Advertisement

ಬಿಸಿಸಿಐಗೆ ಆಡಳಿತಾಧಿಕಾರಿಗನ್ನು ನೇಮಿಸಿದ ಸುಪ್ರೀಂ

03:45 AM Jan 31, 2017 | Team Udayavani |

ಹೊಸದಿಲ್ಲಿ: ಕೊನೆಗೂ ಬಿಸಿಸಿಐಗೆ ಹೊಸ ಆಡಳಿತಾಧಿಕಾರಿಗಳ ನೇಮಕವಾಗಿದೆ. ಸೋಮವಾರದ ಬೆಳವಣಿಗೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಾಜಿ ಲೆಕ್ಕ ಪರಿಶೋಧಕ (ಸಿಎಜಿ), 2ಜಿ ಸ್ಪೆಕ್ಟ್ರಂ ಹಗರಣವನ್ನು ಬಯಲಿಗೆ ತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿನೋದ್‌ ರಾಯ್‌ ಅವರನ್ನು ಬಿಸಿಸಿಐ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದೆ. ಮಾಜಿ ಭಾರತ ಕ್ರಿಕೆಟ್‌ ತಂಡದ ನಾಯಕಿ ಡಯಾನಾ ಎಡುಲ್ಜಿ, ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಐಡಿಎಫ್ಸಿ ಆಡಳಿತ ನಿರ್ದೇಶಕ ವಿಕ್ರಮ್‌ ಲಿಮಯೆ ಅವರನ್ನು ಸದಸ್ಯರನ್ನಾಗಿ ನೇಮಿಸಿದೆ.

Advertisement

ಸೋಮವಾರ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿದಸ್ಯ ಪೀಠ ಹಲವು ವಿಚಾರವನ್ನು ಚರ್ಚಿಸಿತು. ಈ ವೇಳೆ ಮುಂದಿನ ಚುನಾವಣೆ ನಡೆದು ಬಿಸಿಸಿಐಗೆ ಹೊಸ ಅಧಿಕಾರಿಗಳ ನೇಮಕವಾಗುವವರೆಗೆ ವಿನೋದ್‌ ರಾಯ್‌ ಮತ್ತು ಸಮಿತಿ ಬಿಸಿಸಿಐಯ ಎಲ್ಲ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳಬೇಕು ಎಂದು ಸೂಚಿಸಿತು.

ಆಡಳಿತಾಧಿಕಾರಿಗಳ ಅನುಮತಿ ಅಗತ್ಯ
ಹೊಸದಾಗಿ ನೇಮಕವಾದ ಆಡಳಿತಾಧಿಕಾರಿ ಮತ್ತು ಸಮಿತಿ ಜತೆಗೆ ಬಿಸಿಸಿಐ ಸಿಇಒ (ಮುಖ್ಯ ಕಾರ್ಯನಿರ್ವಹಣಾಧಿಕಾರಿ) ರಾಹುಲ್‌ ಜೊಹ್ರಿ ಜತೆಗೆ ಸಮಾಲೋಚನೆ ನಡೆಸಿ ಕ್ರಿಕೆಟ್‌ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳಬೇಕು. ಆಡಳಿತ ವಿಷಯಕ್ಕೆ ಸಂಬಂಧಪಟ್ಟಂತೆ ಬಿಸಿಸಿಐ ಕಾರ್ಯನಿರ್ವಹಣಾಧಿಕಾರಿ ಯಾವುದೇ ತೀರ್ಮಾನ ತೆಗೆದುಕೊಳ್ಳಬೇಕಿದ್ದರೂ ಆಡಳಿತಾಧಿಕಾರಿಗಳ ಅನುಮತಿ ಪಡೆಯಬೇಕು. ಬಿಸಿಸಿಐಗೆ ಸಂಬಂಧ ಪಟ್ಟ ಎಲ್ಲ ವರದಿಯನ್ನು ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿಗಳಿಗೆ ತೋರಿಸಬೇಕು. ಲೋಧಾ ಶಿಫಾರಸು ಜಾರಿಗೆ ತರುವುದರ ಕುರಿತು ಸಮಿತಿ ಜತೆ ಬಿಸಿಸಿಐ ಸಿಇಒ ಚರ್ಚೆ ನಡೆಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿತು. ಮುಂದಿನ 4 ವಾರಗಳ ಒಳಗಾಗಿ ಲೋಧಾ ಶಿಫಾರಸು ಬಿಸಿಸಿಐನಲ್ಲಿ ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗಿದೆ ಎನ್ನುವುದರ ಬಗ್ಗೆ ಆಡಳಿತಾಧಿಕಾರಿಗಳು ವರದಿ ನೀಡಬೇಕು ಎಂದೂ ನ್ಯಾಯಾಲಯ ಸೂಚಿಸಿದೆ.

