ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಕೈಕಂಬದಲ್ಲಿರುವ ಮಳಿಗೆಯೊಂದರ ಮಾಲಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಕೈಕಂಬ ಸಮೀಪದ ಪರ್ಲ್ಯ ನಿವಾಸಿ, ಕೈಕಂಬದಲ್ಲಿರುವ ಲಿಬಾಸ್ ಬುರ್ಖಾ ಮಳಿಗೆಯ ಮಾಲಕ ಅಬ್ದುಲ್ ರಹ್ಮಾನ್ (36) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಎಂದಿನಂತೆ ಇಂದು ಕೂಡಾ ಅಂಗಡಿಗೆ ಬಂದಿರುವ ಅಬ್ದುಲ್ ರಹ್ಮಾನ್ ಅಂಗಡಿಯ ಒಳಗಿನ ಮೇಲಂತಸ್ತಿನಲ್ಲಿರುವ ಕೊಠಡಿಯಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಮೇಲಂತಸ್ತಿಗೆ ತೆರಳುವ ಮುನ್ನ ಅಂಗಡಿಯ ಕೆಲಸದಾಕೆಯ ಬಳಿ ತನ್ನ ಮೊಬೈಲ್ ಗೆ ಕರೆ ಬಂದರೆ ಸ್ವೀಕರಿಸದಂತೆ ಹೇಳಿ ತೆರಳಿದ್ದರು. ಕೆಲವು ಹೊತ್ತಿನ ಬಳಿಕ ನೋಡಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಉಡುಪಿ, ದ.ಕ ಪಡಿತರದಾರರಿಗೆ ಸ್ಥಳೀಯ ಕುಚ್ಚಲಕ್ಕಿಯನ್ನು ವಿತರಿಸಲು ಸಿಎಂ ಗೆ ಸಚಿವರ ಮನವಿ
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೆಲವು ದಿನಗಳಿಂದ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನಿದ್ದಾನೆ.
ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.