ಬೆಂಗಳೂರು: ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಳೆ ಅವಾಂತರ ತಡೆಯಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಶುಕ್ರವಾರ ರಾಜಕಾಲುವೆ ವಿಭಾಗದ ಮುಖ್ಯ ಅಭಿಯಂತರರ ಜತೆ ಸಭೆ ನಡೆಸಿದ ಅವರು, ನಗರದಲ್ಲಿ ಮಳೆಯಿಂದ ಪ್ರವಾಹ ಉಂಟಾದರೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಈ ಹಿಂದೆ ಡಿಸಿಎಂ ಜತೆ ಸಭೆ ನಡೆಸಲಾಗಿತ್ತು. ಪಾಲಿಕೆ ವ್ಯಾಪ್ತಿಯಲ್ಲಿ ಪ್ರವಾಹ ಉಂಟಾಗಬಹುದಾದ 1,000ಕ್ಕೂ ಹೆಚ್ಚು ಸ್ಥಳಗಳನ್ನು ಈಗಾಗಲೇ ಗುರುತಿಸಿದ್ದು, ಇಲ್ಲಿ ಯಾವುದೇ ಅನಾಹುತ ಆಗದಂತೆ ಎಚ್ಚರ ವಹಿಸಲಾಗಿದೆ ಎಂದು ಹೇಳಿದರು.
ನಗರದ 182 ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸ್ಥಿತಿ ಇದ್ದು, 120 ಮಿ.ಮೀ ಮೆಲ್ಪಟ್ಟು ಮಳೆ ಬಂದರೆ ಮಾತ್ರ ಪ್ರವಾಹ ಎದುರಾಗಲಿದೆ. 182ರ ಪೈಕಿ 28 ಅತಿ ಸೂಕ್ಷ್ಮಪ್ರದೇಶಗಳಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಹಯೋಗದಲ್ಲಿ 18 ಕಡೆ ನೀರಿನ ಮಟ್ಟ ಅಳೆಯುವ ಸಂವೇದಕಗಳನ್ನು (ಸೆನ್ಸಾರ್) ಅಳವಡಿಸಲಾಗಿದೆ. ಉಳಿದ 10 ಕಡೆ ಶೀಘ್ರವೇ ಸಂವೇದಕ ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದರು.
ತಾತ್ಕಾಲಿಕ ಕೊಠಡಿ ಸ್ಥಾಪನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗುವ ಅನಾಹುತಗಳ ನಿವಾರಣೆಗೆ ಈಗಾಗಲೇ 9 ಕಡೆ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದ್ದು, ಆಯಾ ವಲಯದ ಪ್ರತಿ ಉಪವಿಭಾಗ ಕಚೇರಿಗಳಲ್ಲಿ 63 ತಾತ್ಕಾಲಿಕ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ತುರ್ತು ಪರಿಹಾರ ಕಾರ್ಯಕ್ಕೆ ಅಗತ್ಯವಿರುವ ಯಂತ್ರಗಳು, ಸಲಕರಣೆಗಳು ಹಾಗೂ ಸಿಬ್ಬಂದಿ ತಾತ್ಕಾಲಿಕ ನಿಯಂತ್ರಣ ಕೊಠಡಿಯಲ್ಲಿ ಇರಲಿದ್ದಾರೆ.
ಮರ ತೆರವಿಗೆ 28 ತಂಡ: ಮಳೆಗಾಲದಲ್ಲಿ ಧರೆಗುರುಳುವ ಮರಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಈಗಾಗಲೇ 21 ತಂಡಗಳಿವೆ. ಹೆಚ್ಚುವರಿಯಾಗಿ 7 ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬ ಮೇಲ್ವಿಚಾರಕರಿರುತ್ತಾರೆ. ಮರಗಳನ್ನು ತೆರವುಗೊಳಿಸಲು ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಇನ್ನಿತರ ಸಲಕರಣೆ ನೀಡುವ ಜತೆಗೆ ಮರದ ತುಂಡುಗಳ ಸಾಗಣೆಗೆ ವಾಹನಗಳನ್ನು ನಿಯೋಜಿಸಲಾಗಿದೆ.
ಸೆನ್ಸಾರ್ ಕಾರ್ಯ ನಿರ್ವಹಣೆ:ಒಂದು ಸೆನ್ಸಾರ್ ಅಳವಡಿಕೆಗೆ 35 ಸಾವಿರ ರೂ. ವೆಚ್ಚವಾಗಲಿದ್ದು, ಪ್ರತಿ ಸೆನ್ಸಾರ್ ಯಂತ್ರಕ್ಕೂ ಸೋಲಾರ್ ಸಂಪರ್ಕವಿದೆ. ಇದರಿಂದ ಅಂತರ್ಜಲದ ಮೂಲಕ ಕೆಎಸ್‌ಎನ್‌ಎಂಡಿಸಿ ನಿಯಂತ್ರಣ ಕೊಠಡಿಗೆ ಮಾಹಿತಿ ತಿಳಿಯಲಿದೆ. ಕೂಡಲೆ ಹವಾಮಾನ ಇಲಾಖೆ ಸಿಬ್ಬಂದಿ ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಮಾಹಿತಿ ರವಾನೆ ಮಾಡಲಿದ್ದಾರೆ. ಸೆನ್ಸಾರ್ ಅಳವಡಿಸಿರುವ ಕಡೆ ರಾಜಕಾಲುವೆಯಲ್ಲಿ ಹರಿಯುವ ನೀರಿನ ಮಟ್ಟವನ್ನು ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯವಿರುವುದಿಲ್ಲ. ಕೆಂಪು ಬಣ್ಣವಿದ್ದರೆ ಅಪಾಯ ಎಂದರ್ಥ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಅರ್ಥವಿದೆ. ಇಲಾಖೆ ಮಾಹಿತಿ ಆಧರಿಸಿ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ತೆರಳುವಂತೆ ಸೂಚನೆ ನೀಡಬಹುದು. ಇದರಿಂದ ಪ್ರವಾಹದಿಂದಾಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ.