Advertisement

ಘನತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ವಿಫ‌ಲ

10:47 AM Jan 31, 2020 | Suhan S |

ಬೆಂಗಳೂರು: ನಗರದಲ್ಲಿ ಘನತ್ಯಾಜ್ಯ ವಿಲೇವಾರಿಯ ನಿರ್ವಹಣೆಯಲ್ಲಿ ಸತತ ವೈಫ‌ಲ್ಯ ಕಾಣುತ್ತಿರುವ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್‌, ಕಠಿಣ ತೀರ್ಮಾನಗಳನ್ನು ತೆಗೆದು ಕೊಳ್ಳದ ಹೊರತು ಅನ್ಯ ಮಾರ್ಗವಿಲ್ಲ. ಇಲ್ಲದಿದ್ದರೆ ಈ ಸಮಸ್ಯೆ ವರ್ಷಗಳೇ ಕಳೆದರೂ ಹಾಗೆಯೇ ಉಳಿಯಲಿದೆ ಎಂದು ತೀಕ್ಷ್ಣ ಮಾತುಗಳಲ್ಲಿ ಹೇಳಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿದ್ದವು.

ಆಗ, ಈ ಹಿಂದಿನ ನ್ಯಾಯಾಲಯದ ಆದೇಶವನ್ನು ಪಾಲಿಸಿದ ಕುರಿತು ಬಿಬಿಎಂಪಿ ಸಲ್ಲಿಸಿದ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಘನತ್ಯಾಜ್ಯ ವಿಲೇವಾರಿಯಲ್ಲಿ ಬಿಬಿಎಂಪಿ ಸಂಪೂರ್ಣ ವಿಫ‌ಲವಾಗಿದೆ. ಪಾಲಿಕೆ ಸಲ್ಲಿಸಿರುವ ಪ್ರಮಾಣಪತ್ರ ಅದರ ವೈಫಲ್ಯ ಹಾಗೂ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಈ ವಿಚಾರದಲ್ಲಿ ಕಠಿಣ ಆದೇಶಗಳನ್ನು ಹೊರಡಿಸದಿದ್ದರೆ ವರ್ಷಗಳೇ ಉರುಳಿದರೂ ಈ ಸಮಸ್ಯೆಗೆ ಮುಕ್ತಿ ಸಿಗುವುದಿಲ್ಲ. ಈ ಹಿಂದೆ ನ್ಯಾಯಾಲಯ ಅಭಿಪ್ರಾಯಪಟ್ಟಿರುವಂತೆ “ಒಂದು ಪಾಲಿಕೆ ವಿಸರ್ಜಿಸಬೇಕು, ಇಲ್ಲವೇ ನಗರದ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ನಿರ್ಮಾಣ ಕಾಮಗಾರಿಗಳಿಗೆ ನಿಷೇಧ ಹೇರಬೇಕು’. ಈ ಕುರಿತು ರಾಜ್ಯ ಸರ್ಕಾರವೇ ಒಂದು ತೀರ್ಮಾನಕ್ಕೆ ಬರಬೇಕಾಗಿದೆ ಎಂದು ಹೇಳಿತು.

ಈ ವೇಳೆ, ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, ವಿಷಯದ ಗಂಭೀರತೆಯನ್ನು ಅರಿತು, ಈ ವಿಚಾರದಲ್ಲಿ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಲು ಬಯಸುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಲು ಎರಡು ವಾರ ಕಾಲಾವಕಾಶ ಬೇಕು ಎಂದು ನ್ಯಾಯಪೀಠವನ್ನು ಕೋರಿದರು. ಅದಕ್ಕೆ, ಸ್ವತಃ ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸುವುದಾಗಿ ಭರವಸೆ ನೀಡಿರುವುದರಿಂದ ಈ ಹಂತದಲ್ಲಿ ನ್ಯಾಯಾಲಯ ಯಾವುದೇ ರೀತಿಯ ಕಠಿಣ ಆದೇಶಗಳನ್ನು ಹೊರಡಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

ವಿವರ ಕೊಡಿ: ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಘನತ್ಯಾಜ್ಯದ ಪ್ರಮಾಣದ ಬಗ್ಗೆ ಬಿಬಿಎಂಪಿ ನೀಡಿರುವ ಮಾಹಿತಿ ಸಮರ್ಪಕವಾಗಿಲ್ಲ. ಪ್ರತಿ ದಿನ 4,200 ಮೆಟ್ರಿಕ್‌ ಟನ್‌ ಘನತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಆದರೆ, ಇದಕ್ಕೆ ಅರ್ಜಿದಾರರು ಆಕ್ಷೇಪ ಎತ್ತಿದ್ದಾರೆ. ಒಟ್ಟು ಉತ್ಪತ್ತಿಯಾಗುವ ಘನತ್ಯಾಜ್ಯದ ಪೈಕಿ ಕೇವಲ 1,500 ಮೆಟ್ರಿಕ್‌ ಟನ್‌ ಘನತ್ಯಾಜ್ಯವನ್ನು ಮಾತ್ರ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ. ಉಳಿದ 2,700 ಮೆಟ್ರಿಕ್‌ ಟನ್‌ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತಿದೆ.

Advertisement

ಹಾಗಾಗಿ, 2019ರ ಜ.1ರಿಂದ 2020ರ ಜ.31ರವರೆಗೆ ನಗರದಲ್ಲಿ ಪ್ರತಿ ದಿನ ಎಷ್ಟು ಘನತ್ಯಾಜ್ಯ ಉತ್ಪತ್ತಿಯಾಗಿದೆ ಎಂಬ ಬಗ್ಗೆ ಆಯಾ ದಿನದ ಮಾಹಿತಿಯೊಂದಿಗೆ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next