ಮುಂಬೈ: ಆ್ಯಂಟಿಗಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಭಾರತೀಯ ಅಂಡರ್ 19 ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಗದು ಬಹುಮಾನವನ್ನು ಘೋಷಿಸಿದೆ.
ಯಶ್ ಧುಲ್ ನೇತೃತ್ವದಲ್ಲಿ, ಭಾರತವು 4 ವಿಕೆಟ್ ಮತ್ತು 14 ಎಸೆತ ಬಾಕಿ ಇರುವಂತೆ 190 ರನ್ ಚೇಸ್ ಮಾಡಿ ದಾಖಲೆಯ 5 ನೇ ಬಾರಿಗೆ ಅಂಡರ್ 19 ವಿಶ್ವಕಪ್ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿತು.
ದೊಡ್ಡ ಫೈನಲ್‌ನಲ್ಲಿ ಭಾರತ ಜಯ ಸಾಧಿಸಿದ ಕೂಡಲೇ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಮಾಧ್ಯಮದಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಸದಸ್ಯರಿಗೆ ನಗದು ಬಹುಮಾನವನ್ನು ಘೋಷಿಸಿದರು. ಪ್ರತಿ ಆಟಗಾರನಿಗೆ 40 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ 25 ಲಕ್ಷ ರೂ. ಬಹುಮಾನವನ್ನು ಅವರು ಘೋಷಿಸಿದ್ದಾರೆ.
“ಅಂಡರ್ 19 ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಭಾರತ ತಂಡಕ್ಕೆ ಪ್ರತಿ ಆಟಗಾರನಿಗೆ 40 ಲಕ್ಷಗಳು ಮತ್ತು ಪ್ರತಿ ಸಹಾಯಕ ಸಿಬ್ಬಂದಿಗೆ 25 ಲಕ್ಷಗಳ ಬಹುಮಾನವನ್ನು ಘೋಷಿಸಲು ನನಗೆ ಸಂತೋಷವಾಗಿದೆ. ನೀವು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ” ಎಂದು ಜಯ್ ಶಾ ತಿಳಿಸಿದ್ದಾರೆ.
Related Articles
ಇಂಗ್ಲೆಂಡ್ ತಂಡ 44.5 ಓವರ್ ಗಳಲ್ಲಿ 189 ರನ್ ಗಳಿಸಿದರೆ, ಭಾರತ ಈ ಗುರಿಯನ್ನು 47.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಮತ್ತೊಂದು ಕಪ್ ಗೆದ್ದುಕೊಂಡಿತು.
ಇದನ್ನೂ ಓದಿ:ಭಾರತ ಕಿರಿಯರ ತಂಡದ ಹಿರಿಯ ಸಾಧನೆ: ಅಂಡರ್ 19 ವಿಶ್ವಕಪ್ ಗೆದ್ದ ಯಶ್ ಧುಲ್ ಬಳಗ
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಶೋಚನೀಯ ಆರಂಭ ಪಡೆಯಿತು. ಭಾರತದ ಬೌಲರ್ ಗಳ ದಾಳಿಗೆ ಕುಸಿದ ಆಂಗ್ಲರು, ಕೇವಲ 47 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದರು. ನಂತರ ತಂಡವನ್ನು ಆಧರಿಸಿದ ಜೇಮ್ಸ್ 95 ರನ್ ಗಳಿಸಿದರು. ಜೇಮ್ಸ್ ಸೇಲ್ಸ್ ಅಜೇಯ 34 ರನ್ ಗಳಿಸಿದರು. ಇವರಿಬ್ಬರ ನೆರವಿನಿಂದ ಇಂಗ್ಲೆಂಡ್ ತಂಡ 150 ರ ಗಡಿ ತಲುಪಿತು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ರಾಜ್ ಬಾವ ಐದು ವಿಕೆಟ್ ಕಿತ್ತರೆ, ರವಿ ಕುಮಾರ್ ನಾಲ್ಕು ವಿಕೆಟ್ ಕಿತ್ತರು. ಒಂದು ವಿಕೆಟ್ ಕೌಶಲ್ ತಾಂಬೆ ಪಾಲಾಯಿತು.
ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ರಘುವಂಶಿ ವಿಕೆಟ್ ಕಳೆದುಕೊಂಡಿತು. ನಂತರ ಶೇಕ್ ರಶೀದ್, ನಿಶಾಂತ್ ಸಿಂಧು ಅರ್ಧಶತಕದ ನೆರವಿನಿಂದ ಗುರಿ ಬೆನ್ನತ್ತಿತು. ಇಬ್ಬರೂ ತಲಾ 50 ರನ್ ಗಳಿಸಿದರು. ಆಲ್ ರೌಂಡ್ ಪ್ರದರ್ಶನ ನೀಡಿದ ರಾಜ್ ಬಾವಾ 35 ರನ್ ಗಳಿಸಿದರು. ಕೊನೆಯಲ್ಲಿ ದಿನೇಶ್ ಬಾನಾ ಭರ್ಜರಿ ಸಿಕ್ಸರ್ ಮೂಲಕ ತಂಡಕ್ಕೆ ಜಯ ತಂದಿತ್ತರು.