Advertisement
ಶಾಲಾ ಕಟ್ಟಡ ಏಕಾಏಕಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದಲ್ಲಿ ನಿಲ್ಲಿಸಿದ ವಾಹನಗಳಿಗೆ ಹಾನಿಯಾಗಿದೆ. ಜತೆಗೆ ಕಾರುಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ. ಕೆಲವು ವಾಹನಗಳಿಗೆ ಭಾರೀ ಹಾನಿಯಾಗಿದೆ. ಅಕ್ಕಪಕ್ಕದ ಮನೆಗಳಿಗೂ ತೊಂದರೆ ಆಗಿದೆ. ಅನಿರೀಕ್ಷಿತ ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದರು. ಘಟನೆ ಅರಿತು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Related Articles
Advertisement
ಒಂದು ವೇಳೆ ಶಾಲಾ ಸಮಯದಲ್ಲಿ ಕುಟ್ಟಡ ಕುಸಿದು ಬಿದ್ದು ದೊಡ್ಡ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಶಾಲೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೋಷಕರು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಶಾಲಾ ಕಟ್ಟಡ ಹಳೆಯದಾಗಿದೆ ಎಂದು ಹಲವು ಬಾರಿ ದೂರು ನೀಡಿದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಕ್ಯಾರೆ ಎಂದಿಲ್ಲ. ಬೆಳಗಿನ ಜಾವ ಕಟ್ಟಡ ಕುಸಿದಿದೆ. ಒಂದು ವೇಳೆ ಮಕ್ಕಳು ಇದ್ದಾಗ ಕಟ್ಟಡ ಕುಸಿದಿದ್ದರೆ ದುರಂತಕ್ಕೆ ಯಾರು ಹೊಣೆ ಎಂದು ಸ್ಥಳೀಯರು ಹಾಗೂ ಮಕ್ಕಳ ಪೋಷಕರು ಕಿಡಿಕಾಡಿದರು. ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಸ್ಕೂಲ್. ಈ ಸ್ಕೂಲ್‌ನಲ್ಲಿ ಒಟ್ಟು 90 ಮಕ್ಕಳು ಪ್ರವೇಶ ಪಡೆದುಕೊಂಡಿದ್ದರು. ಅದರೆ, 90 ಮಕ್ಕಳ ಪೈಕಿ 75 ಮಕ್ಕಳು ಮಾತ್ರ ಪ್ರತಿದಿನ ಶಾಲೆಗೆ ಬರುತ್ತಿದ್ದರು. ದೇವರ ದಯೆಯಿಂದ ಶಾಲಾ ಸಮಯದಲ್ಲಿ ಕಟ್ಟಡ ಬಿದ್ದಿಲ್ಲ ಎಂದು ಹೇಳಿದರು.
ಘಟನೆಗೆ ಪಾಲಿಕೆಯೇ ನೇರ ಹೊಣೆ
ಪಾಲಿಕೆಗೆ ಸೇರಿದ ನರ್ಸರಿ ಶಾಲಾ ಕಟ್ಟಡ ನೆಲಸಮವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಾಜಿ ಕಾರ್ಪೋರೇಟರ್ ಸಯ್ಯದ್ ಸುಜಾವುದ್ದೀನ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಈ ಶಾಲೆ ಕಟ್ಟಡಕ್ಕೆ 80 ವರ್ಷವಾಗಿದೆ. ಎರಡು ತಿಂಗಳ ಹಿಂದೆ ಶಾಸಕ ರಿಜ್ವಾನ್ ಅರ್ಷದ್ ಭೇಟಿ ನೀಡಿದ್ದರು. ಆಗ ಶಾಲೆ ಸ್ಥಳಾಂತರ ಮಾಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಆದರೂ, ಶಿಕ್ಷಣ ಇಲಾಖೆ ವಿಭಾಗ ಕ್ರಮ ಕೈಗೊಂಡಿಲ್ಲ. ಈ ಘಟನೆಗೆ ಪಾಲಿಕೆಯೇ ನೇರ ಹೊಣೆ ಎಂದು ಆರೋಪಿಸಿದರು.
ತಪ್ಪಿತಸ್ಥರ ವಿರುದ್ಧ ಕ್ರಮ: ಮಧು ಬಂಗಾರಪ್ಪ
ಬೆಂಗಳೂರು: ಶಿವಾಜಿನಗರದ ನರ್ಸರಿ ಶಾಲೆ ಕಟ್ಟಡ ಕುಸಿತ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವ ಕಾರಣದಿಂದ ಘಟನೆ ನಡೆದಿದೆ ಎಂದು ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಯಾರಿಗಾದರೂ ಅನಾಹುತವಾದಾಗ ಪರಿಹಾರ ನೀಡುತ್ತೇವೆ, ಇದುವೇ ಪರಿಹಾರ ಅಲ್ಲ. ಇಂತಹ ಸಂದರ್ಭ ಮರುಕಳಿಸದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಯಾವುದೇ ಕಟ್ಟಡವಾಗಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಟ್ಟಡಗಳು ಶಿಥಿಲಗೊಂಡಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಮೊದಲು ನೋಡಬೇಕು ನಂತರ ಶಿಕ್ಷಣ ಎಂದರು.
ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣವನ್ನ ಸರ್ಕಾರದಿಂದ ನಿಲ್ಲಿಸಲಾಗಿತ್ತು. ಕಟ್ಟಡ ಕಾಮಗಾರಿಗಳನ್ನು ಹೊಸ ಸರ್ಕಾರ ಬಂದ ತಕ್ಷಣ ನಿಲ್ಲಿಸಲಾಗಿತ್ತು. ಆದರೆ, ಇವಾಗ ಹಣ ಬಿಡುಗಡೆ ಮಾಡಲಾಗಿದೆ. ಇವಾಗ ಯಾವುದೇ ಸಮಸ್ಯೆ ಇಲ್ಲ, 8500 ಕಟ್ಟಡಗಳ ಕಾಮಗಾರಿ ಕೆಲಸ ಆರಂಭವಾಗಿದೆ. ಇಂತಹ ಹೇಳಿಕೆಗಳು ವಿರೋಧ ಪಕ್ಷಗಳಿಂದ ಬರುವುದು ಸಹಜ ಎಂದರು.
ಶಿವಾಜಿನಗರದ ಕ್ಷೇತ್ರದಲ್ಲಿ ಹಳೇ ಶಾಲಾ ಕಟ್ಟಡಗಳನ್ನು ಗುರುತಿಸಿದ್ದೇವೆ. ಈಗ ಕುಸಿದಿರುವ ಶಾಲಾ ಕಟ್ಟಡ ಸೇರಿ 3 ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಹೊಸ ಕಟ್ಟಡ ನಿರ್ಮಾ ಣಕ್ಕೆ ಟೆಂಡರ್ ಕೂಡ ಕರೆದಿದ್ದೇವೆ. ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತೇವೆ. ● ರಿಜ್ವಾನ್ ಅರ್ಷದ್, ಶಿವಾಜಿನಗರ ಶಾಸಕ.
ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಲಿಕೆಯ ನರ್ಸರಿ ಶಾಲಾ ಕಟ್ಟಡ ಕುಸಿದು ಬಿದ್ದಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆ ನಡೆದ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಜೆಸಿಬಿ ಯಂತ್ರದ ಮೂಲಕ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಶೀಘ್ರದಲ್ಲೇ ನರ್ಸರಿ ಶಾಲೆಯ ಸ್ಥಳಾಂತರ ಕಾರ್ಯ ನಡೆಯಲಿದೆ. ● ಪ್ರೀತಿ ಗೆಹೆಲೋತ್, ಬಿಬಿಎಂಪಿ ವಿಶೇಷ ಆಯುಕ್ತರು ಶಿಕ್ಷಣ ವಿಭಾಗ.