ನವದೆಹಲಿ: ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ತರಬೇತುದಾರದಾಗಿದ್ದ ರಾಹುಲ್ ದಾವಿಡ್ ಅವರು ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಬುಧವಾರ(ನ.29 ರಂದು) ಹೇಳಿದೆ.
2021 ರ ನವೆಂಬರ್ ನಲ್ಲಿ ಭಾರತದ ಪುರಷರ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು. ಇವರ ಅಧಿಕಾರವಧಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿತ್ತು. 2023ರ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಗೆ ಪ್ರವೇಶ ಮಾಡಿ ಟೀಮ್ ಇಂಡಿಯಾ ರನ್ನರ್ ಅಪ್ ಆಗಿತ್ತು. ಇದರ ಜೊತೆ ಇತ್ತೀಚೆಗೆ ಮುಕ್ತಾಯ ಕಂಡ ಏಕದಿನ ವಿಶ್ವಕಪ್ ನಲ್ಲೂ ಭಾರತ ಅಮೋಘ ಪ್ರದರ್ಶನ ನೀಡಿ, ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಅಪ್ ಆಗಿತ್ತು.
ವಿಶ್ವಕಪ್ ಮುಗಿದ ಬಳಿಕ ರಾಹುಲ್ ದ್ರಾವಿಡ್ ಅವರ ಕೋಚ್ ಹುದ್ದೆಯ ಅವಧಿ ಮುಗಿದಿತ್ತು. ಈ ಬಗ್ಗೆ ಬಿಸಿಸಿಐ ರಾಹುಲ್ ಅವರನ್ನೇ ಹೆಡ್ ಕೋಚ್ ಆಗಿ ಮುಂದಿನ ಎರಡು ವರ್ಷಗಳ ಮುಂದುವರೆಸುವ ಒಲವು ತೋರಿತ್ತು.
ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಸಭೆ ನಡೆಸಿ, ರಾಹುಲ್ ಅವರನ್ನೇ ಮುಖ್ಯ ಕೋಚ್ ಆಗಿ ಮುಂದುವರೆಸುವುದಾಗಿ ಹೇಳಿ, ಅವರ ಅಧಿಕಾರವಧಿಯನ್ನು ಎರಡು ವರ್ಷಕ್ಕೆ ವಿಸ್ತರಣೆ ಮಾಡಿದೆ.
ಈ ಹಿಂದೆ ರಾಹುಲ್ ಹುದ್ದೆ ಮುಗಿದ ಬಳಿಕ ಹಿರಿಯರ ಪುರುಷರ ತಂಡಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಬರಲಿದ್ದಾರೆ ಎಂದು ವರದಿಯಾಗಿತ್ತು.