ಬೆಂಗಳೂರು: ಸಂಸ್ಕರಿಸಬಹುದಾದ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಯಾವುದೇ ಆಕ್ಷೇಪಗಳಿಲ್ಲದಿದ್ದರೂ ಬಿಬಿಎಂಪಿ ಸಿಬ್ಬಂದಿ ಅಂಗಡಿ ಮಳಿಗೆಗಳ ಮೇಲೆ ವಿನಾಕಾರಣ ದಾಳಿ ನಡೆಸಿ ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಉದ್ಯಮಿಗಳು ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಕಾಸಿಯಾ ಸಭಾಂಗಣದಲ್ಲಿ ಗುರುವಾರ ನಡೆದ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಜತೆಗಿನ ಸಭೆಯಲ್ಲಿ ಉದ್ಯಮಿಗಳು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಪ್ಲಾಸ್ಲಿಕ್ ನಿಷೇಧ ಹೆಸರಲ್ಲಿ ಬಿಬಿಎಂಪಿ ಸಿಬ್ಬಂದಿ ಉತ್ಪಾದಕರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಸಂಸ್ಕರಿಸಬಹುದಾದ ವಸ್ತುಗಳ ಉತ್ಪಾದನೆಗೆ ಅಡ್ಡಿ ಪಡಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಧಿಕಾರಿಗಳ ಎದುರು ಅಲವತ್ತುಕೊಂಡರು.
ಈ ವೇಳೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಉದ್ಯಮಿಗಳ ಮನವೊಲಿಕೆಗೆ ಪ್ರಯತ್ನಿಸಿದರು. “”ಪ್ಲಾಸ್ಟಿಕ್ ಕೈಗಾರಿಕೆಗಳ ಮೇಲೆ ಅನಗತ್ಯವಾಗಿ ದಾಳಿ ನಡೆಸದಂತೆ ಬಿಬಿಎಂಪಿ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ತಿಳಿಸಲಾಗುವುದು. ಪ್ಲಾಸ್ಟಿಕ್ ವಸ್ತುಗಳ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಮರ್ಪಕವಾದ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ತರಬೇತಿ ನೀಡಿ ನಿಷೇಧಿತ ವಸ್ತುಗಳ ಬಗ್ಗೆ ಮಾಹಿತಿ ನೀಡಲಾಗುವುದು,” ಎಂದು ಹೇಳಿದರು.
“ಪರಿಸರಕ್ಕೆ ಹಾನಿಯಾಗದಂತಹ ಪ್ಲಾಸ್ಟಿಕ್ ವಸ್ತುಗಳ ನಿಷೇಧವನ್ನು ಹಿಂಪಡೆಯಬೇಕು ಎಂಬ ಒತ್ತಾಯ ಕೇಳಿ ಬಂದಿರುವುದರಿಂದ ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯು ಸೂಕ್ತವಾದ ನಿರ್ಣಯ ಕೈಗೊಳ್ಳಲಿದೆ,” ಎಂದು ಹೇಳಿ ಉದ್ಯಮಿಗಳಿಗೆ ಸಮಾಧಾನಪಡಿಸಿದರು.
ಪರಿಸರಕ್ಕೆ ಪೂರಕವಾಗಿ ಕೆಲವು ಪ್ಲಾಷ್ಟಿಕ್ ವಸ್ತುಗಳ ನಿಷೇಧ ಅನಿವಾರ್ಯ. ಆದರೆ, ಪ್ಲಾಸ್ಟಿಕ್ ನಿಷೇಧ ಆದೇಶವನ್ನು ಅಧಿಕಾರಿಗಳು ತಪ್ಪಾಗಿ ಅರ್ಥೈಸಿ ಕೊಂಡಿದ್ದಾರೆ. ಪರಿಣಾಮ ಉದ್ಯಮಿಗಳಿಗೆ ತೊಂದರೆಯಾಗಿದೆ. ನಿಷೇಧ ಹಾಗೂ ನಿಷೇಧವಲ್ಲದ ವಸ್ತುಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿಕೊಡಲಾಗುತ್ತದೆ.
-ಲಕ್ಷ್ಮಣ್ , ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