Advertisement

‘ಹಸಿವು ನಿವಾರಣೆಗೆ ಯೋಜನೆ ಅನುಷ್ಠಾನ’

12:04 PM Dec 10, 2018 | Team Udayavani |

ಬಂಟ್ವಾಳ: ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬುದಕ್ಕಾಗಿ ಸರಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಸಿದ್ದರಾಮಯ್ಯ ಸರಕಾರ ಸಂದರ್ಭ ಯೋಜನೆ ಬಗ್ಗೆ ನಾವೆಲ್ಲ ಕುಳಿತು ಮಾತನಾಡಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು. ಟಿ. ಖಾದರ್‌ ಅವರು ತಿಳಿಸಿದರು. ಅವರು ಡಿ. 9ರಂದು ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿ, ಬಳಿಕ ಬಿ.ಸಿ. ರೋಡ್‌ ತಾಲೂಕು ಕಚೇರಿ ಪ್ರಾಂಗಣದಲ್ಲಿ ನಡೆದ ಸಭೆಯಲ್ಲಿ ಸಾಂಕೇತಿಕವಾಗಿ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.

Advertisement

ಉದ್ಘಾಟನೆಯಲ್ಲಿ ನಡೆದಿರುವ ಗೊಂದಲಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಬಡವರು, ರಿಕ್ಷಾ ಚಾಲಕರು, ಬಸ್‌ ಕಂಡಕ್ಟರ್‌ ಮೊದಲಾದವರಿಗೆ ಕ್ಯಾಂಟೀನ್‌ನಲ್ಲಿ ಉತ್ತಮ ಗುಣಮಟ್ಟದ ತಿಂಡಿ, ಊಟ ನಿಗದಿತ ದರದಲ್ಲಿ ಮೂರು ಹೊತ್ತು ಸಿಗಲಿದೆ. ಸೋನಿಯಾ ಗಾಂಧಿ ಅವರ ಜನ್ಮ ದಿನದಂದೆ ಇಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಚಾರ ಎಂದರು.

ನಾವೆಲ್ಲ ಒಟ್ಟಾಗಿ ಕೆಲಸ
ಇಂದು ಉದ್ಘಾಟನೆ ಸಂದರ್ಭ ನಡೆದಿರುವ ಅಹಿತಕರ ವಿಚಾರವನ್ನು ಮರೆತು ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಚುನಾವಣೆ ಬಂದಾಗ ಪಕ್ಷ ರಾಜಕಾರಣ ಬರುತ್ತದೆ. ಉಳಿದಂತೆ ನಾವು ಸಹೋದರರಾಗಿ ಕೆಲಸ ಮಾಡುವ. ಶಾಂತಿ ಸಹನೆ ಇರಲಿ. ಬೊಬ್ಬೆ ಹಾಕಿದಾಗ ಓಟು ಹೆಚ್ಚು-ಕಮ್ಮಿ ಆಗುವುದಿಲ್ಲ. ಯಾರ ಮನಸ್ಸನ್ನು ನೋಯಿಸಿ ಯಾರಿಗೂ ಪ್ರಯೋಜನ ಇಲ್ಲ. ಕಾರ್ಯಕ್ರಮಕ್ಕೆ ಬರಲು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ನಾನೇ ಮನವಿ ಮಾಡಿದ್ದೇನೆ. ಅವರಿಗೆ ಸ್ವಲ್ಪ ಬೇಸರವಾಗಿದೆ. ಅದು ಶಮನ ಆದ ಬಳಿಕ ಬರಲಿದ್ದಾರೆ. ಮುಂದಕ್ಕೆ ಸಹೋದರರಂತೆ ನಡೆದುಕೊಳ್ಳುವ. ಅಭಿವೃದ್ಧಿ ವಿಚಾರದಲ್ಲಿ ನಮ್ಮಲ್ಲಿ ರಾಜಕೀಯವಿಲ್ಲ. ಕ್ಯಾಂಟೀನ್‌ ಉಪಯೋಗ ಎಲ್ಲರಿಗೂ ಸಿಗಲಿ ಎಂದು ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಸಾರ್ವಜನಿಕರ ನಡುವೆ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಉಪಸ್ಥಿತರಿದ್ದರು. ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಸಭೆಯ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. 

ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಬಿ. ಪದ್ಮಶೇಖರ ಜೈನ್‌, ಎಂ.ಎಸ್‌. ಮಹಮ್ಮದ್‌, ಮಮತಾ ಗಟ್ಟಿ, ಮಂಜುಳಾ ಮಾವೆ, ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯಕ್‌, ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಬಂಟ್ವಾಳ ತಹಶೀಲ್ದಾರ್‌ ಪುರಂದರ ಹೆಗ್ಡೆ ಸ್ವಾಗತಿಸಿ, ವಂದಿಸಿದರು. ಮಂಜು ವಿಟ್ಲ ನಿರೂಪಿಸಿದರು.

 ಶುಚಿತ್ವ ಮುಖ್ಯ
ನಿಗದಿತ ತೂಕದ ಉಪಾಹಾರ, ಊಟವನ್ನು ನೀಡಲಿದ್ದು, ಅದರ ಸಬ್ಸಿಡಿ ಹಣವನ್ನು ಸರಕಾರ ಭರಿಸುತ್ತಿದೆ. ಸಮಾಜದ ಸಂಪನ್ಮೂಲ ಎಲ್ಲರಿಗೂ ಸಮಾನವಾಗಿ ಎಲ್ಲ ವರ್ಗದವರಿಗೂ ಹಂಚಿಕೆ ಆಗಬೇಕು. ಕ್ಯಾಂಟೀನ್‌ ವ್ಯವಸ್ಥೆಯ ಬಗ್ಗೆ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ಕೇಳಿ ಬಂದಿದೆ. ಇದೊಂದು ಒಳ್ಳೆಯ ಕ್ರಮ ಎಂಬುದಾಗಿ ಎಲ್ಲರ ಅಭಿಪ್ರಾಯವಿದೆ. ಶುಚ್ಚಿತ್ವ ಕಾಪಾಡುವುದು ಮುಖ್ಯ. ಈಗ ತಾಲೂಕು ಮತ್ತು ನಗರ ಕೇಂದ್ರದಲ್ಲಿ ಕ್ಯಾಂಟೀನ್‌ ಆರಂಭವಾಗಿದೆ. ಉಳ್ಳಾಲದಲ್ಲಿ ಮಾತ್ರ ಹೋಬಳಿ ಮಟ್ಟದಲ್ಲಿ ಆಗಿದ್ದು, ಮುಂದಕ್ಕೆ ಎಲ್ಲ ಹೋಬಳಿ ಮಟ್ಟದಲ್ಲಿ ಕ್ಯಾಂಟೀನ್‌ಆರಂಭಕ್ಕೆ ಬೇಡಿಕೆ ಇದೆ.
-ಯು.ಟಿ. ಖಾದರ್‌ ಜಿಲ್ಲಾ ಉಸ್ತುವಾರಿ ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next