸದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಕಟಿಸದ ಕಾರಣ ಉಪ ನಾಯಕನ ಘೋಷಣೆ ಇನ್ನೂ ಆಗಿಲ್ಲ.