Advertisement

ಪಾಲಿಕೆ ಭದ್ರತಾ ಪಡೆ ವಿಚಾರ: ನೋಟಿಸ್‌

12:18 AM Feb 11, 2020 | Team Udayavani |

ಬೆಂಗಳೂರು: ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆಗೆ ಹಾಗೂ ತೆರಿಗೆ ವಂಚಕರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಲು “ಪಾಲಿಕೆ ಭದ್ರತಾ ಪಡೆ’ ರಚಿಸಲು ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತಂತೆ ನಿವೃತ್ತ ಸರ್ಕಾರಿ ಅಧಿಕಾರಿ ಜಿ.ಆರ್‌.ಗಾರವಾಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿ ಸಂಬಂಧ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಮತ್ತು ಬಿಬಿಎಂಪಿ ಆಯುಕ್ತರಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ-1976 (ಕೆಎಂಸಿ) ಸೆಕ್ಷನ್‌ 491 ಮತ್ತು 492 ಅನುಸಾರ ಎಲ್ಲಾ ನಗರ ಪಾಲಿಕೆಗಳ ಆಸ್ತಿ ಸಂರಕ್ಷಣೆಗೆ ಹಾಗೂ ತೆರಿಗೆ ವಂಚಕರ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಪಾಲಿಕೆ ಭದ್ರತಾ ಪಡೆ ರಚನೆ ಮಾಡಬೇಕು. ಅದರ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡಬೇಕು. ಈ ನಿಯಮ ಪಾಲನೆ ಮಾಡುವುದು ಕಡ್ಡಾಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕೆಎಂಸಿ ಕಾಯ್ದೆ ಜಾರಿಯಾಗಿ 44 ವರ್ಷ ಕಳೆದಿವೆ. ಆದರೆ, ಎಲ್ಲಾ ನಗರ ಪಾಲಿಕೆಗಳಲ್ಲಿ ಸೆಕ್ಷನ್‌ 491 ಮತ್ತು 491 ಹೇಳಿರುವಂತೆ ಪಾಲಿಕೆ ಭದ್ರತಾ ಪಡೆ ರಚನೆ ಮಾಡುವಲ್ಲಿ ಸರ್ಕಾರ ವಿಫ‌ಲವಾಗಿದೆ. ಪರಿಣಾಮ ನಗರ ಪಾಲಿಕೆಗಳ ಆಸ್ತಿ ಕಬಳಿಕದಾರರು ಮತ್ತು ತೆರಿಗೆ ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಸಂಬಂಧಪಟ್ಟ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Advertisement

ಅಲ್ಲದೆ, ಪಾಲಿಕೆ ಆಸ್ತಿ ಕಬಳಿಕೆ ಹಾಗೂ ತೆರಿಗೆ ವಂಚನೆ ಬಗೆಗಿನ ಅಪರಾಧ ಕೃತ್ಯಗಳ ಸಂಬಂಧ ನಗರ ಪಾಲಿಕೆ ಅಧಿಕಾರಿಗಳು ಪೊಲೀಸ್‌ ಠಾಣೆಗಳಿಗೆ ದೂರು ನೀಡಬೇಕಿದೆ. ಈಗಾಗಲೇ ಆ ಪೊಲೀಸರ ಮೇಲೆ ಹೆಚ್ಚಿನ ಹೊರೆಯಿದೆ. ಮತ್ತೂಂದೆಡೆ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಪರಿಣಾಮ ಪಾಲಿಕೆ ಅಧಿಕಾರಿಗಳು ದಾಖಲಿಸುವ ದೂರುಗಳ ಬಗ್ಗೆ ಸರಿಯಾದ ತನಿಖೆ ನಡೆಯುತ್ತಿಲ್ಲ.

ಆದ್ದರಿಂದ ಎಲ್ಲಾ ನಗರ ಪಾಲಿಕೆಗಳಲ್ಲಿ ಪಾಲಿಕೆ ಭದ್ರತಾ ಪಡೆ ರಚಿಸಲು ಹಾಗೂ ಅದರ ಅಧಿಕಾರಿಗಳಿಗೆ ಪೊಲೀಸರು ಹೊಂದಿರುವ ಅಧಿಕಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಎಸ್‌.ಉಮಾಪತಿ ವಾದ ಮಂಡಿಸಿದರು.

ಧ್ವನಿವರ್ಧಕ ಬಳಸಲು ಪರವಾನಗಿ ಇದೆಯಾ?
ಬೆಂಗಳೂರು: ಗೋವಿಂದರಾಜ ನಗರದ ಕಾರ್ಪೊರೇಷನ್‌ ಕಾಲೋನಿಯ ಆಯೆಷಾ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಧ್ವನಿವರ್ಧಕ ಬಳಸಿ ಮಿತಿಮೀರಿದ ಶಬ್ದ ಮಾಲಿನ್ಯ ಉಂಟು ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಧ್ವನಿವರ್ಧಕ ಬಳಕೆಗೆ ಪಡೆದಿರುವ ಪರವಾನಗಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮಸೀದಿ ಮುಖ್ಯಸ್ಥರಿಗೆ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಮಸೀದಿಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ತಡೆಯಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸ್ಥಳೀಯ ನಿವಾಸಿ ಸುಮಂಗಳ ಎ. ಸ್ವಾಮಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.

ಅಲ್ಲದೇ, ಆಯೆಷಾ ಮಸೀದಿಯ ಧ್ವನಿವರ್ಧಕಗಳಿಂದ ನಿಗದಿತ ಪ್ರಮಾಣದಕ್ಕಿಂತ ಧ್ವನಿ ತರಂಗಗಳ ತೀವ್ರತೆ ಹೆಚ್ಚಿದ್ದರೆ, ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ವಿಜಯನಗರ ಠಾಣಾ ಪೊಲೀಸರಿಗೆ ನ್ಯಾಯಪೀಠ ಇದೇ ವೇಳೆ ನಿರ್ದೇಶಿಸಿತು. ಆಯೆಷಾ ಮಸೀದಿಯಲ್ಲಿ ನಿತ್ಯ ಐದು ಬಾರಿ ನಮಾಜ್‌ ಮಾಡಲಾಗುತ್ತಿದೆ. ಈ ವೇಳೆ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ.

ಅವುಗಗಳ ಬಳಕೆಯಿಂದ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಪ್ರಾರ್ಥನೆ ಮಾಡುವುದನ್ನು ನಾವು ವಿರೋಧಿಸುವುದಿಲ್ಲ. ಆದರೆ, ಪ್ರಾರ್ಥನೆ ವೇಳೆ ಶಬ್ದ ಮಾಲಿನ್ಯ ಉಂಟಾಗಿ ಸ್ಥಳೀಯರಿಗೆ ತೊಂದರೆ ಆಗುತ್ತಿರುವುದನ್ನು ಆಕ್ಷೇಪಿಸುತ್ತಿದ್ದೇವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next