ಬೆಂಗಳೂರು: ಜಾಹೀರಾತು ಪ್ರದರ್ಶವನ್ನು ನಿಷೇಧಿಸಿರುವ ಬಿಬಿಎಂಪಿಯು ಅನಧಿಕೃತ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದು, ಮುಂದಿನ ಎರಡು ವಾರಗಳಲ್ಲಿ ನಗರವನ್ನು ಜಾಹೀರಾತು ಫಲಕ ಮುಕ್ತಗೊಳಿಸಲು ಸಂಕಲ್ಪ ತೊಟ್ಟಿದೆ.
ಹೈಕೋರ್ಟ್ ನಿರ್ದೇಶನದಂತೆ ನಗರವನ್ನು ಫ್ಲೆಕ್ಸ್, ಬ್ಯಾನರ್ ಮುಕ್ತಗೊಳಿಸಿರುವ ಪಾಲಿಕೆಯ ಅಧಿಕಾರಿಗಳು, ಇದೀಗ ಅನಧಿಕೃತ ಜಾಹೀರಾತು ಫಲಕಗಳ ತೆರವಿಗೆ ಮುಂದಾಗಿದ್ದು, ಭಾನುವಾರದವರೆಗೆ ಸುಮಾರು 100 ಜಾಹೀರಾತು ಫಲಕಗಳನ್ನು ಸಂಪೂರ್ಣವಾಗಿ ತೆರವುಗೊಳಿಲಾಗಿದೆ. . ಜತೆಗೆ ಪಾಲಿಕೆಯ ಆದೇಶಗಳನ್ನು ಪಾಲನೆ ಮಾಡದ 759 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ.
ಖಾಸಗಿ ಜಾಗಗಳಲ್ಲಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಹೈಕೋರ್ಟ್ ಸೂಚನೆಯಂತೆ ಎರಡು ಬಾರಿ ಅವಕಾಶ ನೀಡಲಾಗಿತ್ತು. ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಅಳವಡಿಸಿದ್ದ ಸುಮಾರು 1848 ಮಂದಿ ಪಾಲಿಕೆಯಿಂದ ನೋಟಿಸ್‌ಗಳನ್ನು ಜಾರಿಗೊಳಿಸಿ ಸೆಪ್ಟಂಬರ್ 17ರೊಳಗೆ ತೆರವುಗೊಳಿಸುವಂತೆ ಸೂಚನೆ ನೀಡಿತ್ತು. ಅದಕ್ಕೆ ಬೆದರಿಂದ ಹಲವು ಏಜೆನ್ಸಿಗಳು ತಾವು ವಿವಿಧೆಡೆ ಅಳವಡಿಸಿದ್ದ 744 ಜಾಹೀರಾತು ಫಲಕಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದ್ದಾರೆ.
271 ಫಲಕಗಳಿಗೆ ಮಾತ್ರ ತಡೆಯಾಜ್ಞೆ: ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಬಿಬಿಎಂಪಿಯ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡುವಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅದರಂತೆ ನಗರದಲ್ಲಿನ 271 ಫಲಕಗಳನ್ನು ತೆರವುಗೊಳಿಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಉಳಿದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಜ್ಜಾಗಿದ್ದು, ಮುಂದಿನ ಎರಡು ವಾರಗಳಲ್ಲಿ ಎಲ್ಲ ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಗುವುದು ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ತಿಳಿಸಿದರು.
ಕಣ್ಣೀರು ಹಾಕಿದ ಏಜೆನ್ಸಿ ಮಾಲೀಕ: ನ್ಯಾಯಾಲಯದ ಆದೇಶಕ್ಕೆ ಮೊದಲು ದಾಸರಹಳ್ಳಿ ವಲಯದಲ್ಲಿ ಏಜೆನ್ಸಿಯೊಂದು ಹೊಸದಾಗಿ ಫಲಕ ಅಳವಡಿಸುತ್ತಿತ್ತು. ಈ ವೇಳೆ ಅದನ್ನು ತಡೆಯಲು ಮುಂದಾದಾಗ ಶಾಸಕರೊಬ್ಬರು ಕರೆ ಮಾಡಿ ಒತ್ತಡ ಹೇರಿದ್ದಾರೆ. ಅದಾದ ಕೆಲವೇ ದಿನಗಳಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಅದನ್ನು ತೆರವುಗೊಳಿಸಿದ್ದು, ಏಜೆನ್ಸಿ ಮಾಲೀಕ 25 ಲಕ್ಷ ರೂ. ಖರ್ಚು ಮಾಡಿದ್ದೇನೆಂದು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ.
ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಕೇವಲ 271 ಫಲಕಗಳಿಗೆ ಮಾತ್ರ. ಹೀಗಾಗಿ ಉಳಿದ 600 ಅನಧಿಕೃತ ಫಲಕಗಳ ಪೈಕಿ ಈವರೆಗೆ 100 ಫಲಕಗಳನ್ನು ತೆರವುಗೊಳಿಸಿದ್ದು, ಮುಂದಿನ ಎರಡು ವಾರಗಳಲ್ಲಿ ಉಳಿದ 500 ಫಲಕಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
-1848 ಜಾರಿಗೊಳಿಸಿದ ಒಟ್ಟು ನೋಟಿಸ್‌ಗಳು
-759 ದಾಖಲಿಸಿದ ಒಟ್ಟು ಎಫ್ಐಆರ್‌ಗಳ ಸಂಖ್ಯೆ
-744 ಸ್ವಯಂ ಪ್ರೇರಿತವಾಗಿ ಮಾಲೀಕರೇ ತೆರವುಗೊಳಿಸಿದ ಫಲಕಗಳು
-100 ಪಾಲಿಕೆಯಿಂದ ತೆರವುಗೊಳಿಸಿದ ಫಲಕಗಳು
-500 ತೆರವುಗೊಳಿಸಬೇಕಾದ ಫಲಕಗಳ ಸಂಖ್ಯೆ