Advertisement

ನಿವೃತ್ತ ಶಿಕ್ಷಕರ ಕೈಬಿಡಲಿದೆ ಪಾಲಿಕೆ

12:46 AM Apr 27, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಪಾಲಿಕೆಯ ಶಿಕ್ಷಣ ವಿಭಾಗ ಮುಂದಾಗಿದ್ದು, ನಿವೃತ್ತ ಶಿಕ್ಷಕರನ್ನು ಕೈಬಿಡುವುದು, ಶಿಕ್ಷಕರ ಆಯ್ಕೆಗೆ ಸಮಿತಿ ರಚನೆ, ಆಯ್ದ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭ ಸೇರಿ ಕೆಲ ಪರಿಣಾಮಕಾರಿ ಬದಲಾವಣೆಗಳನ್ನು ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನಿಂದಲೇ ಜಾರಿಗೆ ತರಲು ಯೋಜನೆ ರೂಪಿಸಿದೆ.

Advertisement

ಪಾಲಿಕೆಯ ವ್ಯಾಪ್ತಿಯಲ್ಲಿರುವ ಶಾಲೆ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬ ಕಾರಣದಿಂದ ಹೆಚ್ಚಿನ ಮಕ್ಕಳು ಖಾಸಗಿ ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಶಿಕ್ಷಣ ವಿಭಾಗವು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ.

ಪ್ರಮುಖವಾಗಿ, ನಿವೃತ್ತ ಶಿಕ್ಷಕರ ಪೈಕಿ ಬಹುತೇಕರು ವಯೋವೃದ್ಧರಾಗಿದ್ದು, ಅವರಿಂದ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗಾಗಿ 2019-20ನೇ ಸಾಲಿನಿಂದ ಹೊರಗುತ್ತಿಗೆ ಆಧಾರದಲ್ಲಿ ಪಾಲಿಕೆಯ ಶಾಲಾ-ಕಾಲೇಜುಗಳಿಗೆ ನಿವೃತ್ತ ಶಿಕ್ಷಕರನ್ನು ನೇಮಿಸಿಕೊಳ್ಳದಿರಲು ಶಿಕ್ಷಣ ವಿಭಾಗ ನಿರ್ಧರಿಸಿದೆ.

ಪಾಲಿಕೆ ಶಾಲೆ, ಕಾಲೇಜು ಮಕ್ಕಳಿಗೆ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಪರಿಣಾಮಕಾರಿ ಬೋಧನೆ ಮಾಡುವ ಶಿಕ್ಷಕರ ಅಗತ್ಯವಿದೆ. ಹಾಗಾಗಿ ಯುವ ಶಿಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವುದು ಅಗತ್ಯವಾಗಿದ್ದು, ಇದರಿಂದ ಮಕ್ಕಳಿಗೂ ಹೆಚ್ಚಿನ ಅನುಕೂಲವಾಗುತ್ತದೆ ಎಂಬ ಅಂಶವನ್ನು ಪ್ರಸ್ತಾವನೆಯಲ್ಲಿ ಉಲ್ಲೇಖೀಸಲಾಗಿದೆ.

ಅತಿಥಿ ಶಿಕ್ಷಕರ ಆಯ್ಕೆ ಸೂಕ್ತ: ಪ್ರತಿ ವರ್ಷ ಟೆಂಡರ್‌ ಮೂಲಕ ಪಾಲಿಕೆಯ ಶಾಲಾ-ಕಾಲೇಜುಗಳಿಗೆ ಹೊರಗುತ್ತಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ, ಅವರು ತಮ್ಮನ್ನು ಖಾಯಂಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜತೆಗೆ, ಏ.10ಕ್ಕೆ ಶಿಕ್ಷಕರ ಗುತ್ತಿಗೆ ಅವಧಿ ಮುಗಿದರೂ, ಮೇ ತಿಂಗಳ ವೇತನವನ್ನೂ ನೀಡಬೇಕೆಂದು ವಾದಿಸುತ್ತಿದ್ದಾರೆ.

Advertisement

ಹೀಗಾಗಿ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಬೋಧನಾ ಸಿಬ್ಬಂದಿಯನ್ನು ಗೌರವ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರೆಂದು ಆಯ್ಕೆ ಮಾಡಲಾಗುತ್ತಿದ್ದು, ಅವರ ಅವಧಿ 10 ತಿಂಗಳು ಮಾತ್ರವಿರುತ್ತದೆ. ಅದೇ ಮಾದರಿಯನ್ನು ಪಾಲಿಕೆಯಲ್ಲೂ ಶಿಕ್ಷಕರ ಆಯ್ಕೆಗೆ ಒಂದು ಸಮಿತಿ ರಚನೆ ಮಾಡಿ, ಗೌರವ ಹಾಗೂ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದರಿಂದ ಅನುಕೂಲವಾಗಲಿದೆ ಎಂದು ಶಿಕ್ಷಣ ವಿಭಾಗ ಅಭಿಪ್ರಾಯಪಟ್ಟಿದೆ.

ಕೆಲವೆಡೆ ಆಂಗ್ಲ ಮಾಧ್ಯಮ: 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಆದರೆ, ಈಗಾಗಲೇ ಪಾಲಿಕೆಯ ನಾಲ್ಕು ಪ್ರಾಥಮಿಕ ಶಾಲೆ ಮತ್ತು ಮೂರು ಪ್ರೌಢ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವಿದೆ. ಅದರ ಹೊರತಾಗಿ, ಆಯ್ದ ಕೆಲವು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಪಾಲಿಕೆಯ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ.

ಶಿಶುವಿಹಾರಗಳಿಗೆ ಪುರುಷ ಸಿಬ್ಬಂದಿ ಬೇಡ: ಪಾಲಿಕೆಯಿಂದ ನಡೆಸಲಾಗುತ್ತಿರುವ ಶಿಶುವಿಹಾರಗಳಲ್ಲಿ ನಾಲ್ಕನೆಯ ದರ್ಜೆಯ ನೌಕರರ ಹುದ್ದೆಗಳು ಹಾಗೂ ಭದ್ರತಾ ಹುದ್ದೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಕೆಲಸ ಮಾಡುತ್ತಿದ್ದಾರೆ. ಆದರೆ, ಶಿಶುವಿಹಾರಗಳಲ್ಲಿ ಪುರುಷರಿಗಿಂತಲೂ ಮಹಿಳಾ ಸಿಬ್ಬಂದಿಯನ್ನು ನೇಮಿಸುವುದು ಸೂಕ್ತವಾಗಿರುವುದರಿಂದ ಪುರುಷ ಸಿಬ್ಬಂದಿಯನ್ನು ಹಿಂಪಡೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನುಮೋದನೆ ದೊರೆಯುವುದೆ?: ಪಾಲಿಕೆಯ ಶಾಲೆ, ಕಾಲೇಜುಗಳಿಗೆ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಲು ಆಯ್ಕೆ ಸಮಿತಿ ಮಾಡಲು ಪಾಲಿಕೆ ಯೋಜನೆ ರೂಪಿಸಿದೆ. ಆದರೆ, ಪ್ರಸ್ತುತ ಪಾಲಿಕೆಯ ಬಹುತೇಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಶಾಸಕರ ಶಿಫಾರಸ್ಸಿನ ಮೇಲೆ ಆಯ್ಕೆಯಾಗಿದ್ದು, ಪಾರದರ್ಶಕ ಆಯ್ಕೆಗೆ ಜನಪ್ರತಿನಿಧಿಗಳು ಅವಕಾಶ ಮಾಡಿಕೊಡುವರೇ ಎಂಬ ಪ್ರಶ್ನೆ ಮೂಡಿದೆ.

ಶಿಕ್ಷಣ ವಿಭಾಗದ ವಿದ್ಯಾಧಿಕಾರಿಗಳು ಪಾಲಿಕೆ ಶಾಲೆಗಳಲ್ಲಿ ಪರಿಣಾಮಕಾರಿ ಬೋಧನೆ ಹಾಗೂ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಲವು ಸಲಹೆ ಒಳಗೊಂಡ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು.
-ಕೆ.ಆರ್‌.ಪಲ್ಲವಿ, ಸಹಾಯಕ ಆಯುಕ್ತರು (ಶಿಕ್ಷಣ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next