Advertisement

ಕೊರೊನಾ ಪೊಲೀಸರನ್ನೇ ಆರೋಪಿಗಳನ್ನಾಗಿಸಿದೆಯಾ?

11:48 AM Jan 14, 2022 | Team Udayavani |

ಬೆಂಗಳೂರು: ಸಾಮಾನ್ಯವಾಗಿ ಪೊಲೀಸರು ಆರೋಪಿಗಳ ಜಾಡು ಹಿಡಿದು ಬಂಧಿಸಿ, ವಿಚಾರಣೆಗೊಳಡಿಸುತ್ತಾರೆ. ಆದರೆ, ಕೊರೊನಾ ಪೊಲೀಸರನ್ನೇ “ಆರೋಪಿ’ಗಳನ್ನಾಗಿ ಮಾಡಿದೆ. ಅಪರಾಧ ಕೃತ್ಯ ಎಸಗಿದ ಆರೋಪಿಗಳ ಪತ್ತೆ ಹಚ್ಚುವಷ್ಟು ಸುಲಭವಲ್ಲ ಕೊರೊನಾ ಸೋಂಕಿತ ಪೊಲೀಸ್‌ ಸಿಬ್ಬಂದಿ ಜಾಡು…

Advertisement

ಹೌದು, ಕೊಲೆ, ಸುಲಿಗೆ, ದರೋಡೆ ಮಾಡಿದ ಆರೋಪಿಗಳನ್ನು ನೆರೆ ರಾಜ್ಯದಲ್ಲಿದ್ದರೂ ಪೊಲೀಸರು ಎಳೆದು ತರುತ್ತಾರೆ. ಆದರೆ, ತಮಗೆ ವಕ್ಕರಿಸಿರುವ ಕೊರೊನಾ ಸೋಂಕಿನ ಮೂಲ ಜಾಡಿನ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದು ಬಿಬಿಎಂಪಿಗೆ ದೊಡ್ಡ ತಲೆ ನೋವಾಗಿದೆ.

ಇತ್ತೀಚೆಗೆ ನಗರ ಪೊಲೀಸರಲ್ಲಿ ಕೊರೊನಾ ಸ್ಫೋಟಗೊಳ್ಳುತ್ತಿದೆ. ಪ್ರತಿನಿತ್ಯ 20ರಿಂದ 30 ಪಾಸಿಟಿವ್‌ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಎರಡು ವಾರಗಳಲ್ಲಿ ನಗರ ಪೊಲೀಸರಲ್ಲಿ ಕೊರೊನಾ 200ರ ಗಡಿ ದಾಟಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಹೋದ್ಯೋಗಿಗಳು, ಕುಟುಂಬ ಸದಸ್ಯರು ಹಾಗೂ ಠಾಣೆ, ಮನೆ ಅಕ್ಕ-ಪಕ್ಕದವರನ್ನು ಪರೀಕ್ಷೆಗೊಳಪಡಿಸಲಾಗಿದೆ. ಆದರೆ, ಅವರ ಕರ್ತವ್ಯದ ಜಾಡು, ಎಲ್ಲೆಲ್ಲಿ ಹೋಗಿ ದ್ದರು? ಎಂಬ ಜಾಡು ಮಾತ್ರ ಪತ್ತೆಯಾಗುತ್ತಿಲ್ಲ.

ಪೊಲೀಸರ ಜಾಡು ಸುಲಭವಲ್ಲ!: ಸೋಂಕಿತ ಪೊಲೀಸ್‌ ಸಿಬ್ಬಂದಿ, ತಮ್ಮ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಮಾಹಿತಿ ನೀಡುತ್ತಿದ್ದಾರೆ. ಹಾಗೆಯೇ ಠಾಣಾಧಿಕಾರಿಗಳು ಸೂಚಿಸಿದ ಕರ್ತವ್ಯದ ಸ್ಥಳದ ಬಗ್ಗೆಯೂ ಹೇಳುತ್ತಾರೆ. ಆದರೆ, ಅದನ್ನು ಹೊರತು ಪಡಿಸಿ ಬೇರೆ ಎಲ್ಲಿಗೆ ಹೋಗಿದ್ದರು? ಯಾರೊಡನೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿ ಬಗ್ಗೆ ಮೌನವಹಿಸುತ್ತಾರೆ. ಅವರಿಗೂ ಗೊಂದಲಗಳಿರುವುದರಿಂದ ಕೊರೊನಾ ಜಾಡು ಪತ್ತೆ ಕಷ್ಟವಾಗುತ್ತಿದೆ.