ಐಸಿಸಿ ಸಭೆಗೆ ಜಂಟಿ ಕಾರ್ಯದರ್ಶಿ ಅಮಿತಾಭ್‌
ಆಡಳಿತಾಧಿಕಾರಿ ವಿಚಾರಣೆ ಸಂಬಂಧವಾಗಿ ಸರ್ವೋಚ್ಚ ನ್ಯಾಯಾಲಯ ಅಮಿಕಸ್‌ ಕ್ಯೂರಿ ನೀಡಿದ್ದ ಪಟ್ಟಿ, ಬಿಸಿಸಿಐ ಮತ್ತು ಕೇಂದ್ರ ನೀಡಿದ ಪಟ್ಟಿಯನ್ನು ಪರಿಷ್ಕರಣೆ ನಡೆಸಿತು. ಬಿಸಿಸಿಐ ಪರ ಹಿರಿಯ ವಕೀಲ ಅರವಿಂದ್‌ ದತ್ತಾರ್‌ ಐಸಿಸಿ ಸಭೆಗೆ ಕೆಲ ಸದಸ್ಯರ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಈ ಪಟ್ಟಿಯನ್ನು ಪರಿಶೀಲಿಸಿದ ನ್ಯಾಯಾಲಯ,  ಐಸಿಸಿ ಸಭೆಗೆ ಬಿಸಿಸಿಐ ಜಂಟಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಹೆಸರನ್ನು ಅಂತಿಮಗೊಳಿಸಿತು. ಫೆಬ್ರವರಿ 2ನೇ ವಾರದಲ್ಲಿ ಐಸಿಸಿ ಸಭೆ ದುಬಾೖಯಲ್ಲಿ ನಡೆಯಲಿದೆ.

ರೋಹrಗಿ ಮನವಿ ತಿರಸ್ಕರಿಸಿದ ನ್ಯಾಯಾಲಯ
ಕೇಂದ್ರ ಸರಕಾರದ ಅಟಾರ್ನಿ ಜನರಲ್‌ ಮುಕುಲ್‌ ರೋಹrಗಿ ಆರಂಭದಿಂದಲೂ ಬಿಸಿಸಿಐ ಪರ ಬ್ಯಾಟಿಂಗ್‌ ನಡೆಸುತ್ತ ಬಂದವರು. ಸೋಮವಾರದ ವಿಚಾರಣೆ ವೇಳೆ ಅವರು ಕೇಂದ್ರ ಕ್ರೀಡಾ ಇಲಾಖೆಯ ಕಾರ್ಯದರ್ಶಿಯನ್ನು ಆಡಳಿತಾಧಿಕಾರಿಯಾಗಿ ನೇಮಕ  ಮಾಡಬೇಕು ಎಂದು ವಾದ ನಡೆಸಿದ್ದರು. ಈ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿತು. ಜು. 18ರಂದು ಯಾವ ಆದೇಶ ಹೊರಡಿಸಲಾಗಿತ್ತೋ ಆ ತೀರ್ಮಾನಕ್ಕೆ ನ್ಯಾಯಾಲಯ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿತು. ಸರಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಬಿಸಿಸಿಐನಲ್ಲಿ ಹುದ್ದೆ ಹೊಂದುವಂತಿಲ್ಲ ಎನ್ನುವುದನ್ನು ಹಿಂದೆಯೆ ನ್ಯಾಯಾಲಯ ಸ್ಪಷ್ಟಪಡಿಸಿತ್ತು.

