ಬಂಟ್ವಾಳ: ಸರಕಾರಿ ಜಾಗದಲ್ಲಿ ಹಲವು ವರ್ಷಗಳಿಂದ ವಾಸಿಸಿಕೊಂಡು ಬರುತ್ತಿದ್ದ ಜನರಿಗೆ ನೆಲದ ಹಕ್ಕು ಮಂಜೂರು ಮಾಡುವ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಹಕ್ಕು ಮಂಜೂರಾತಿಯನ್ನು ರಾಜ್ಯ ಸರಕಾರ ಅನುಷ್ಠಾನಕ್ಕೆ ತರುವ ಮೂಲಕ ಬಡ ಜನರ ಬಹುಮುಖ್ಯ ಆಶೋತ್ತರ ಈಡೇರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಬಿ.ಸಿ. ರೋಡ್‌ನ ಸಚಿವರ ಕಚೇರಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಹಾಗೂ ತಾ| ವ್ಯಾಪ್ತಿಯ ಹಲವು ಮಂದಿ ಫಲಾನುಭವಿಗಳಿಗೆ 94ಸಿ, 94ಸಿಸಿ ಹಾಗೂ ವಿವಿಧ ಯೋಜನೆಗಳಡಿ ಪರಿಹಾರ ಧನ ಚೆಕ್ ವಿತರಿಸಿ ಮಾತನಾಡಿದರು. ಇದೇ ವೇಳೆ ಸಚಿವರು ಸುಮಾರು 200 ಮಂದಿ ಫಲಾನುಭವಿಗಳಿಗೆ 94ಸಿ, 94 ಸಿಸಿ ಮತ್ತು 25 ಮಂದಿ ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಮಂಜೂರಾದ ಪರಿಹಾರ ಧನದ ಚೆಕ್ಕನ್ನು ಹಸ್ತಾಂತರಿಸಿದರು.
ಈ ಸಂದರ್ಭ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಬಿ.ಎಂ. ಅಬ್ಟಾಸ್ ಅಲಿ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಅಧ್ಯಕ್ಷ ಕೆ. ಪದ್ಮನಾಭ ರೈ, ತಾ| ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ನಿರೀಕ್ಷಕರಾದ ರಾಮ, ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಜನಪರ ಸರಕಾರ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವಿವಿಧ ಭಾಗ್ಯಗಳ ಮೂಲಕ ಕರ್ನಾಟಕದಲ್ಲಿ ಈಗಾಗಲೇ ಜನಪರ ಸರಕಾರವಾಗಿ ಮೂಡಿ ಬಂದಿದೆ. ಬಡವರ ಏಳಿಗೆಯೇ ಸರಕಾರದ ಮುಖ್ಯ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಕಾರ್ಯಕ್ರಮಗಳು ಮುಂದುವರಿಯಲಿವೆ.
–
ರಮಾನಾಥ ರೈ ,
ಉಸ್ತುವಾರಿ ಸಚಿವ