ಬೆಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ತಕರಾರುಗಳಲ್ಲಿ, ಸಿವಿಲ್ ಕೋರ್ಟ್ ತೀರ್ಪುಗಳನ್ನು (ಡಿಕ್ರಿ) ಮೇಲ್ಮನವಿ ಮೂಲಕ ಪ್ರಶ್ನಿಸದ ಪಾಲಿಕೆ ಕ್ರಮದ ಬಗ್ಗೆ ಹೈಕೋರ್ಟ್ ಶುಕ್ರವಾರ ಬೇಸರ ವ್ಯಕ್ತಪಡಿಸಿದೆ.
ನಗರದ ಮಲ್ಲೇಶ್ವರಂ ವ್ಯಾಪ್ತಿಗೆ ಬರುವ ಉಭಯ ವೇದಾಂತ ಪ್ರವರ್ತನಾ ಸಭಾ ನಿಯಮಗಳನ್ನು ಉಲ್ಲಂಘಸಿ ತನ್ನ ವಶದಲ್ಲಿರುವ ಕಟ್ಟಡವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿದೆ ಎಂದು ಆರೋಪಿಸಿ ಮಲ್ಲೇಶ್ವರಂ ನಿವಾಸಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ಎ.ಎಸ್. ಒಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ವಿವಾದಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್‌ನ ತೀರ್ಪು ಇದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಹಾಗಿದ್ದರೆ ಸಿವಿಲ್ ಕೋರ್ಟ್ ತೀರ್ಪು ಇರುವ ಪ್ರಕರಣಗಳನ್ನು ಮೇಲ್ಮನವಿ ಯಾಕೆ ಸಲ್ಲಿಸಲಾಗುತ್ತಿಲ್ಲ ಎಂದು ಬಿಬಿಎಂಪಿಯನ್ನು ಪ್ರಶ್ನಿಸಿತು.
ಅಲ್ಲದೆ, ಬಿಬಿಎಂಪಿಗೆ ಸೇರಿದ ಸ್ಥಿರಾಸ್ತಿಗಳ ತಕಾರರುಗಳಲ್ಲಿ ನಿಯಮಗಳಲ್ಲಿ ಉಲ್ಲಂ ಸಿದ ಅಥವಾ ಒತ್ತುವರಿ ಮಾಡಿದ ಪ್ರಕರಣಗಳನ್ನು ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಿಲ್ಲವೇಕೆ? ಸಿವಿಲ್ ಕೋರ್ಟ್ ಡಿಕ್ರಿ ಎಂದಾಕ್ಷಣ ಬಿಬಿಎಂಪಿಯ ಕಾನೂನು ವಿಭಾಗ ಕೈಕಟ್ಟಿ ಕುಳಿತುಕೊಳ್ಳುವುದು ಏಕೆ? ಅಂತಹ ಡಿಕ್ರಿಗಳನ್ನು ಪ್ರಶ್ನಿಸಿ ಮೇಲ್ಮನವಿ ಏಕೆ ಸಲ್ಲಿಸುತ್ತಿಲ್ಲ.
ಅಧಿಕಾರಿಗಳ ಈ ವರ್ತನೆ ಸಹಿಸುವುದಿಲ್ಲ ಎಂದು ಹೇಳಿದ ನ್ಯಾಯಪೀಠ, ಈ ಸಂಬಂಧ ವಿವರವಾದ ಪ್ರಮಾಣಪತ್ರ ಸಲ್ಲಿಸುವಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.