ಬೆಂಗಳೂರು: ಜಾಹೀರಾತು ನೀತಿಗೆ ಸಂಬಂಧಿಸಿದಂತೆ ಬಿಬಿಎಂಪಿಯು 2018ರಲ್ಲಿ ರಚಿಸಿರುವ ಬೈಲಾದ ಬಗ್ಗೆಯೇ ಈಗ ದ್ವಂದ್ವಗಳು ಮೂಡಿರುವುದರಿಂದ ನಗರಾಭಿವೃದ್ಧಿ ಇಲಾಖೆ “ಜಾಹೀರಾತು ನಿಯಮ 2019’ರ ಕರಡನ್ನು ವಿರೋಧಿಸಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಪಾಲಿಕೆಯಲ್ಲಿ ಒಮ್ಮತ ಮೂಡುತ್ತಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಿವ ಸ್ಕೈವಾಕ್, ಬಸ್ ನಿಲ್ದಾಣ ಹಾಗೂ ಶೌಚಾಲಯದ ಜಾಗಗಳಲ್ಲಿ ಜಾಹೀರಾತು ಹಾಕುವುದಕ್ಕೆ ಪಾಲಿಕೆ ಅನುಮತಿ ನೀಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಜಾಹೀರಾತಿನ ಬಗ್ಗೆ ಚರ್ಚೆ ಮಾಡುವುದಕ್ಕೆ ಪಾಲಿಕೆ ಜು.29ಕ್ಕೆ ಕರೆದಿದ್ದ ವಿಶೇಷ ಸಭೆಯಲ್ಲಿ ಆಡಳಿತ ಪಕ್ಷದ ನಾಯಕರೂ ಸೇರಿದಂತೆ ಕೆಲವು ನಾಯಕರು ಜಾಹೀರಾತಿಗೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು. ಈ ಬಗ್ಗೆ ಕ್ರಿಯಾಲೋಪದ ಪ್ರಶ್ನೆ ಎತ್ತಿದ್ದ ವಿರೋಧ ಪಕ್ಷದ ನಾಯಕರು “ಕರ್ನಾಟಕ ಪೌರ ಆಡಳಿತ ಕಾಯ್ದೆ-1976ರಕಲಂ 425 ಪ್ರಕಾರ ಬಿಬಿಎಂಪಿ ಬೈಲಾ ರಚಿಸಬಹುದು.
ಇದರಲ್ಲಿ ಲೋಪವಾದರೆ ಅಥವಾ ಬೈಲಾ ರೂಪಿಸುವಲ್ಲಿ ವಿಫಲವಾದರೆ ಸರ್ಕಾರ ಕೆಎಂಸಿ ಕಾಯ್ದೆಯ ಕಲಂ 427ರ ಪ್ರಕಾರ ಮಧ್ಯ ಪ್ರವೇಶಿಸಿ, ಹೊಸ ನೀತಿಯನ್ನು ಜಾರಿ ಮಾಡುವುದಕ್ಕೆ ಅವಕಾಶವಿದೆ. ಆದರೆ, ಈ ವಿಷಯದಲ್ಲಿ ಪಾಲಿಕೆಯಿಂದ ಯಾವುದೇ ಲೋಪವಾಗಿಲ್ಲ. ಪಾಲಿಕೆ 2018ರ ಆ.28ರಂದು ಅನುಮೋದನೆ ನೀಡಿರುವ “ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ.
ಆದರೆ, ಈಗ ನಗರಾಭಿವೃದ್ಧಿ ಇಲಾಖೆ “ಜಾಹೀರಾತು ನಿಯಮ 2019’ರ ಕರಡು ಅಧಿಸೂಚನೆ ತಂದಿರುವುದು ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದ್ದರು. ವಿರೋಧ ಪಕ್ಷದ ಸದಸ್ಯರು ಜಾಹೀರಾತಿನ ಬಗ್ಗೆ ಚರ್ಚೆ ಮುಗಿಯುವ ಮುನ್ನವೇ, ನಗರಾಭಿವೃದ್ಧಿ ಇಲಾಖೆಯು “ಬಿಬಿಎಂಪಿ ಜಾಹೀರಾತು ನಿಯಮ-2019’ರ ಕರಡಿನ ಹಿಂದೆ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಕೈವಾಡವಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದ್ದು, ಚುನಾವಣೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಜಾಹೀರಾತಿಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅದೇ ರೀತಿ ಜು.30ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ನಗರಾಭಿವೃದ್ಧಿ ಇಲಾಖೆಯ ಕರಡಿನ ಬಗ್ಗೆ ನಿರ್ಣಯ ತೆಗೆದುಕೊಳ್ಳದೆ ಇರುವುದಕ್ಕೆ ಆಡಳಿತ ಪಕ್ಷದ ಕೆಲವು ಸದಸ್ಯರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಿಂದ ನೋಡಿದರೆ ಜಾಹೀರಾತಿಗೆ ಅನುವು ಮಾಡಿಕೊಡುವುದಕ್ಕೆ ಸರ್ವ ಪಕ್ಷಗಳ ಕೆಲವು ಸದಸ್ಯರು ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ.
ಇಂದು ವಿಚಾರಣೆ: 2018ರ ಬಿಬಿಎಂಪಿ ಬೈಲಾವನ್ನೇ ಮುಂದುವರಿಸುವಂತೆ ಕೆಲವರು ಕೋರ್ಟ್ ಮೊರೆ ಹೋಗಿದ್ದು, ಇಂದು ಹೈಕೋರ್ಟ್‌ನಲ್ಲಿ (ಆ.1) ವಿಚಾರಣೆಗೆ ಬರಲಿದೆ.
ಮತ್ತೂಮ್ಮೆ ಸಭೆ ಸಾಧ್ಯತೆ: ಜು.29ಕ್ಕೆ ಜಾಹೀರಾತಿಗೆ ಸಂಬಂಧಿಸಿದಂತೆ ಬಿಬಿಎಂಪಿಯು ವಿಶೇಷ ಸಭೆ ನಡೆಸಿತ್ತು. ಈ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದರಿಂದ ಆ.6 ಅಥವಾ 7ಕ್ಕೆ ಮತ್ತೊಮ್ಮೆ ಸಭೆ ನಡೆಯುವ ಸಾಧ್ಯತೆ ಇದೆ.
ನಗರದ ಹೊರಾಂಗಣ ಜಾಹೀರಾತಿನಲ್ಲಿ ಬಳಸುವ ಪ್ಲಾಸ್ಟಿಕ್‌ನಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಹೀಗಾಗಿ, ಮತ್ತೆ ಜಾಹೀರಾತಿಗೆ ಅವಕಾಶ ನೀಡಬಾರದು. ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದಕ್ಕೆ ಕೆಲವರು ಹಲ್ಲೆ ಮಾಡುವುದಕ್ಕೂ ಪ್ರಯತ್ನಿಸಿದ್ದರು.
-ಮಾಹಿ ಗೌಡ, 2018ರ ಬಿಬಿಎಂಪಿ ಬೈಲಾ ಇರಲೆಂದು ಅರ್ಜಿ ಸಲ್ಲಿಸಿರುವ ಅರ್ಜಿದಾರ