ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕಲ್ಯಾಣ ಕಾರ್ಯಕ್ರಮಗಳ ವಿಳಂಬ ಅನುಷ್ಠಾನದ ಬಗ್ಗೆ ಮತ್ತೆ ಪಾಲಿಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ವಿಷಯ ಪ್ರಸ್ತಾಪಿಸಿದ ಪಾಲಿಕೆ ಸದಸ್ಯ ಪದ್ಮನಾಭರೆಡ್ಡಿ ಬಡ ಮಕ್ಕಳಿಗೆ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ನೀಡಬೇಕು ಎಂದು ನಿರ್ಧಾರ ಮಾಡಲಾಗಿದೆ. ಆದರೆ, ಇದು ನಿಂತಲ್ಲೇ ನಿಂತಿದೆ. ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಿ ಇಲ್ಲವೇ ಆನ್‌ಲೈನ್ ಶಿಕ್ಷಣ ನಿಲ್ಲಿಸಿ ಎಂದು ಆಗ್ರಹಿಸಿದರು.
ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಪ್ರಾರಂಭವಾಗಿದ್ದು, ಶಿಕ್ಷಣ ಸಿಗದೆ ಮಕ್ಕಳು ಪರದಾಡುತ್ತಿದ್ದಾರೆ. ಮೊಬೈಲ್ ಆದರೂ ಕೊಡಿಸಿ ಎಂದು ಪೋಷಕರು ಕೇಳಿಕೊಳ್ಳುತ್ತಿದ್ದಾರೆ. ಕಳೆದ ಎರಡು ಪಾಲಿಕೆ ಸಭೆಗೆ ಕಲ್ಯಾಣ ವಿಭಾಗದ ವಿಶೇಷ ಆಯಕ್ತ ಎಸ್.ಜಿ ರವೀಂದ್ರ ಸಭೆಗೆ ಹಾಜರಾಗಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಉತ್ತರ ನೀಡಿದ ಆಯುಕ್ತರು, ಕೇಂದ್ರ ಸರ್ಕಾರ ಟೆಂಡರ್ ಕರಿಯದೇ ಲ್ಯಾಪ್‌ಟಾಪ್ ಖರೀದಿಸಬಹುದು. ಇದಕ್ಕೆ ಮೊದಲು ಮಾರುಕಟ್ಟೆ ದರ ಪರಿಶೀಲಿಸಬೇಕು. ಇನ್ನು ಮೂರು ದಿನಗಳಲ್ಲಿ ಸಮಾಲೋಚಿಸಿ ತಿಳಿಸಲಾಗುವುದು ಎಂದರು. ಪಾರ್ಥಿಬರಾಜನ್ ಮಾತನಾಡಿ, 2017-18ನೇ ಸಾಲಿನ ವಿಶೇಷಚೇತನರು ಸಲ್ಲಿಕೆ ಮಾಡಿರುವ ಅರ್ಜಿಗಳನ್ನೂ ಕಲ್ಯಾಣ ವಿಭಾಗದ ಅಧಿಕಾರಿಗಳು ವಿಲೇವಾರಿ ಮಾಡಿಲ್ಲ. ಬಡವರಿಗೆ ನೆರವಾಗುತ್ತಿಲ್ಲ ಎಂದು ದೂರಿದರು.
ಪಾಲಿಕೆಯ ಹಲವು ಸದಸ್ಯರು ಒಂಟಿ ಮನೆಯೋಜನೆ, ಹೊಲಿಗೆ ಯಂತ್ರ ಸೇರಿದಂತೆ ಹಲವು ಕಾರ್ಯಕ್ರಮ ನನೆಗುದಿಗೆ ಬಿದ್ದಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಎಸ್.ಜಿ ರವೀಂದ್ರ ಅವರು ಕ್ವಾರಂಟೈನ್‌ನಲ್ಲಿರುವುದಾಗಿ ಸುಳ್ಳು ಹೇಳಿದ್ದಾರೆ. ಇವರ ಬಗ್ಗೆ ಮೊದಲಿನಿಂದಲೂ ದೂರುಗಳು ಕೇಳಿ ಬರುತ್ತಿದ್ದು, ಇವರನ್ನು ಮಾತ್ರ ಇಲಾಖೆಗೇ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಕೋರಲಾಗಿದೆ ಎಂದರು.
ಕಂಟೈನ್ಮೆಂಟ್ ದರ ನಿಗದಿಗೆ ಸಮಿತಿ ರಚನೆ : ನಗರದಲ್ಲಿ ಸೋಂಕು ದೃಢಪಡುವ ಪ್ರದೇಶಗಳಲ್ಲಿ ಕಂಟೈನ್ಮೆಂಟ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ಸಂಬಂಧ ನಿರ್ದಿಷ್ಟ ಮಾರ್ಗಸೂಚಿ ಅಳವಡಿಸಿಕೊಳ್ಳಲು ಎಂಜಿನಿಯರ್‌ಗಳ ಸಮಿತಿ ರಚನೆ ಮಾಡಲಾಗುವುದು ಎಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಂಟೈನ್ಮೆಂಟ್ ಪದ್ಧತಿಯಲ್ಲಿ ಏಕ ಮಾದರಿಯನ್ನು ಅಳವಡಿಸಿಕೊಂಡಿಲ್ಲ. ಕೆಲವು ಕಡೆ ತಗಡು ಇನ್ನು ಕೆಲವು ಕಡೆ ಮರದ ಕಂಬಗಳನ್ನು ಬಳಸಿ ಕಂಟೈನ್ಮೆಂಟ್ ಮಾಡಲಾಗಿದೆ. ಎಂಜಿನಿಯರ್‌ಗಳು ಅವರ ಇಷ್ಟಕ್ಕೆ ಬಳಸಿದ್ದಾರೆ. ಕೆಲವರು ಬಳಸಿದ ವಸ್ತುಗಳನ್ನೇ ಮತ್ತೆ ಬಳಸಿದ್ದಾರೆ. ಹೀಗಾಗಿ, ಕಂಟೈನ್ಮೆಂಟ್ ದರ ನಿಗದಿಗೆ ಎಂಜಿನಿಯರ್‌ಗಳ ಸಮಿತಿ ರಚನೆ ಮಾಡಲಾಗುವುದು ಎಂದರು. ರಾಜರಾಜೇಶ್ವರಿ ನಗರದಲ್ಲಿ ಅಂದಾಜು ಒಂದು ಕೋಟಿ ರೂ. ಕಂಟೈನ್ಮೆಂಟ್ ನಿರ್ಮಾಣಕ್ಕೆ ಖರ್ಚಾಗಿದೆ. ಒಟ್ಟು ಪಾಲಿಕೆ ವ್ಯಾಪ್ತಿಯಲ್ಲಿ 25 ಕೋಟಿ ರೂ. ಖರ್ಚಾಗಿರುವ ಸಾಧ್ಯತೆ ಇದೆ. ಈ ಸಂಬಂಧ ಎಲ್ಲ ಎಂಜಿನಿಯರ್‌ಗಳಿಂದ ದಾಖಲೆ ಕೇಳಿದ್ದೇನೆ ಎಂದು ತಿಳಿಸಿದರು. ನಗರದಲ್ಲಿ ಮೂರಕ್ಕಿಂತ ಹೆಚ್ಚು ಕೋವಿಡ್ ಸೋಂಕು ದೃಢಪಡುವ ಪ್ರದೇಶಗಳಲ್ಲಿ ಮಾತ್ರ ಕಂಟೈನ್ಮೆಂಟ್ ಮಾಡಲು ನಿರ್ಧರಿಸಲಾಗಿದೆ ಎಂದರು.
ಗಲಭೆ ವಿಚಾರ ಗದ್ದಲದಲ್ಲಿ ಅಂತ್ಯ : ಕಾವಲ್‌ಭೈರಸಂದ್ರದಲ್ಲಿ ಇತ್ತೀಚೆಗೆ ನಡೆದ ಗಲಭೆಯಲ್ಲಿ ನೂರಾರು ಜನರ ವಾಹನ ಹಾಗೂ ಮನೆಯ ಆಸ್ತಿ-ಪಾಸ್ತಿ ನಷ್ಟವಾಗಿದೆ. ಈಗಾಗಲೇ ಜನ ಕೋವಿಡ್ ದಿಂದ ಆರ್ಥಿಕ ಸಂಕಷ್ಟದಲ್ಲಿದ್ದು, ಸಂತ್ರಸ್ತರಿಗೆ ಪಾಲಿಕೆಯಿಂದ ಆರ್ಥಿಕ ನೆರವು ನೀಡಲು ಕ್ರಮ ವಹಿಸಬೇಕು ಎಂದು ಕಾವಲ್‌ಭೈರಸಂದ್ರದ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ್ ಅವರು ಮನವಿ ಮಾಡಿದರು. ಇದಕ್ಕೆ ಪಾಲಿಕೆಯ ಆಡಳಿತ ಪಕ್ಷದ ಸದಸ್ಯರಿಂದ ತೀವ್ರ ವಿರೋಧ ವ್ಯಕ್ತವಾಯಿತು. ವಿರೋಧ ಪಕ್ಷದ ನಾಯಕರು ಈ ವಿಷಯ ಕೌನ್ಸಿಲ್‌ನಲ್ಲಿ ಚರ್ಚೆ ಬೇಡ ಎಂದು ಹೇಳಿದರು. ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಈ ಸಮಸ್ಯೆ ಬಗ್ಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ತನಿಖೆ ಮಾಡುತ್ತಿದ್ದು, ಸರ್ಕಾರವೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ಮೇಯರ್ ಪ್ರತಿಕ್ರಿಯಿಸಿ, ಕೌನ್ಸಿಲ್ ಸಭೆಯಲ್ಲಿ ಗಲಭೆ ವಿಚಾರ ಚರ್ಚೆ ಬೇಡ, ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ವಿಷಯ ಕೈಬಿಟ್ಟರು.