ಇದನ್ನೂ ಓದಿ:ಪಾದಯಾತ್ರೆಯಿಂದ ಕಾಂಗ್ರೆಸ್ ಗೆ ರಾಜಕೀಯ ಲಾಭಕ್ಕಿಂತ ನಷ್ಟವೇ ಆಗಿದೆ: ಆರಗ ಜ್ಞಾನೇಂದ್ರ

Advertisement

ಅವರು ಉಲ್ಲೇಖೀಸಿದ ಕರ್ತವ್ಯದ ಸ್ಥಳದ ನೂರು ಮೀಟರ್‌ ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, ಬೆರಳೆಣಿಕೆಯಷ್ಟು ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಸೋಂಕಿತರನ್ನು ನಿರಂತರ ಸಂಪರ್ಕದಲ್ಲಿದ್ದು ಅವರು ಎಲ್ಲೆಲ್ಲಿ ಹೋಗಿದ್ದರು ಎಂಬ ಮಾಹಿತಿ ಪಡೆಯುತ್ತಿದ್ದೇವೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ನೆನಪಿದ್ದಷ್ಟು ಹೇಳಿದ್ದೇವೆ: ಸೋಂಕು ಪತ್ತೆಯಾದ ಬಳಿಕ ಬಿಬಿಎಂಪಿ ಅಧಿಕಾರಿಗಳಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ಕರ್ತವ್ಯದ ಸ್ಥಳದ ಬಗ್ಗೆ ಹೇಳಿದ್ದೇವೆ. ಆದರೆ, ಎಲ್ಲೇಲ್ಲಿ ಓಡಾಡಿದ್ದೇವೆ? ಯಾರೊಟ್ಟಿಗೆ ಟೀ, ಊಟ ಸೇವಿಸಿದ್ದೇವೆ ಎಂಬ ಮಾಹಿತಿ ಹೇಗೆ ಹೇಳಲು ಸಾಧ್ಯ. ಬೇರೆ ಬೇರೆ ಠಾಣೆ ಸಿಬ್ಬಂದಿ ಸೇರಿ ದಿನಕ್ಕೆ ಹತ್ತಾರು ಮಂದಿಯನ್ನು ಭೇಟಿಯಾಗುತ್ತಿರುತ್ತೇವೆ. ಹಿರಿಯ ಅಧಿ ಕಾರಿಗಳು ಸೂಚಿಸಿದ ಹತ್ತಾರು ಸ್ಥಳಗಳಿಗೆ ಭೇಟಿ ನೀಡುತ್ತೇವೆ. ಒಂದೆರಡು ದಿನಗಳ ಓಡಾಡ ನೆನಪಿಟ್ಟುಕೊಳ್ಳಬಹುದು. ವಾರ ಅಥವಾ 15 ದಿನಗಳ ಸಂಚಾರದ ಮಾಹಿತಿ ಕೊಡಿ ಎಂದರೆ, ಹೇಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯ. ಗೊತ್ತಿರುವ ಮಾಹಿತಿ ನೀಡಿದ್ದೇವೆ ಎಂದು ಸೋಂಕಿತ ಪೊಲೀಸ್‌ ಸಿಬ್ಬಂದಿಯೊಬ್ಬರು ವಿವರಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿಯ ಆರೋಗ್ಯ ವಿಭಾಗದ ಮುಖ್ಯಸ್ಥ ಬಾಲಸುಂದರ್‌, ಕೊರೊನಾ ಸೋಂಕಿತ ಪೊಲೀಸರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೊಳಪಡಿಸಲಾಗಿದೆ. ಅವರು ಕರ್ತವ್ಯ ನಿರ್ವಹಿಸಿದ ಸ್ಥಳದ ಸಮೀಪದ ಅಂಗಡಿಗಳ ಸಿಬ್ಬಂದಿಗೂ ಚೆಕ್‌ ಮಾಡಿಸಲಾಗಿದೆ. ಬೇರೆ ಬೇರೆ ಜಿಲ್ಲೆಗಳಿಗೆ ಹೋಗಿದ್ದರು. ಆಯಾ ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಇನ್ನುಳಿದಂತೆ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಆರೋಗ್ಯ ವಿಭಾಗದ ಅಧಿಕಾರಿಗಳು ಪಡೆದುಕೊಳ್ಳುತ್ತಾರೆ ಎಂದರು.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next