ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದ ಪರಿಣಾಮ ಇಬ್ಬರು ಸಹೋದರಿಯರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಹೆಣ್ಣೂರು ಸಂಚಾರ ಠಾಣೆ ವ್ಯಾಪ್ತಿಯ ಥಣಿಸಂದ್ರ ಸಮೀಪದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರ ನಿವಾಸಿಗಳಾದ ನಿಗಾರ್ ಸುಲ್ತಾನಾ (31) ಮತ್ತು ನಿಗಾರ್ ಇರ್ಫಾನಾ(36) ಮೃತರು. ಕೃತ್ಯ ಎಸಗಿದ ಬಿಬಿಎಂಪಿ ಕಸದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಕಾರ್ಯಾಚರಣೆ ನಡೆಸಿ ಗಡಿಲಿಂಗ(35) ನನ್ನು ಬಂಧಿಸಲಾಗಿದೆ.
ನಿಗಾರ್ ಸುಲ್ತಾನಾ ಮತ್ತು ನಿಗಾರ್ ಇರ್ಫಾನಾ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಗೋವಿಂದಪುರದಿಂದ ಥಣಿಸಂದ್ರ ಮಾರ್ಗವಾಗಿ ಹೆಗ್ಗಡೆ ನಗರದ ಕಡೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಮುಂದೆ ಸಾಗುತ್ತಿದ್ದ ಕಾರಿನ ಚಾಲಕ ಏಕಾಏಕಿ ಕಾರು ನಿಲ್ಲಿಸಿದ್ದಾನೆ. ಅದರಿಂದ ಗಾಬರಿಗೊಂಡ ದ್ವಿಚಕ್ರ ಸವಾರಿಣಿ, ದ್ವಿಚಕ್ರ ವಾಹನವನ್ನು ಬಲಭಾಗಕ್ಕೆ ತಿರುಗಿಸಲು ಮುಂದಾಗಿದ್ದಾರೆ. ಅದೇ ವೇಳೆ ಅತಿವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಚಾಲಕ ಹಿಂದಿನಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಇಬ್ಬರು ಸಹೋದರಿಯರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಿದ್ದು, ಲಾರಿಯ ಚಕ್ರಗಳು ಅವರ ಮೇಲೆ ಹರಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು. ಘಟನೆ ಸಂಬಂಧ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಗನ ಜನ್ಮದಿನಕ್ಕೆ ಬಟ್ಟೆ ತರಲು ಹೋಗಿದ್ದರು:
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ನಿಗಾರ್ ಇರ್ಫಾನಾ ಪತಿ ಇಮ್ರಾನ್ ಸೈಯದ್, ನಿಗಾರ್ ಸುಲ್ತಾನಾಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ನಮಗೆ ಮೂವರು ಹೆಣ್ಣು ಹಾಗೂ ಒಬ್ಬ ಗಂಡು ಮಗ ಇದ್ದಾನೆ. ನನ್ನ ಹಿರಿಯ ಮಗನ ಹುಟ್ಟಹಬ್ಬಕ್ಕೆ ಶಾಪಿಂಗ್ ಮಾಡಲು ತಮ್ಮ ಅಕ್ಕನ ಜತೆ ಪತ್ನಿ ಹೋಗಿದ್ದರು. ಹಾಗೆಯೇ ಆಸ್ಪತ್ರೆಗೆ ಹೋಗುವಾಗಿ ಮನೆಯಿಂದ ತೆರಳಿದ್ದರು. ಮನೆಯಿಂದ ಹೊರಟ ಅರ್ಧಗಂಟೆಯೊಳಗೆ ಈ ರೀತಿ ಘಟನೆ ಆಗಿದೆ. ಚಾಲಕ ಮದ್ಯಪಾನ ಮಾಡಿ ಲಾರಿ ಚಲಾಯಿಸಿದ್ದರಿಂದ ಅಪಘಾತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.