ಬೆಂಗಳೂರು: ರಾಜ್ಯದ ಕನ್ನಡ ಶಾಲೆಗಳಲ್ಲಿ ಒಟ್ಟಾರೆ ಮಕ್ಕಳ ಕೊರತೆ ಕಾಡುತ್ತಿದ್ದರೆ, ನಗರದ ಕಾರ್ಪೊರೇಷನ್ ಶಾಲೆ, ಕಾಲೇಜುಗಳು ಬಾಲಕರ ಬರ ಎದುರಿಸುತ್ತಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೇ ಮೊದಲ ಬಾರಿಗೆ ತನ್ನ ವ್ಯಾಪ್ತಿಯ ಶಾಲಾ-ಕಾಲೇಜುಗಳ ಸಮೀಕ್ಷೆ ನಡೆಸಿದ್ದು, ಇದರಲ್ಲಿ ಒಟ್ಟಾರೆ ವಿದ್ಯಾರ್ಥಿಗಳಲ್ಲಿ ಬಾಲಕಿಯರ ಸಂಖ್ಯೆಯ ಅರ್ಧದಷ್ಟು ಮಾತ್ರ ಬಾಲಕರು ಇರುವುದು ಕಂಡುಬಂದಿದೆ.
ಪದವಿ, ಪದವಿಪೂರ್ವ, ಪ್ರೌಢ, ಪ್ರಾಥಮಿಕ ಹಾಗೂ ನರ್ಸರಿ ಸೇರಿ ಒಟ್ಟಾರೆ 155 ಶಾಲಾ-ಕಾಲೇಜುಗಳಿದ್ದು, 16,493
ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಪೈಕಿ ಬಾಲಕಿಯರ ಸಂಖ್ಯೆ 10,580 ಇದ್ದರೆ, ಬಾಲಕರ ಸಂಖ್ಯೆ ಕೇವಲ 5,913 ಇದೆ.
ಕ್ರಮವಾಗಿ ಶೇ. 64.15 ಹಾಗೂ 35.85ರಷ್ಟಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಅದರಲ್ಲೂ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಗಂಡುಮಕ್ಕಳ ಪ್ರಮಾಣ ಒಂದಂಕಿ ಕೂಡ ದಾಟಿಲ್ಲ! ಇನ್ನು ನಾಲ್ಕು ಪದವಿ ಕಾಲೇಜುಗಳಲ್ಲಿರುವ ಹೆಣ್ಣುಮಕ್ಕಳ ಸಂಖ್ಯೆ 858 ಇದ್ದರೆ, ಗಂಡುಮಕ್ಕಳ ಸಂಖ್ಯೆ 89ರಷ್ಟು ಮಾತ್ರ. ಆದರೆ, ಇದರಲ್ಲಿ ಎರಡು ಮಹಿಳಾ ಕಾಲೇಜುಗಳೇ ಆಗಿವೆ. ಅದೇ ರೀತಿ, 14 ಪದವಿ ಪೂರ್ವ ಕಾಲೇಜುಗಳಲ್ಲಿ 4,226 ವಿದ್ಯಾರ್ಥಿಗಳಲ್ಲಿ ಕೇವಲ 807 ಜನ ಮಾತ್ರ ಗಂಡು ಮಕ್ಕಳಿದ್ದಾರೆ.
32 ಪ್ರೌಢಶಾಲೆಗಳಲ್ಲಿ ಒಟ್ಟಾರೆ 5,140 ವಿದ್ಯಾರ್ಥಿಗಳಿದ್ದು, ಬಾಲಕರ ಸಂಖ್ಯೆ 1,845. ಉಳಿದಂತೆ ಪ್ರಾಥಮಿಕ ಮತ್ತು ನರ್ಸರಿ ಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚು -ಕಡಿಮೆ ಸರಿಸಮವಾಗಿದೆ. ಬಹುತೇಕ ಕಾರ್ಪೊರೇಷನ್ ಶಾಲಾ- ಕಾಲೇಜು ಕಟ್ಟಡಗಳು ವಾಣಿಜ್ಯ ಪ್ರದೇಶಗಳಲ್ಲಿವೆ. ಅಲ್ಲಿ ಈಗಾಗಲೇ ಹೈಟೆಕ್ ಮತ್ತು ಆಕರ್ಷಕ ಕಟ್ಟಡಗಳನ್ನು ಹೊಂದಿದ ಖಾಸಗಿ ಶಿಕ್ಷಣ ಸಂಸ್ಥೆಗಳಿರುತ್ತವೆ. ಇವುಗಳ ಮುಂದೆ ಬಿಬಿಎಂಪಿ ಶಾಲಾ-ಕಾಲೇಜುಗಳು ಮಂಕಾಗಿ ಕಾಣಿಸುತ್ತವೆ. ಇದು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣ ಇರಬಹುದು.
ತಾತ್ಸಾರ ಕಾರಣ?: ಪೋಷಕರಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಲ್ಲಿ ಇರುವ ತಾರತಮ್ಯ ಭಾವನೆಯೇ ಹೆಚ್ಚು ಹೆಣ್ಣು ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಲು ಕಾರಣವಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಅಭಿಪ್ರಾಯ ಪಡುತ್ತಾರೆ.
ಕಾರ್ಪೊರೇಷನ್ ಶಾಲಾ-ಕಾಲೇಜುಗಳಲ್ಲಿ ಬಾಲಕಿಯರಿಗೆ ಹೋಲಿಸಿದಾಗ, ಬಾಲಕರ ಸಂಖ್ಯೆ ತುಂಬಾ ಕಡಿಮೆ ಇರುವುದು ಕಂಡುಬಂದಿದೆ. ಆದರೆ, ಈ ವ್ಯತ್ಯಾಸ ಯಾಕೆ ಇರಬಹುದು ಎಂಬ ಬಗ್ಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆಯೂ ಸಮೀಕ್ಷೆ ನಡೆಸಲಾಗುವುದು.
ಎಸ್.ಜಿ. ರವೀಂದ್ರ ವಿಶೇಷ ಆಯುಕ್ತರು (ಶಿಕ್ಷಣ)