ಮುಂಬಯಿ: ಮುಂದಿನ ಜನವರಿಯಲ್ಲಿ ಧೋನಿ ಸಕ್ರಿಯ ಕ್ರಿಕೆಟ್‌ಗೆ ಮರಳುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದ ಬೆನ್ನಲ್ಲೇ, ಅವರಿಗೆ ಬಿಸಿಸಿಐ ಆಘಾತ ನೀಡಿದೆ. “ಧೋನಿ ಯೋಚನೆಯನ್ನು ಬಿಟ್ಟು ಮುಂದುವರಿದಿದ್ದೇವೆ. ಅವರ ಜಾಗದಲ್ಲಿ ರಿಷಭ್ ಪಂತ್‌ಗೆ ಗರಿಷ್ಠ ಅವಕಾಶ ನೀಡಲು ತೀರ್ಮಾನಿಸಿದ್ದೇವೆ’ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಪ್ರಸಾದ್ ಹೇಳಿದ್ದಾರೆ. ಈ ಮಾತಿನ ಮೂಲಕ, ಧೋನಿ ಮತ್ತೆ ಭಾರತ ತಂಡಕ್ಕೆ ಮರಳುವುದು ಕಷ್ಟ ಎಂಬ ಸ್ಪಷ್ಟ ಸುಳಿವು ನೀಡಿದ್ದಾರೆ.
ಧೋನಿಗೆ ನೇರ ಆಯ್ಕೆ ಸಾಧ್ಯವಿಲ್ಲ, ಅವರು ಯುವ ಆಟಗಾರರೊಂದಿಗೆ ಪೈಪೋಟಿ ನಡೆಸಿಯೇ ಮೈದಾನಕ್ಕೆ ಮರಳಬೇಕು ಎನ್ನುವುದು ಇದರ ಹಿಂದಿನ ಸಂದೇಶ. ಇನ್ನೊಂದು ರೀತಿಯಲ್ಲಿ ಧೋನಿಗೆ ಸಂಪೂರ್ಣ ಬಾಗಿಲು ಮುಚ್ಚಿದರೂ ಅಚ್ಚರಿಯಿಲ್ಲ.
“ನಾನು ಈ ವಿಚಾರದಲ್ಲಿ ಬಹಳ, ಬಹಳ ಸ್ಪಷ್ಟವಾಗಿ ದ್ದೇನೆ. ವಿಶ್ವಕಪ್ ಅನಂತರ ನಾವು ರಿಷಭ್ ಪಂತ್ ಬೆನ್ನಿಗೆ ನಿಂತಿದ್ದೇವೆ. ಕೆಲವು ಹಂತದಲ್ಲಿ ರಿಷಭ್ ಉತ್ತಮ ವಾಗಿ ಆಡಿಲ್ಲದಿರಬಹುದು. ಆದರೆ ಅವರೊಬ್ಬ ಅತ್ಯುತ್ತಮ ಆಟಗಾರ. ರಿಷಭ್ ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳುತ್ತಾರೆಂಬ ಖಚಿತ ಭರವಸೆ ನಮಗಿದೆ’ ಎಂದು ಪ್ರಸಾದ್ ಹೇಳಿದ್ದಾರೆ.
ಧೋನಿ ಆಯ್ಕೆಯ ಬಗ್ಗೆ ಕೇಳಿದ ಪತ್ರಕರ್ತರಿಗೆ ನೇರವಾಗಿ ಪ್ರಸಾದ್ ಉತ್ತರಿಸಿದರು. ನಾವು ಮುಂದಿನ ದಾರಿ ಹಿಡಿದು ಹೊರಟಿದ್ದೇವೆ. ಆದ್ದರಿಂದಲೇ ಕಿರಿಯರಿಗೆ ಅವಕಾಶ ನೀಡುತ್ತಿದ್ದೇವೆ. ನಮ್ಮ ಮಾತನ್ನು ನೀವು ಅರ್ಥ ಮಾಡಿಕೊಳ್ಳುತ್ತೀರೆಂದು ಬಯಸುತ್ತೇನೆ ಎಂದರು.