Advertisement

ವೃಕ್ಷಗಳ ಸ್ಥಿತಿಗತಿ ತಿಳಿಯಲು ಬಿಬಿಎಂಪಿಯಿಂದ ಗಣತಿ

12:32 PM Mar 28, 2017 | |

ಬೆಂಗಳೂರು: ಪ್ರತಿಬಾರಿ ನಗರದಲ್ಲಿ ಮರ ಉರುಳಿ ಅನಾಹುತ ಸಂಭವಿಸಿದಾಗ ಶಿಥಿಲಗೊಂಡ ಮರಗಳನ್ನು ಪತ್ತೆ ಮಾಡಿ ತೆರವುಗೊಳಿಸಿ ಎಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬರುತ್ತದೆ. ಅದರ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ 2017-18ನೇ ಸಾಲಿನ ಬಜೆಟ್‌ನಲ್ಲಿ ನಗರದಲ್ಲಿರುವ ಮರಗಳ ಗಣತಿಗೆ ಮುಂದಾಗಿದ್ದು, ಅದಕ್ಕಾಗಿ 4 ಕೋಟಿ ರೂ. ಅನುದಾನ ಮೀಸಲಿರಿಸಿದೆ. 

Advertisement

ನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದಿಂದ ನಗರದಾದ್ಯಂತ 10 ಲಕ್ಷ ಸಸಿಗಳನ್ನು ನೆಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಪ್ರತಿ ವರ್ಷ ಪಾಲಿಕೆಯ ಬಜೆಟ್‌ನಲ್ಲಿ ಲಕ್ಷಾಂತರ ಸಸಿಗಳನ್ನು ನೆಡುವ ಕಾರ್ಯಕ್ರಮ ಮುಂದುವರಿಯುತ್ತಿದ್ದರೂ, ಯೋಜನೆ ಸಮರ್ಪಕವಾಗಿ  ಜಾರಿಯಾಗದ ಹಿನ್ನೆಲೆಯಲ್ಲಿ ಪಾಲಿಕೆಯಲ್ಲಿ ಪರಿಸರ ಪ್ರಮಾಣ ಕಡಿಮೆಯಾಗುತ್ತಿದೆ ಎಂಬ ಆರೋಪಗಳು ಪರಿಸರವಾದಿಗಳ ಕಡೆಯಿಂದ ಕೇಳಿ ಬರುತ್ತಿದೆ. 

ನಗರದಲ್ಲಿ ಕಳೆದ 6 ವರ್ಷಗಳಲ್ಲಿ 7.47 ಲಕ್ಷ ಸಸಿಗಳನ್ನು ನೆಡಲಾಗಿದ್ದು, ಅವೆಲ್ಲವೂ ಮರವಾಗಿವೆ ಎಂಬ ಅಂಕಿ-ಅಂಶಗಳನ್ನು ಅಕಾರಿಗಳು ನೀಡುತ್ತಿದ್ದರೂ ವಾಸ್ತವದಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ಎಷ್ಟು ಮರಗಳಿವೆ ಎಂಬ ನಿಖರ ಮಾಹಿತಿ ಇಲ್ಲ. ಇದನ್ನೇ ಲಾಭವಾಗಿಸಿಕೊಂಡ ಕೆಲ ಅಕಾರಿಗಳು ಸಸಿಗಳನ್ನು ನೆಡಲಾಗಿದೆ ಎಂದು ಸುಳ್ಳು ಲೆಕ್ಕ ತೋರಿಸಿ ಪಾಲಿಕೆಗೆ ವಂಚಿಸಿರುವ ಬಗ್ಗೆ ದೂರುಗಳು ಬಂದಿವೆ. ಇದರ ಹಿನ್ನೆಲೆಯಲ್ಲಿ ನಗರದಲ್ಲಿರುವ ಮರಗಳ ಗಣತಿಗೆ ಪಾಲಿಕೆ ಮುಂದಾಗಿದೆ. 

