Advertisement
ಪ್ರತಿ ವರ್ಷ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸಿ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಪಾಲಿಕೆ ಅಧಿಕಾರಿಗಳು ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬದಲು, ಮಳೆಗಾಲ ಆರಂಭವಾಗುವ ತಿಂಗಳ ಮೊದಲು ಕೆಲಸ ಆರಂಭಿಸುತ್ತಿದ್ದಾರೆ.
Related Articles
Advertisement
ಗುತ್ತಿಗೆದಾರರ ಕಾರ್ಯವೈಖರಿಯೂ ಕಾರಣ: ನಿಯಮಾನುಸಾರ ರಸ್ತೆ ಅಭಿವೃದ್ಧಿಗೆ ಮೊದಲು ಚರಂಡಿ ಹೂಳು ತೆರವುಗೊಳಿಸಿ, ಪಾದಚಾರಿ ಮಾರ್ಗ ಸುಸ್ಥಿತಿಗೆ ತಂದ ನಂತರ ರಸ್ತೆ ಡಾಂಬರೀಕರಣ ಮಾಡಬೇಕು. ಆದರೆ ಎಲ್ಲೆಡೆ ಮೊದಲಿಗೆ ಡಾಂಬರು ಹಾಕಲಾಗುತ್ತದೆ. ನಂತರ ಪಾದಚಾರಿ ಮಾರ್ಗದ ದುರಸ್ತಿ, ಚರಂಡಿ ಹೂಳು ತೆಗೆಯಲಾಗುತ್ತದೆ. ಕೆಲವೆಡೆ ಇದನ್ನೂ ಸಮರ್ಪಕವಾಗಿ ಮಾಡದ ಕಾರಣ ಹೂಳು ಹೆಚ್ಚಾಗಿ ರಸ್ತೆಯಲ್ಲಿ ಮಳೆ ನೀರು ನಿಲ್ಲುವಂತಾಗುತ್ತದೆ ಎನ್ನುತ್ತಾರೆ ಎಂಜಿನಿಯರ್‌ಗಳು.
ಇಂದು ಅಧಿಕಾರಿಗಳ ಜತೆ ಸಭೆ – ಮೇಯರ್ ರೌಂಡ್ಸ್: ನಗರದಲ್ಲಿ ಸುರಿದ ಭಾರೀ ಮಳೆಗೆ ಹಲವು ಕೆಳ ಸೇತುವೆಗಳ ಬಳಿ ಹೂಳು ತುಂಬಿತ್ತು. ಈ ಸಂಬಂಧ ಮೇಯರ್ ಸಿಲ್ಕ್ ಬೋರ್ಡ್ ಜಂಕ್ಷನ್, ಮಡಿವಾಳ ಕೆಳ ಸೇತುವೆ, ಲೀ ಮೆರಿಡಿಯನ್ ಹೋಟೆಲ್ ಬಳಿ ಇರುವ ಕೆಳ ಸೇತುವೆ,
ಕಾವೇರಿ ಕೆಳ ಸೇತುವೆ ಸೇರಿದಂತೆ ಇನ್ನಿತರೆಡೆ ಭೇಟಿಕೊಟ್ಟು ಹೂಳು ತೆರವು ಮಾಡುವುದನ್ನು ಪರಿಶೀಲಿಸಿ ಶೀಘ್ರ ತೆರವು ಮಾಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಳೆಗಾಲದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಮಾಹಿತಿ ಪಡೆಯಲಿ ಗುರುವಾರ ಮೇಯರ್ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.
ಕಾಂಪೌಂಡ್ ಕುಸಿದ ಸ್ಥಳಕ್ಕೆ ಮೇಯರ್ ಭೇಟಿಮಹದೇವಪುರ: ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಗರುಡಾಚಾರ್‌ಪಾಳ್ಯದ ಗೋ ರಕ್ಷಣಾ ಟ್ರಸ್ಟ್ ಕಾಂಪೌಂಡ್ ಕುಸಿದು ಪಾದಚಾರಿ ಮೃತಪಟ್ಟ ಸ್ಥಳಕ್ಕೆ ಮೇಯರ್ ಮೇಯರ್ ಗಂಗಾಂಬಿಕೆ ಹಾಗೂ ವಸತಿ ಸಚಿವ ಎಂ.ಟಿ.ಬಿ.ನಾಗರಾಜು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು. ಮಹದೇವಪುರ ಸುತ್ತಮುತ್ತಲಿನ ಭಾಗಗಳಲ್ಲಿ ಮಂಗಳವಾರ ರಾತ್ರಿ ಭಾರಿ ಗಾಳಿಯೊಂದಿಗೆ ಸುರಿದ ಮಳೆಗೆ ಗೋ ರಕ್ಷಣಾ ಟ್ರಸ್ಟ್‌ನ ಕಾಂಪೌಂಡ್ ಕುಸಿದಿತ್ತು. ಪರಿಣಾಮ, ನಡೆದು ಹೋಗುತ್ತಿದ್ದ ಖಾಸಗಿ ಉದ್ಯೋಗಿ ಶಿವಕೈಲಾಶ್ ರೆಡ್ಡಿ ಎಂಬುವರು ಮೃತಪಟ್ಟಿದ್ದರು. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರದ ಶಿವಕೈಲಾಸ ರೆಡ್ಡಿ, ಆರು ತಿಂಗಳಿಂದ ದೊಡ್ಡನೆಕ್ಕುಂದಿಯ ಖಾಸಗಿ ಸಂಸ್ಥೆಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜತೆಗೆ ಇತ್ತೀಚೆಗಷ್ಟೇ ಕೈಲಾಶ್ ಅವರಿಗೆ ಮದುವೆ ನಿಶ್ಚಯವಾಗಿತ್ತು. ಟ್ರಸ್ಟ್ ವಿರುದ್ಧ ಎಫ್ಐಆರ್: ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಮೇಯರ್ ಗಂಗಾಂಬಿಕೆ, ಘಟನೆ ಸಂಬಂಧ ಗೋ ರಕ್ಷಣಾ ಟ್ರಸ್ಟ್‌ನ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲೇ ಶಿಥಿಲಾವಸ್ಥೆಯಲ್ಲಿರುವ ಕಾಂಪೌಂಡ್ ಮತ್ತು ಮರಗಳನ್ನು ತೆರವುಗೊಳಿಸಲು ಅರಣ್ಯ, ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದ್ದು, ಮಳೆ ಬಂದಾಗ ನೀರು ನುಗ್ಗುವ 182 ಪ್ರದೇಶಗಳನ್ನು ಅಧಿಕಾರಿಗಳು ಈಗಾಗಲೇ ಗುರುತಿಸಿದ್ದಾರೆ ಎಂದು ಮಾಹಿತಿ ನೀಡಿದರು. ವಸಚಿ ಸಚಿವ ಎಂ.ಟಿ.ಬಿ.ನಾಗರಾಜು ಮಾತನಾಡಿ, ಕಾಂಪೌಂಡ್ ಕುಸಿದ ಮೃತಪಟ್ಟಿರುವ ಶಿವಕೈಲಾಶ್ ರೆಡ್ಡಿ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಗರುಡಾಚಾರಪಾಳ್ಯದ ಪಾಲಿಕೆ ಸದಸ್ಯ ನಿತೀನ್ ಪುರುಷೋತ್ತಮ್ ಮತ್ತು ಅಧಿಕಾರಿಗಳು ಹಾಜರಿದ್ದರು. ಕೆ.ರ್.ಪುರದಲ್ಲಿ ಜನಜೀವನ ಅಸ್ತವ್ಯಸ್ಥ: ಮಂಗಳವಾರ ರಾತ್ರಿ ಸುರಿದ ಮಳೆಗೆ ಕೆ.ಆರ್.ಪುರದ ಹಲವು ಬಡಾವಣೆಗಳಿಗೆ ನೀರು ನುಗ್ಗಿದರಿಂದ ಜನಜೀವನ ಸಂಪೂರ್ಣ ಅಸ್ತವ್ಯವಸ್ಥಗೊಂಡು ಜನರು ಜಾಗರಣೆ ಮಾಡುವಂತಾಯಿತು. ಭಾರೀ ಮಳೆಯ ಪರಿಣಾಮ ಚರಂಡಿಯಲ್ಲಿ ಹರಿಯಬೇಕಾದ ಮಳೆ ನೀರು ರಸ್ತೆಯಲ್ಲಿ ಹರಿದ ಪರಿಣಾಮ ವಿಜಿನಾಪುರ ರೈಲ್ವೆ ಕೆಳಸೇತುವೆ, ಐಟಿಐ ರೈಲ್ವೆ ಕೆಳಸೇತುವೆ ಹಾಗೂ ಟಿನ್ ಫ್ಯಾಕ್ಟರಿ, ರಾಮಮೂರ್ತಿನಗರ, ದೇವಸಂದ್ರ ರಸ್ತೆಗಳು ಜಲಾವೃತಗೊಂಡು ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು. ಜತೆಗೆ ಮಹದೇವಪುರ ಗ್ರಾಮದ ಸತ್ಯ ಕಲ್ಯಾಣ ಮಂಟಪ, ರಾಮಮೂರ್ತಿನಗರ, ಸರ್ ಎಂ.ವಿ.ಬಡಾವಣೆ, ಅಂಬೇಡ್ಕರ್ ನಗರ, ನಾಗಪ್ಪ ಬಡಾವಣೆ, ಆರ್.ಆರ್.ಬಡಾವಣೆ, ಸೇರಿದಂತೆ ತಗ್ಗು ಪ್ರದೇಶದ ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದು, ರಾತ್ರಿಯಿಡೀ ನಿವಾಸಿಗಳು ನೀರನ್ನು ಹೊರಹಾಕಲು ಹೆಣಗಾಡಿದರು. 24*7 ನಿಗಾ ವಹಿಸಲು ಸೂಚನೆ: ಮಳೆಗಾಲದಲ್ಲಿ ಯಾವುದೇ ಅನಾಹುತಗಳಾಗದಂತೆ ತಡೆಯಲು ಈಗಾಗಲೇ 63 ಕಡೆ ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ನೇಮಿಸಲಾಗಿದ್ದು, ಸಿಬ್ಬಂದಿಯನ್ನು ದಿನದ 24 ಗಂಟೆ ಜಾಗೃತರಾಗಿರುವಂತೆ ಸೂಚಿಸಲಾಗಿದೆ. ನಿಯಂತ್ರಣ ಕೊಠಡಿಗಳಲ್ಲಿ ಮೂರು ಪಾಳಿಯಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಮಳೆ ಅನಾಹುತದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಕೂಡಲೇ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ. ಟೆಂಡರ್‌ಶ್ಯೂರ್ ರಸ್ತೆಗಳೂ ಜಲಾವೃತ: ರಾಜಧಾನಿಯಲ್ಲಿ ದುಬಾರಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಟೆಂಡರ್‌ಶ್ಯೂರ್ ರಸ್ತೆಗಳೂ ಜಲಾವೃತವಾಗುತ್ತಿವೆ. ಯೋಜನೆಯಡಿ ಅಭಿವೃದ್ಧಿಯಾದ ರಸ್ತೆಗಳಲ್ಲಿ ಬಹುತೇಕ ಕಡೆ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಟೆಂಡರ್‌ಶ್ಯೂರ್ ವಿಧಾನದ ವಿನ್ಯಾಸವೇ ಆ ರೀತಿಯಾಗಿದ್ದು, ನೀರು ಹೋಗಲು ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಸಮಜಾಯಿಷಿ ನೀಡುತ್ತಾರೆ. ಅರಣ್ಯಾಧಿಕಾರಿಗಳೇ ಹೊಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾದರು ಮರ ಧರೆಗುರುಳಿದರೆ ಅದನ್ನು ತೆರವು ಮಾಡಲು ಪಾಲಿಕೆ ಅರಣ್ಯ ಘಟಕ 21 ತಂಡಗಳನ್ನು ನಿಯೋಜನೆ ಮಾಡಿದೆ. ಇದೀಗ ಹೆಚ್ಚುವರಿಯಾಗಿ 7 ತಂಡಗಳನ್ನು ನೇಮಕ ಮಾಡಲಾಗುತ್ತಿದೆ. ಇನ್ನು 15 ದಿನದೊಳಗಾಗಿ ನಗರದಲ್ಲಿ 28 ತಂಡಗಳು ಕಾರ್ಯನಿರ್ವಹಿಸಲಿವೆ. ಈ ಸಂಬಂಧ ಇನ್ನು ಮುಂದೆ ಒಣಗಿದ ಕೊಂಬೆ, ರೋಗಗ್ರಸ್ಥ ಮರಗಳಿಂದ ಅನಾಹುತಗಳಾದರೆ ಪಾಲಿಕೆ ಅರಣ್ಯ ಘಟಕದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗವುದು ಎಂದು ಮೇಯರ್ ತಿಳಿಸಿದರು. ಇನ್ನೂ ಮುಗಿಯದ ರಾಜಕಾಲುವೆ ದುರಸ್ತಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 842 ಕಿ.ಮೀ ಉದ್ದದ ರಾಜಕಾಲುವೆಗಳಿವೆ. ಈ ಸಂಬಂಧ 400 ಕಿ.ಮೀ ಕಾಲುವೆಯಲ್ಲಿ ಹೂಳೆತ್ತುವುದು ಮತ್ತು ತಡೆಗೋಡೆ ನಿರ್ಮಿಸುವುದಕ್ಕೆ ಆರು ಪ್ಯಾಕೇಜ್‌ನಲ್ಲಿ ಬಿಬಿಎಂಪಿ ಗುತ್ತಿಗೆ ನೀಡಿತ್ತು. ಆದರೆ, ಗುತ್ತಿಗೆ ನೀಡಿ ಎರಡು ವರ್ಷ ಕಳೆಯುತ್ತಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇನ್ನೂ 453 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿ ಬಾಕಿಯಿದೆ. ಮಳೆಗಾಲಕ್ಕೆ ಮೊದಲೇ ಮೂರು ಸಾವು: ನಗರದಲ್ಲಿ ಮಳೆಗಾಲ ಆರಂಭವಾಗುವ ಮೊದಲೇ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ನಾಗವಾರ ಹೊರವರ್ತುಲ ರಸ್ತೆಯ ಲುಂಬಿನಿ ಗಾರ್ಡನ್ ಬಳಿ ಮರದ ಕೊಂಬೆ ಮುರಿದು ಬಿದ್ದು ಕೊರಿಯರ್ ಬಾಯ್ ಮೃತಪಟ್ಟಿದ್ದರು. ಅದೇ ದಿನ ಜಾಲಹಳ್ಳಿಯ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ. ಇದೀಗ ಮಂಗಳವಾರ ಗಾಳಿ ಸಹಿತ ಮಳೆಗೆ ಗರುಡಾಚಾರ್ ಪಾಳ್ಯದಲ್ಲಿ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.