Advertisement

67 ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ಯೋಜನೆ

12:29 PM Jun 21, 2022 | Team Udayavani |

ಬೆಂಗಳೂರು: ಕೆರೆಗಳ ಅಭಿವೃದ್ಧಿ ವಿಚಾರದಲ್ಲಿ ಬಿಬಿಎಂಪಿ ಹೊಸ ಯೋಜನೆ ರೂಪಿಸಿದೆ. ಈಗಾಗಲೆ ಮುಖ್ಯಮಂತ್ರಿಗಳ ಸೂಚನೆಯಂತೆ 37 ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದರ ಜತೆಗೆ ಇನ್ನೂ 67 ಕೆರೆಗಳನ್ನು ಅಭಿವೃದ್ಧಿ ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಅದರ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ.

Advertisement

ಒಂದು ಕಾಲದಲ್ಲಿ ಸಾವಿರ ಕೆರೆಗಳ ನಗರ ಎಂದು ಗುರುತಿಸಿಕೊಳ್ಳುತ್ತಿದ್ದ ಬೆಂಗಳೂರಿನಲ್ಲಿ ಸದ್ಯ 201 ಕೆರೆಗಳು ಮಾತ್ರ ಉಳಿದಿವೆ. ಹೀಗೆ ಉಳಿದ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದ್ದು, ಅದರ ಭಾಗವಾಗಿ ಮೊದಲ ಹಂತದಲ್ಲಿ 37 ಕೆರೆಗಳ ಅಭಿವೃದ್ಧಿಗೆ ಈಗಾಗಲೆ ಚಾಲನೆ ನೀಡಲಾಗಿದೆ. ಅದರ ಜತೆಗೆ ಹೆಚ್ಚುವರಿಯಾಗಿ 67 ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದ್ದು, ಅದರ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗುತ್ತಿದೆ.

200 ಕೋಟಿ ರೂ. ವೆಚ್ಚ: ಬಿಬಿಎಂಪಿ ಸಿದ್ಧಪಡಿಸಿರುವ ಯೋಜನೆಯಂತೆ 67 ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂ. ಅವಶ್ಯಕವಾಗಿದೆ. ಆ ಅನುದಾನವನ್ನು ಸರ್ಕಾರದಿಂದ ಪಡೆಯಲು ನಿರ್ಧರಿಸಲಾಗಿದೆ. ಅದಕ್ಕಾಗಿ ಈಗಾಗಲೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಕ್ರಿಯಾಯೋಜನೆ ಪ್ರಕಾರ 16 ಕೆರೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲಾಗುತ್ತಿದೆ. ಅದರಂತೆ ಕೆರೆಗಳಿಗೆ ಕೊಳಚೆ ನೀರು ಸೇರ್ಪಡೆಯಾಗದಂತೆ ತಡೆಯು ವುದು, ಕೆರೆಗಳ ಗಡಿ ಗುರುತಿಸುವುದು, ಕೆರೆ ಸುತ್ತ ಉದ್ಯಾನ ನಿರ್ಮಾಣ, ವಾಕಿಂಗ್‌ ಪಥ ನಿರ್ಮಾಣ ಸೇರಿ ಇನ್ನಿತರ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಅಗತ್ಯವಿದ್ದರೆ ಕರೆ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ಉಳಿದ 51 ಕೆರೆಗಳಲ್ಲಿ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಲಾಗುತ್ತದೆ. ಪ್ರಮುಖವಾಗಿ ಕೆರೆಗಳ ಸುತ್ತ ಫೆನ್ಸಿಂಗ್‌ ಅಳವಡಿಸುವ ಮೂಲಕ ಕೆರೆ ಒತ್ತುವರಿ ತಡೆಯುವ ಕಾರ್ಯ ಮಾಡಲಾಗುತ್ತದೆ. ಹಾಗೆಯೇ, ಕೆಲ ಕೆರೆಗಳಲ್ಲಿ ವಾಕಿಂಗ್‌ ಪಥ ನಿರ್ಮಾಣ, ಭದ್ರತಾ ಸಿಬ್ಬಂದಿ ಕೊಠಡಿ ನಿರ್ಮಾಣ, ಹೂಳು ತೆಗೆಯುವುದು ಹೀಗೆ ಪ್ರತ್ಯೇಕ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

2023ರಿಂದ ಅಭಿವೃದ್ಧಿ ಕಾರ್ಯ: ಇನ್ನೊಂದು ತಿಂಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಅಲ್ಲಿಂದ ಅನು ಮೋದನೆ ದೊರೆಯುವ ಭರವಸೆ ಸಿಕ್ಕ ನಂತರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಪ್ರಮುಖ ವಾಗಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಿ, ಗುತ್ತಿಗೆ ದಾರರನ್ನು ನೇಮಿಸಲಾಗುತ್ತದೆ.

Advertisement

ಎಲ್ಲ ಕೆರೆಗಳಿಗೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸುವ ಬಗ್ಗೆಯೂ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೆ 2023ರಿಂದ ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಯಾವೆಲ್ಲ ಕೆರೆಗಳ ಅಭಿವೃದ್ಧಿ? : ಅಕ್ಷಯನಗರ ಕೆರೆ, ಗುಬ್ಬಲಾಳ ಕೆರೆ, ದೊರೆಕೆರೆ, ಬಸಾಪುರ ಕೆರೆ, ಮೀನಾಕ್ಷಿ ಕೆರೆ, ಎಲೇನಹಳ್ಳಿ ಕೆರೆ, ಗೊಟ್ಟಿಗೆರೆ ಕೆರೆ, ದೊಡ್ಡಕಲ್ಲಸಂದ್ರ ಕೆರೆ, ಕೋನಪ್ಪ ಅಗ್ರಹಾರ ಕೆರೆ, ಸುಬ್ರಹ್ಮಣ್ಯಪುರ ಕೆರೆ, ಕಂಬತ್ತಹಳ್ಳಿ ಕೆರೆ, ಸ್ವರ್ಣಕುಂಟೆ ಗುಡ್ಡೆಕೆರೆ, ಬೇಗೂರು ಕೆರೆ, ಚೌಡೇಶ್ವರಿ ಲೇಔಟ್‌ ಕೆರೆ, ಕೋಣನಕುಂಟೆ ಕೆರೆ, ಪರಪ್ಪನ ಅಗ್ರಹಾರ ಕೆರೆ, ಸಾರಕ್ಕಿ ಕೆರೆ, ಗಾರೇಬಾವಿಪಾಳ್ಯ ಕೆರೆ, ಮೇಸಿŒಪಾಳ್ಯ ಕೆರೆ, ಮಲ್ಲತ್ತಹಳ್ಳಿ ಕೆರೆ, ಪಟ್ಟಣಗೆರೆ ಕೆಂಚನಹಳ್ಳಿ ಕೆರೆ, ಅಂದರಹಳ್ಳಿ ಕೆರೆ, ಉಲ್ಲಾಳ ಕೆರೆ, ದುಬಾಸಿಪಾಳ್ಯ ಕೆರೆ, ಗಾಂಧಿನಗರ ಹೊಸಕೆರೆ, ಲಿಂಗದೀರನಹಳ್ಳಿ ಕೆರೆ, ಹಲಸೂರು ಕೆರೆ, ಕಗ್ಗದಾಸಪುರ ಕೆರೆ, ಕಾಚರಕನಹಳ್ಳಿ ಕೆರೆ, ಚಿನ್ನಪ್ಪನಹಳ್ಳಿ ಕೆರೆ, ಸೌಲ್ಕೆರೆ, ದೊಡ್ಡನೆಕುಂದಿ ಕೆರೆ, ಪಣತ್ತೂರು ಕೆರೆ, ಭೋಗೇನಹಳ್ಳಿ ಕೆರೆ, ಹೂಡಿ ಗಿಡ್ಡನಕೆರೆ, ವಾರಣಾಸಿ ಕೆರೆ, ಗುಂಜೂರು ಪಾಳ್ಯ ಕೆರೆ, ಜುನ್ನಸಂದ್ರ ಕೆರೆ, ಪಟ್ಟಣಂದೂರು ಅಗ್ರಹಾರ ಕೆರೆ (1 ಮತ್ತು 2), ಗುಜೂರು ಕೆರೆ, ಗುಂಜೂರು ಮಾವಿನಕೆರೆ, ನಾರಾಯಣಪುರ ಕೆರೆ, ಕೌಡೇನಹಳ್ಳಿ ಕೆರೆ, ಭಟ್ಟರಹಳ್ಳಿ ಕೆರೆ, ಕಲ್ಕೆರೆ, ಗಂಗಾಶೆಟ್ಟಿ ಕೆರೆ, ಹೊರಮಾವು ಕೆರೆ, ನರಸಪ್ಪನಹಳ್ಳಿ ಕೆರೆ, ದೊಡ್ಡಬಿದರಕಲ್ಲು ಕೆರೆ, ಅಬ್ಬಿಗೆರೆ ಕೆರೆ, ಶಿವಪುರ ಕೆರೆ, ರಾಚೇನಹಳ್ಳಿ ಕೆರೆ, ತಿರುಮೇನಹಳ್ಳಿ ಕೆರೆ, ವೆಂಕಟೇಶಪುರ ಕೆರೆ, ಸಿಂಗಾಪುರ ಕೆರೆ, ಸ್ಯಾಂಕಿ ಕೆರೆ, ಚಿಕ್ಕಬೆಟ್ಟಹಳ್ಳಿ ಕೆರೆ, ಅಲ್ಲಾಳಸಂದ್ರ ಕೆರೆ, ಅವಲಹಳ್ಳಿ ಕೆರೆ, ವಡೇರಹಳ್ಳಿ ಕೆರೆ, ಜಕ್ಕೂರು ಕೆರೆ, ಯಲಹಂಕ ಕೆರೆ.

ಕೆರೆಗಳ ಸಂರಕ್ಷಣೆಗಾಗಿ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. 200 ಕೋಟಿ ರೂ.ವೆಚ್ಚದಲ್ಲಿ 67 ಕೆರೆಗಳ ಅಭಿವೃದ್ಧಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. – ಡಾ|ರಾಮಪ್ರಸಾದ ಮನೋಹರ್‌, ಬಿಬಿಎಂಪಿ ವಿಶೇಷ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next