Advertisement

2 ಬಾರಿ ವಿಚಾರಣೆ ಮುಂದೂಡಿದ್ದ ನ್ಯಾಯಾಲಯ
ಈ ಹಿಂದೆ ನ್ಯಾಯಾಲಯ 2 ಬಾರಿ ಬಿಸಿಸಿಐ ಆಡಳಿತಾಧಿಕಾರಿಗಳ ನೇಮಕ ವಿಚಾರಣೆಯನ್ನು ಮುಂದೂಡಿತ್ತು. ಅಮಿಕಸ್‌ ಕ್ಯೂರಿಗಳಾಗಿ ವಕೀಲ ಗೋಪಾಲ ಸುಬ್ರಹ್ಮಣ್ಯಂ, ಅನಿಲ್‌ ದಿವಾನ್‌ ಅವರನ್ನು ನೇಮಿಸಿತ್ತು. ಆಡಳಿತಾಧಿಕಾರಿಗಳ ನೇಮಕಕ್ಕೆ ಹೆಸರುಗಳನ್ನು ನೀಡುವಂತೆ ನ್ಯಾಯಾಲಯ ಸೂಚಿಸಿತ್ತು. ಈ ಸೂಚನೆ ಮೇರೆಗೆ ಅಮಿಕಸ್‌ ಕ್ಯೂರಿ 9 ಮಂದಿ ಆಡಳಿತಾಧಿಕಾರಿಗಳ ಹೆಸರನ್ನು ಶಿಫಾರಸು ಮಾಡಿ ಮುಚ್ಚಿದ ಲಕೋಟೆಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದನ್ನು ಜ. 24ರಂದು ನ್ಯಾಯಾಲಯ ಪರಿಶೀಲನೆ ನಡೆಸಿತ್ತು. ಪಟ್ಟಿ ಉದ್ದವಾಯಿತು, ಚುಟುಕುಗೊಳಿಸಿ ಎಂದು ಸೂಚಿಸಿತ್ತು. ಇದೇ ವೇಳೆ ನ್ಯಾಯಾಲಯ 70 ವರ್ಷ ಮೀರಿದವರಿಗೆ ಬಿಸಿಸಿಐನಲ್ಲಿ ಆಡಳಿತ ನಡೆಸುವ ಅಧಿಕಾರ ಇಲ್ಲ ಎನ್ನುವುದನ್ನು ಪುನರುಚ್ಚರಿಸಿತ್ತು.

ಬಿಸಿಸಿಐ, ಕೇಂದ್ರಕ್ಕೆ ಸೂಚನೆ ನೀಡಿದ್ದ ಸುಪ್ರೀಂ
ಬಿಸಿಸಿಐ ಆಡಳಿತಾಧಿಕಾರಿಗಳ ನೇಮಕ ಸಂಬಂಧ ಪಟ್ಟಂತೆ ಸೂಕ್ತ ಹೆಸರುಗಳನ್ನು ನೀಡುವಂತೆ ನ್ಯಾಯಾಲಯ ಬಿಸಿಸಿಐ, ಕೇಂದ್ರಕ್ಕೆ ಸೂಚನೆ ನೀಡಿತ್ತು. ಜ. 27ರೊಳಗೆ ಮುಚ್ಚಿದ ಲಕೋಟೆಯಲ್ಲಿ ಹೆಸರುಗಳನ್ನು ನೀಡಬೇಕು ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಒಳಗೊಂಡ ತ್ರಿಸದಸ್ಯ ಪೀಠ ಆದೇಶ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next