Advertisement

BBMP election: ಅಕ್ಟೋಬರ್‌ನಲ್ಲಿ ಬಿಬಿಎಂಪಿ ಚುನಾವಣೆ?

01:57 PM Jun 11, 2024 | Team Udayavani |

ಬೆಂಗಳೂರು: ಬಿಬಿಎಂಪಿಗೆ ಅಕ್ಟೋಬರ್‌ ತಿಂಗಳಲ್ಲಿ ಚುನಾವಣೆ ನಡೆಸುವುದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಬೆಂಗಳೂರು ಶಾಸಕರ ಸಭೆಯಲ್ಲಿ ಸಹಮತ ದೊರೆತಿದೆ. ಆದರೆ, ಬೆಂಗಳೂರು ವಿಭಜನೆ ವಿಚಾರದಲ್ಲಿ ಮಾತ್ರ ಯಾವುದೇ ಸಹಮತ ಮೂಡಿಲ್ಲದೇ ಇರುವುದರಿಂದ ಮತ್ತೂಮ್ಮೆ ಸಭೆ ನಡೆಯುವ ಸಾಧ್ಯತೆ ಇದೆ.

Advertisement

ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಜಮೀರ್‌ ಅಹ್ಮದ್‌ ಖಾನ್‌, ಶಾಸಕರಾದ ಎನ್‌.ಎ.ಹ್ಯಾರೀಸ್‌, ರಿಜ್ವಾನ್‌ ಅರ್ಷದ್‌, ಯು.ಬಿ.ವೆಂಕಟೇಶ್‌, ಕೃಷ್ಣಪ್ಪ, ಸುದಾಮ್‌ ದಾಸ್‌, ನಾಗರಾಜ್‌ ಯಾದವ್‌, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್‌, ಮಾಜಿ ರಾಜ್ಯ ಸಭಾ ಪ್ರೊ.ರಾಜೀವ್‌ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಗೋವಿಂದರಾಜು ಅವರನ್ನು ಒಳಗೊಂಡ ನಿಯೋಗದ ಜತೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸುದೀರ್ಘ‌ ಚರ್ಚೆ ನಡೆಸಿದರು.

ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಅಕ್ಟೋಬರ್‌ ಒಳಗಾಗಿ ಚುನಾವಣೆ ನಡೆಸಲೇಬೇಕಾಗುತ್ತದೆ. ಈ ವಿಚಾರವನ್ನು ಇನ್ನು ಮುಂದೂಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲೇಬೇಕಾಗುತ್ತದೆ. ಇಲ್ಲವಾದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗ ಬೇಕಾಗುತ್ತದೆ ಎಂದು ನಿಯೋಗ ಸಿದ್ದರಾಮಯ್ಯ ಅವರ ಗಮನ ಸೆಳೆಯಿತು.

ವಿಭಜನೆ ಪ್ರಸ್ತಾಪ: ಈ ಸಂದರ್ಭದಲ್ಲಿ ಬೆಂಗಳೂರನ್ನು ಆಡಳಿತಾತ್ಮಕವಾಗಿ ವಿಭಜಿಸಿ ಚುನಾವಣೆ ನಡೆಸ ಬೇಕೋ, ಚುನಾವಣೆ ಬಳಿಕ ವಿಭಜನೆ ನಡೆಸ ಬೇಕೋ? ಎಂಬ ಪ್ರಶ್ನೆ ಎದುರಾಯಿತು. ಹೀಗಾಗಿ ಅಡ್ವೊಕೇಟ್‌ ಜನರಲ್‌ ಅವರನ್ನು ಸಭೆಗೆ ಕರೆಸಿ ಅವರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಿರಿಯರು ಮೊದಲು ಚುನಾವಣೆ ನಡೆಸಿ ಆ ಬಳಿಕ ವಿಭಜನೆ ನಡೆಸೋಣ ಎಂಬ ಪ್ರಸ್ತಾಪದ ಪರ ನಿಂತರೆ, ಡಿಸಿಎಂ ