ಬೆಂಗಳೂರು: ಫೆಬ್ರವರಿ 15ರಂದು ಮಂಡಿಸಲು ಉದ್ದೇಶಿಸಿದ್ದ 2019-20ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ದಿನಾಂಕ ಮುಂದಕ್ಕೆ ಹೋಗಿದ್ದು, ಫೆ.25 ಅಥವಾ 27ರಂದು ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭರಪೂರ ಯೋಜನೆಗಳನ್ನು ಘೋಷಿಸಿದ ಬೆನ್ನಲ್ಲೇ ಬಿಬಿಎಂಪಿ ಸಹ ಜನಪ್ರಿಯ ಯೋಜನೆಗಳ ಘೋಷಣೆಗೆ ಮುಂದಾಗಿದ್ದು, ಪಾಲಿಕೆಯ ಬಜೆಟ್ ಗಾತ್ರ 10 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಯಿದೆ.
ಆದರೆ, ಬಜೆಟ್ ಸಿದ್ಧಪಡಿಸಲು ಇನ್ನೂ 10 ದಿನಗಳ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ದಿನಾಂಕವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಮುಂದೂಡಿದೆ. ಫೆ.20ರಿಂದ 24ವರೆಗೆ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಶೋ ನಡೆಯಲಿದ್ದು, ಆನಂತರ ಬಜೆಟ್ ಮಂಡಿಸಲು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಚಿಂತನೆ ನಡೆಸಿದೆ. ಹೀಗಾಗಿ ಫೆ.25 ಅಥವಾ 27ರಂದು ಬಜೆಟ್ ಮಂಡನೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾದ ಹಿನ್ನೆಲೆಯಲ್ಲಿ ಪಾಲಿಕೆಯ ಬಜೆಟ್ ಮಂಡನೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಮುಂದಾಗಿದ್ದು, ಈಗಾಗಲೇ ಪಾಲಿಕೆಯ ಆಯುಕ್ತರು 8,300 ಕೋಟಿ ರೂ. ಮೊತ್ತದ ಕರಡು ಆಯವ್ಯಯವನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷರು ವಿವಿಧ ಸ್ಥಾಯಿ ಸಮಿತಿ ಹಾಗೂ ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ.
ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ನಗರದ ಶಾಸಕರು, ಸಮಿತಿ ಸದಸ್ಯರೊಂದಿಗೆ ಚರ್ಚೆ ನಡೆಸಿದ ಬಳಿಕ ಬಜೆಟ್ ಗಾತ್ರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅದರಂತೆ ಕರಡು ಬಜೆಟ್‌ಗೆ ಕನಿಷ್ಠ 2,000 ಕೋಟಿ ರೂ. ನಿಂದ 2,500 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಸಿದ್ಧಪಡಿಸಲು ಸ್ಥಾಯಿ ಸಮಿತಿ ನಿರ್ಧರಿಸಿದ್ದು, 2019-20ನೇ ಸಾಲಿನ ಬಜೆಟ್ ಗಾತ್ರ ಈ ಬಾರಿ 10 ಸಾವಿರ ಕೋಟಿ ರೂ. ದಾಟುವ ಸಾಧ್ಯತೆಯಿದೆ ಎನ್ನಲಾಗಿದೆ.