ಮರಗಳಿಗೆ ಪ್ರತ್ಯೇಕ ಸಂಖ್ಯೆ: ಮರಗಳ ಸಮೀಕ್ಷೆ ವೇಳೆ ಪ್ರತಿಯೊಂದು ಮರಕ್ಕೆ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲು ಪಾಲಿಕೆ ಅಕಾರಿಗಳು ನಿರ್ಧರಿಸಿದ್ದಾರೆ. ಆ ಮೂಲಕ ನಗರದಲ್ಲಿ ಎಷ್ಟು ಮರಗಳಿವೆ? ಎಷ್ಟು ಪ್ರಭೇದದ ಮರಗಳಿವೆ? ಅಳಿವಿನ ಅಂಚಿನಲ್ಲಿರುವ ಮರಗಳು ಎಷ್ಟು? ಹೀಗೆ ಹಲವಾರು ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜತೆಗೆ ಸಧೃಡ ಮತ್ತು ಟೊಳ್ಳು ಮರಗಳ ಮಾಹಿತಿ ಪಡೆದು, ಶಿಥಿಲಗೊಂಡಿರುವ ಮರಗಳನ್ನು ತೆರವುಗೊಳಿಸಲು ಯೋಚಿಸಲಾಗಿದೆ. ಮರ ಗಣತಿಗೆ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಸೇರಿ ಕಾಲೇಜು ವಿದ್ಯಾರ್ಥಿಗಳ ನೆರವು ಪಡೆಯುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ. 

ಮರಗಳನ್ನು ದತ್ತು ಪಡೆಯಿರಿ!: ಮರಗಳ ಸಮೀಕ್ಷೆಯೊಂದಿಗೆ ಸಸಿಗಳನ್ನು ನೆಡುವ ಮೂಲಕ ನಗರವನ್ನು ಹಸಿರೀಕರಣಗೊಳಿಸಲು ಪಾಲಿಕೆ ತೀರ್ಮಾನಿಸಿದ್ದು, ಈ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಪಡಿಸುತ್ತಿದೆ. ಆ್ಯಪ್‌ ಮೂಲಕ ಸಾರ್ವಜನಿಕರು ಇಂತಹ ಜಾಗದಲ್ಲಿ ಸಸಿ ನೆಡಬೇಕು ಎಂಬ ಮನವಿ ಪಡೆದು ಅವರಿಗೆ ಬೇಕಾದ ಸಸಿಯನ್ನು ಪಾಲಿಕೆ ಸಿಬ್ಬಂದಿ ನೆಡುತ್ತಾರೆ. ಆದರೆ, ಆ ಸಸಿಯನ್ನು ದತ್ತು ಪಡೆದು ಪೋಷಿಸಿ, ಸಂರಕ್ಷಿಸುವ ಜವಾಬ್ದಾರಿ ಮನವಿ ಮಾಡಿದ ನಾಗರಿಕರಿಗೆ ಸೇರಿರುತ್ತದೆ. 

Advertisement

ಯಾವ್ಯಾವ ಮರಗಳಿವೆ
ನಗರದ ವ್ಯಾಪ್ತಿಯಲ್ಲಿ ಹೊಂಗೆ, ಮಹಾಗನಿ, ಬೇವು, ನಾಯಿ ನೇರಳೆ, ಜಂಭು ನೇರಳೆ, ಚರ್ರಿ, ತಬೂಬಿಯಾ ರೋಸಿಯಾ, ತಬೂಬಿಯಾ ಅವಲಾಂಡ, ನೆಲ್ಲಿ, ಜಕರಾಂಡ, ಸಂಪಿಗೆ, ಆಕಾಶ ಮಲ್ಲಿಗೆ, ಕಾಡುಬಾದಾಮಿ, ಹುಣಸೆ, ಮಾವು, ಆಲ, ಅರಳಿ, ಗೋಣಿ, ಅತ್ತಿ, ಬಸರಿ, ತೊರೆಮತ್ತಿ, ಸಿಸು, ಹೊನ್ನೆ, ಹೊಳೆದಾಸವಾಳ, ಮಳೆಮರ, ಹೂವರ್ಸಿ, ತಪಸಿ, ಬಸವನಪಾದ, ಟೆಕೋಮಾ, ಸೀಮಾರೂಬ, ಹಲಸು ಮರಗಳು ಹೆಚ್ಚಿವೆ.

Advertisement

Udayavani is now on Telegram. Click here to join our channel and stay updated with the latest news.

Next