ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಹೊರಡಿಸಿರುವ ಮೀಸಲು ಪಟ್ಟಿಯಲ್ಲಿ ಸುಮಾರು 187 ವಾರ್ಡ್ ಗಳಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಈಗ ಎದುರಾಗಿದ್ದು , ಕಂದಾಯ ಸಚಿವ ಆರ್. ಅಶೋಕ ಇಂದು ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟನೆ ನೀಡಲಿದ್ದಾರೆ.
ಮೀಸಲು ಕರಡು ಪಟ್ಟಿಗೆ ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯ ನಾಯಕರಿಂದಲೂ ಆಕ್ಷೇಪ ವ್ಯಕ್ತವಾಗಿದೆ. 2011ರ ಜನಸಂಖ್ಯೆ, ವಾರ್ಡ್ ಹಂಚಿಕೆ ಇತ್ಯಾದಿ ಅಂಶಗಳನ್ನು ಆಧರಿಸಿದರೆ ಕೇವಲ 56 ಕಡೆ ಮಾತ್ರ ಮೀಸಲು ನಿಗದಿ ಸರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರ ಮಾತ್ರವಲ್ಲ ಬಿಜೆಪಿಯ ಪ್ರಭಾವಿ ಸಚಿವರಿಗೆ ವಿರುದ್ಧವಾಗಿರುವ ಕ್ಷೇತ್ರದಲ್ಲೂ ಮಹಿಳಾ ಮೀಸಲು ಪ್ರಮಾಣ ಹೆಚ್ಚಳ ಮಾಡಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಮೀಸಲಾತಿ ಸಮರ್ಪಕವಾಗಿ ಆಗಿಲ್ಲ ಎಂಬ ದೂರು ವ್ಯಕ್ತವಾಗಿದೆ.
ಈ ಮೀಸಲು ಕರಡಿಗೆ ಆಕ್ಷೇಪ ಸೂಚಿಸುವುದಕ್ಕೂ ಅರ್ಜಿ ಆಹ್ವಾನಿಸಲಾಗಿದ್ದು, ಶೇ.30 ರಷ್ಟು ಬದಲಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಬಿಜೆಪಿ- ಜೆಡಿಯು ಜಗಳ: ಸೋನಿಯಾಗೆ ಕರೆ ಮಾಡಿದ ನಿತೀಶ್ ಕುಮಾರ್
ಕಾಂಗ್ರೆಸ್ ನಾಯಕರಿಗೆ ಅವಕಾಶ ತಪ್ಪಿಸಬೇಕೆಂದೇ ಅವೈಜ್ಞಾನಿಕ ವಾರ್ಡ್ ಹಂಚಿಕೆ ಮಾಡಲಾಗಿದೆ. 93 ವಾರ್ಡ್ ಗಳ ಪೈಕಿ 76 ವಾರ್ಡ್ ಮಹಿಳೆಯರಿಗೆ ಮೀಸಲು ಇಟ್ಟಿರುವುದು ನ್ಯಾಯ ಸಮ್ಮತವೇ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರಕಾರವನ್ನು ಪ್ರಶ್ನಿಸಿದ್ದಾರೆ.