Advertisement
ಇನ್ನೊಂದೆಡೆ ಬಡರೋಗಿಗಳಿಗೆ ಅಗತ್ಯ ಪ್ರಮಾಣದ ಪ್ಲೇಟ್‌ಲೆಟ್ ಪೂರೈಸಲು ಸರ್ಕಾರಿ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಖಾಸಗಿ ರಕ್ತನಿಧಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದ್ದು, ಬಡರೋಗಿಗಳು ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಒಂದು ಯುನಿಟ್ ಪ್ಲೇಟ್‌ಲೆಟ್‌ಗೆ ಸಾವಿರಾರು ರೂ. ಭರಿಸಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
Related Articles
Advertisement
ಏಕರೂಪ ದರ, ನಿಯಂತ್ರಣಕ್ಕೆ ಮನವಿ: ನಗರದಲ್ಲಿ ಪ್ಲೇಟ್‌ಲೆಟ್ ಬೇಡಿಕೆ ಹೆಚ್ಚಿರುವ ಕಾರಣ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ಲೇಟ್‌ಲೆಟ್ ಅನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. 50 ಎಂ.ಎಲ್‌ನ ಒಂದು ಯುನಿಟ್‌ಗೆ 600ರಿಂದ 1,000 ರೂ.ವರೆಗೂ ದರ ಪಡೆಯುತ್ತಿದ್ದು, ಖಾಸಗಿ ರಕ್ತನಿಧಿಗಳಲ್ಲಿ ಏಕ ದರ ಪಾಲನೆ ಮಾಡುತ್ತಿಲ್ಲ. ಅಲ್ಲದೆ ಒಮ್ಮೆಗೆ 40 ಸಾವಿರಕ್ಕೂ ಹೆಚ್ಚು ಪ್ಲೇಟ್‌ಲೆಟ್ ಲಭ್ಯವಾಗುವ ಸಿಂಗಲ್ ಡೋನರ್ ಪ್ಲೇಟ್‌ಲೆಟ್ಸ್ ಒಂದು ಯುನಿಟ್‌ಗೆ 10 ರಿಂದ 12 ಸಾವಿರ ರೂ.ಗಿಂತಲೂ ಹೆಚ್ಚು ದರ ಪಡೆಯುತ್ತಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆಗಳು ರಕ್ತನಿಧಿ ಕೇಂದ್ರದಿಂದ ತಂದು ತಮ್ಮಲ್ಲಿ ದಾಖಲಾದ ರೋಗಿಗಳಿಗೆ ನೀಡುವ ಪ್ಲೇಟ್‌ಲೆಟ್‌ಗೂ ದುಪ್ಪಟ್ಟು ದರ ವಿಧಿಸುತ್ತಿವೆ. ಇವೆಲ್ಲದಕ್ಕೂ ತಡೆ ಹಾಕಲು ಬಿಬಿಎಂಪಿ ಹಿರಿಯ ಆರೋಗ್ಯ ಅಧಿಕಾರಿಗಳು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಖಾಸಗಿ ಆಸ್ಪತ್ರೆ ಹಾಗೂ ರಕ್ತ ನಿಧಿ ಕೇಂದ್ರಗಳಿಗೆ ಏಕರೂಪ ದರ ನಿಯಮ ಜಾರಿಗೊಳಿಸಿ ಅವುಗಳನ್ನು ನಿಯಂತ್ರಿಸಲು ಮನವಿ ಮಾಡಿದ್ದಾರೆ.
ಅರ್ಜಿ ಸಲ್ಲಿಸುವುದು ಹೇಗೆ?: ಪ್ಲೇಟ್‌ಲೆಟ್ ಖರೀದಿ ಮಾಡಿರುವವರು ತಮ್ಮ ವಾರ್ಡ್‌ನ ಆರೋಗ್ಯ ನಿರೀಕ್ಷಕ ಮೂಲಕ ವಲಯ ಆರೋಗ್ಯಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಜತೆ ಖರೀದಿ ಮಾಡಿದ ಬಿಲ್ ಹಾಗೂ ರೋಗಿಯ ವೈದ್ಯಕೀಯ ದಾಖಲೆಗಳ ಒಂದು ಪ್ರತಿ ಹಾಗೂ ಬಿಬಿಎಂಪಿ ವ್ಯಾಪ್ತಿ ನಿವಾಸಿ ಎಂಬುದನ್ನು ದೃಢ ಪಡೆಸಲು ಗುರುತಿನಚೀಟಿ ಒಂದು ಇರಬೇಕು.
ನಗರದ ಯಾವುದೇ ಆಸ್ಪತ್ರೆ ಅಥವಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲಿ ಪ್ರಸ್ತಕ ವರ್ಷ ಪ್ಲೇಟ್‌ಲೆಟ್ ಖರೀದಿ ಮಾಡಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. “ಅರ್ಜಿಯು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಳಿ ಪರಿಶೀಲನೆಯಾಗಿ ಸದ್ಯ ಚಾಲ್ತಿ ಇರುವ ಮೆಡಿಕಲ್ ಬೋರ್ಡಿನಿಂದ ಅನುಮೋದನೆ ಪಡೆದು ಬಳಿಕ ರೋಗಿಯ ಖಾತೆಗೆ ಹಣ ಭರಿಸಲಾಗುತ್ತದೆ. ಈ ಪ್ರಕ್ರಿಯೆಗೆ 15 ದಿನಗಳಾಗಬಹುದು’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕಲ್) ನಿರ್ಮಲಾ ಬುಗ್ಗಿ ತಿಳಿಸಿದರು.
ಬಡರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ 2017ರ ಮಾದರಿಯಲ್ಲಿಯೇ ರೋಗಿಗಳ ಪ್ಲೇಟ್‌ಲೆಟ್ ಖರೀದಿ ವೆಚ್ಚ ಭರಿಸುವಂತೆ ಆಯುಕ್ತರಿಗೆ ಆದೇಶಿಸಿದ್ದೇನೆ. ಎಲ್ಲಾ ಖಾಸಗಿ ರಕ್ತನಿಧಿ ಕೇಂದ್ರಗಳಲ್ಲೂ ಏಕರೂಪ ದರ ನಿಯಮ ಜಾರಿ ಕುರಿತು ಆರೋಗ್ಯ ಇಲಾಖೆ ಜತೆ ಚರ್ಚಿಸಲಾಗುತ್ತಿದೆ.-ಗಂಗಾಬಿಕೆ, ಮೇಯರ್ * ಜಯಪ್ರಕಾಶ್ ಬಿರಾದಾರ್