Advertisement

ಕ್ರಿಕೆಟಿಗ ಜೇಕಬ್‌ ಮಾರ್ಟಿನ್‌ ಚಿಕಿತ್ಸೆಗೆ ಬಿಸಿಸಿಐ ಆರ್ಥಿಕ ನೆರವು

12:30 AM Jan 22, 2019 | |

ವಡೋದರ: ರಸ್ತೆ ಅಪಘಾತಕ್ಕೆ ಸಿಲುಕಿ ಇಲ್ಲಿನ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಮಾಜಿ ಕ್ರಿಕೆಟಿಗ ಜೇಕಬ್‌ ಮಾರ್ಟಿನ್‌ ಚಿಕಿತ್ಸೆಗೆ ಬಿಸಿಸಿಐ ಮತ್ತು ಬರೋಡ ಕ್ರಿಕೆಟ್‌ ಮಂಡಳಿ ಆರ್ಥಿಕ ನೆರವು ಘೋಷಿಸಿವೆ.

Advertisement

ದಯವಿಟ್ಟು ತನ್ನ ಪತಿಯ ಜೀವ ಉಳಿಸಲು ನೆರವಾಗಿ ಎಂಬ ಜೇಕಬ್‌ ಮಾರ್ಟಿನ್‌ ಅವರ ಪತ್ನಿಯ ವಿನಂತಿಗೆ ಕ್ರಿಕೆಟ್‌ ಮಂಡಳಿಗಳು ಸ್ಪಂದಿಸಿವೆ. ಬಿಸಿಸಿಐ 5 ಲಕ್ಷ ರೂ. ಹಾಗೂ ಬರೋಡ ಕ್ರಿಕೆಟ್‌ ಮಂಡಳಿ 3 ಲಕ್ಷ ರೂ. ನೆರವು ನೀಡಿವೆ. ಅಗತ್ಯ ಬಿದ್ದರೆ ಮಾರ್ಟಿನ್‌ ಚಿಕಿತ್ಸೆಗೆ ಇನ್ನೂ ಹೆಚ್ಚಿನ ನೆರವು ನೀಡಲಾಗುವುದು ಎಂದು ಬರೋಡ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಸಂಜಯ್‌ ದೇಸಾಯಿ ತಿಳಿಸಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಕೂಡ ಮಾರ್ಟಿನ್‌ ಕುಟುಂಬಕ್ಕೆ ನೆರವು ನೀಡುವುದಾಗಿ ಹೇಳಿದ್ದಾರೆ. ಪಠಾಣ್‌ ಸೋದರರು, ಜಹೀರ್‌ ಖಾನ್‌, ಮುನಾಫ್ ಪಟೇಲ್‌ ಕೂಡ ಮಾರ್ಟಿನ್‌ಗೆ ಆರ್ಥಿಕ ನೆರವು ಒದಗಿಸುವುದಾಗಿ ಹೇಳಿದ್ದಾರೆ.

10 ಏಕದಿನ ಪಂದ್ಯ
ಬರೋಡ ಕ್ರಿಕೆಟಿಗನಾಗಿರುವ ಜೇಕಬ್‌ ಮಾರ್ಟಿನ್‌ ಭಾರತದ ಪರ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಗಂಗೂಲಿ ಸಾರಥ್ಯದ ವೇಳೆಯೇ ಮಾರ್ಟಿನ್‌ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. ಮಾರ್ಟಿನ್‌ 5 ಏಕದಿನ ಪಂದ್ಯಗಳನ್ನು ಗಂಗೂಲಿ ನಾಯಕತ್ವದಲ್ಲಿ, ಉಳಿದ 5 ಪಂದ್ಯಗಳನ್ನು ಸಚಿನ್‌ ತೆಂಡುಲ್ಕರ್‌ ನಾಯಕತ್ವದಲ್ಲಿ ಆಡಿದ್ದರು. ಗಳಿಸಿದ ಒಟ್ಟು ರನ್‌ 158.

ರಣಜಿಯಲ್ಲಿ ಬರೋಡ ಜತೆಗೆ ರೈಲ್ವೇಸ್‌ ತಂಡವನ್ನೂ ಪ್ರತಿನಿಧಿಸಿದ್ದರು. ಬರೋಡ ರಣಜಿ ಟ್ರೋಫಿ ವಿಜೇತ ತಂಡದ ನಾಯಕನೆಂಬುದು ಮಾರ್ಟಿನ್‌ ಪಾಲಿನ ಹೆಗ್ಗಳಿಕೆ.ಡಿ. 28ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ 46ರ ಹರೆಯದ ಜೇಕಬ್‌ ಮಾರ್ಟಿನ್‌ ಗಂಭೀರ ಸ್ವರೂಪದ ಗಾಯಕ್ಕೊಳಗಾಗಿದ್ದರು. ಅವರ ಶ್ವಾಸಕೋಶ ಮತ್ತು ಕರುಳಿಗೆ ಹಾನಿಯಾಗಿದ್ದು, ಸದ್ಯ ಕೃತಕ ಉಸಿರಾಟದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next