Advertisement

BBMP: ವಾರ್ಡ್‌ ಮರುವಿಂಗಡಣೆ: 3 ಸಾವಿರ ಆಕ್ಷೇಪಣೆ

11:05 AM Sep 04, 2023 | Team Udayavani |

ಬೆಂಗಳೂರು: ಸರ್ಕಾರ ಹೊಸದಾಗಿ ಹೊರಡಿಸಿರುವ ಪಾಲಿಕೆ ವಾರ್ಡ್‌ಗಳ ಮರು ವಿಂಗಡಣೆ ಪಟ್ಟಿಗೆ 3 ಸಾವಿರಕ್ಕೂ ಅಧಿಕ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ವಾರ್ಡ್‌ಗಳ ವ್ಯಾಪ್ತಿಯ ಗಡಿಗಳ ಚಕ್ಕುಬಂದಿಯನ್ನೂ ಅವೈಜ್ಞಾನಿಕವಾಗಿ ರಚಿಸಲಾಗಿದೆ ಎಂಬುದರ ಬಗ್ಗೆ ಆರೋಪಗಳು ಬಲವಾಗಿ ಕೇಳಿ ಬಂದಿವೆ.

Advertisement

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚಿಸಲಾಗಿದ್ದ ವಾರ್ಡ್‌ ಮರು ವಿಂಗಡಣೆ ಪಟ್ಟಿಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಕಾಂಗ್ರೆಸ್‌ ಮುಖಂಡರು, ವಾರ್ಡ್‌ ವಿಂಗಡಣೆ ಪಟ್ಟಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಬಿಜೆಪಿ ಮುಖಂಡರ ಸರದಿಯಾಗಿದ್ದು ವಾರ್ಡ್‌ ಪುನರ್‌ ವಿಂಗಡಣೆ ಕಾಂಗ್ರೆಸ್‌ ಗೆಲುವನ್ನು ಮಾನದಂಡವನ್ನಾಗಿರಿಸಿ ಮಾಡಲಾಗಿದೆ ಎಂಬ ಮಾತುಗಳು ವ್ಯಕ್ತವಾಗಿದೆ.

ಬಿಜೆಪಿ ಆಡಳಿತ ಅವಧಿಯಲ್ಲಿ ನಿಗದಿ ಮಾಡಿದ್ದ 243 ವಾರ್ಡ್‌ಗಳಿಂದ ಇದೀಗ 225 ವಾರ್ಡ್‌ ಗಳಿಗೆ ನಿಗದಿಗೊಳಿಸಿ ನಗರಾಭಿವೃದ್ಧಿ ಇಲಾಖೆ ರಾಜ್ಯಪತ್ರ ಪ್ರಕಟಿಸಿತ್ತು. ಹೊಸದಾಗಿ ಪ್ರಕಟಿಸಿರುವ ವಾರ್ಡ್‌ಗಳ ಹೆಸರು ಸೇರಿ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆಕ್ಷೇಪಣೆ ಸಲ್ಲಿಕೆಗೆ ನೀಡಿದ್ದ ಗಡುವು ಶನಿವಾರ (ಸೆ.2)ಮುಗಿದಿದೆ.

ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸೇರಿ ಸಾರ್ವಜನಿಕರಿಂದ 3 ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಅದರಲ್ಲೂ ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಹೆಚ್ಚಿನ ವಾರ್ಡ್‌ಗಳನ್ನು ಕಡಿತಗೊಳಿಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.

ಬಿಜೆಪಿ ಗೆಲ್ಲುವ ವಾರ್ಡ್‌ಗಳಲ್ಲಿ ವಿಭಜನೆ: ಬಿಜೆಪಿ ಗೆಲ್ಲುವ ವಾರ್ಡ್‌ಗಳನ್ನು ವಿಭಜಿಸಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಇರುವ ಪ್ರದೇಶಗಳಿಗೆ ಸೇರ್ಪಡೆ ಮಾಡಿ ಹೊಸ ವಾರ್ಡ್ ಗಳನ್ನು ರಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಜನಗಣತಿ ವರದಿ ಆಧಾರದ ಮೇರೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 35 ಸಾವಿರಜನಸಂಖ್ಯೆಯಂತೆ ವಾರ್ಡ್‌ಗಳನ್ನು ರಚಿಸಲಾಗಿತ್ತು. ಈಗ 37,527 ಜನಸಂಖ್ಯೆಗೊಂದರಂತೆ ವಾರ್ಡ್‌ ರಚಿಸಲಾಗಿದೆ. ಬಿಜೆಪಿ ಶಾಸಕರಾಗಿರುವಕ್ಷೇತ್ರಗಳಲ್ಲಿ ಒಟ್ಟು 18 ವಾರ್ಡ್‌ಗಳನ್ನು ಕಡಿತಗೊಳಿಸಿ, 225ಕ್ಕೆ ವಿಂಗಡಣೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ದೂರು ಕೇಳಿಬಂದಿದೆ.  ಮುಂಬರುವ ಚುನಾವಣೆಯಲ್ಲಿ ಸುಲಭವಾಗಿ ಜಯ ಸಾಧಿಸಲು ಕಾಂಗ್ರೆಸ್‌ ಸರ್ಕಾರ, ತಮ್ಮ ಅನುಕೂಲಕ್ಕೆ ತಕ್ಕಂತೆ ವಾರ್ಡ್‌ಗಳನ್ನು ವಿಂಗಡಿಸಿದೆ ಎಂಬುದು ಬಿಜೆಪಿ ಮುಖಂಡರ ಆರೋಪ ವಾಗಿದೆ.

Advertisement

ಸೆ.13ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ: ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಕಚೇರಿಗೆ ಸಲ್ಲಿಕೆಯಾಗಿ ರುವ ಆಕ್ಷೇಪಣೆಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದ ಸಮಿತಿಗೆ ನೀಡಲಾಗುತ್ತದೆ. ವಾರದಲ್ಲಿ ಆಕ್ಷೇಪಣೆಗಳನ್ನು ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಅಗತ್ಯಬಿದ್ದರೆ ಬದಲಾವಣೆ ಮಾಡಿ ಅಂತಿಮ ವರದಿಯನ್ನು ಇಲಾಖೆಗೆ ಸಲ್ಲಿಸಬೇಕು. ನಂತರ, ವಾರ್ಡ್‌ ಮರುವಿಂಗಡಣೆ ಪಟ್ಟಿ ಕುರಿತು ಸರ್ಕಾರ ಅಧಿಸೂಚನೆ ಹೊರಡಿ ಸಲಿದೆ. ಒಟ್ಟಿನಲ್ಲಿ ವಾರ್ಡ್‌ ಮರುವಿಂಗಡಣೆ ಸೇರಿ ಎಲ್ಲ ಪ್ರಕ್ರಿಯೆಯನ್ನು ಸೆ.13ರೊಳಗೆ ಪೂರ್ಣಗೊಳಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next