ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ರೆ ಸರಕಾರ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಗುತ್ತದೆ ಎಂದು ಖಾಸಗಿ ಆಸ್ಪತ್ರೆಗಳಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂದಿಗ್ಧ ಪರಿಸ್ಥಿತಿಯನ್ನು ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿಗಳು ಅರ್ಥ ಮಾಡಿಕೊಳ್ಳಬೇಕು. ಸೋಂಕಿತರಿಗೆ ಚಿಕಿತ್ಸೆ ನೀಡಲು ಸರಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರೊಂದಿಗೆ ಖಾಸಗಿ ಆಸ್ಪತ್ರೆಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು. ಸಂಪುಟ ಸಭೆಯಲ್ಲಿ ಖಾಸಗಿ ಆಸ್ಪತ್ರೆಯ ಕೊರೊನಾ ಬಿಲ್ ಬೆಲೆ ನಿಗದಿ ಮಾಡಿದೆ, ಅವರು ಸಹಕರಿಸಬೇಕು. ಕೇವಲ ಲಾಭಕ್ಕಾಗಿ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲ ಎಂಬುವುದನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಲು ಮುಂದಾಗಬೇಕು. ಇಲ್ಲವಾದರೆ ಸರಕಾರ ಬಲಪ್ರಯೋಗ ಮಾಡುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿನ ವಿಚಾರದಲ್ಲಿ ಜನರು ಜವಾಬ್ದಾರಿ ಅರಿತುಕೊಳ್ಳಬೇಕಿದೆ. ಆದರೆ ಇದನ್ನು ಮರೆತು ಜನರು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳ ಪಾಲನೆಯನ್ನು ಜನರು ಮರೆಯುತ್ತಿದ್ದಾರೆ. ಕೆಲ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳದಿದ್ದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಹೀಗಾಗಿ ಸಾರ್ವಜನಿಕರ ಜವಾಬ್ದಾರಿ ದೊಡ್ಡದಾಗಿದೆ. ಲಾಕ್‌ಡೌನ್ ಹೋಗಿದೆ ಹೊರತು ಕೋವಿಡ್ ಹೋಗಿಲ್ಲ. ಈ ವಿಚಾರದಲ್ಲಿ ಸರಕಾರ ತನ್ನ ಹೊಣೆಗಾರಿಕೆ ಸಮರ್ಪಕವಾಗಿ ನಿಭಾಯಿಸುತ್ತಿದೆ. ಜನರು ತಿಳಿವಳಿಕೆಯಿಂದ ನಡೆದುಕೊಳ್ಳದಿದ್ದರೆ ಕೋವಿಡ್ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ ಎಂದರು.
ಪ್ರತಿ ರವಿವಾರ ಲಾಕ್‌ಡೌನ್ ಮಾಡಿರುವುದು ಒಳ್ಳೆಯ ಬೆಳವಣಿಗೆ. ಸಾಕಷ್ಟು ಸೂಚನೆಗಳನ್ನು ನೀಡಿದರೂ ಜನರು ಪಾಲನೆ ಮಾಡದಿದ್ದಾಗ ಒಂದು ದಿನದ ಲಾಕ್‌ಡೌನ್ ಅನಿವಾರ್ಯವಾಗಿದೆ. ಹೀಗಾಗಿ ವಾರದಲ್ಲಿ ಒಂದು ದಿನವಾದರೂ ಸಂಪೂರ್ಣ ಲಾಕ್‌ಡೌನ್ ಮಾಡಿದರೆ ಜನರ ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಹಾಕಿದಂತಾಗಲಿದೆ. ಸಂಪೂರ್ಣ ಲಾಕ್‌ಡೌನ್ ಮಾಡಬಾರದು ಎಂಬುದು ವೈಯಕ್ತಿಕ ಅಭಿಪ್ರಾಯವಾಗಿದೆ. ಜನರು ಸಹಕಾರ ನೀಡಿದರೆ ಮಾತ್ರ ಸಂಪೂರ್ಣ ಲಾಕ್‌ಡೌನ್ ಆಗುವುದಿಲ್ಲ ಎಂದು ಹೇಳಿದರು.