ಉಡುಪಿ: ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರವಿದ್ದಾಗ ಜೆಡಿಎಸ್‌ನಲ್ಲಿದ್ದ ನಾನು ಸಚಿವನಾಗಿ ಉಡುಪಿಗೆ ಭೇಟಿಯಾದಾಗ ಬಿಜೆಪಿ ಕಾರ್ಯಕರ್ತರು ನೀಡಿದ ಅದ್ಭುತ ಸ್ವಾಗತ ಇಂದಿಗೂ ಸ್ಮರಣೀಯವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸೋಮವಾರ ಉಡುಪಿ ಜಿಲ್ಲಾ ಪ್ರವಾಸದ ಸಂದರ್ಭ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಕರಾವಳಿ ಬಿಜೆಪಿ ಪಕ್ಷದ ಭದ್ರ ಕೋಟೆಯಾಗಿದ್ದು ಇಲ್ಲಿನ ಪಕ್ಷದ ಕಾರ್ಯ ಕರ್ತರು ಪಕ್ಷದ ಏಳಿಗೆಗಾಗಿ ಸದಾ ನಿಸ್ವಾರ್ಥ ವಾಗಿ ದುಡಿಯುವವರು ಹಾಗೂ ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುವವರು. ಲಾಕ್‌ಡೌನ್ ಸಂದರ್ಭ ಉಡುಪಿ ಜಿಲ್ಲೆಯಲ್ಲಿ ಪಕ್ಷದ ಕಚೇರಿಗೆ ಪ್ರಥಮ ಬಾರಿಗೆ ಭೇಟಿ ನೀಡಿದ್ದೇನೆ ಎಂದರು. ಜಿಲ್ಲಾ ಬಿಜೆಪಿಯ ಪರವಾಗಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ನಗರ ಬಿಜೆಪಿ ಪರವಾಗಿ ಅಧ್ಯಕ್ಷ ಮಹೇಶ್ ಠಾಕೂರ್ ಸಚಿವರನ್ನು ಅಭಿನಂದಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್‌ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಜಿ.ಪಂ. ಅಧ್ಯಕ್ಷ ದಿನಕರ್‌ಬಾಬು, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್‌ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಜಿಲ್ಲಾ ಬಿಜೆಪಿ ವಕ್ತಾರರಾದ ಗಿರೀಶ್ ಅಂಚನ್, ಶಿವಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ದಿನೇಶ್ ಅಮೀನ್, ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಸತ್ಯಾನಂದ ನಾಯಕ್ ಅತ್ರಾಡಿ ನಿರೂಪಿಸಿ, ವಂದಿಸಿದರು.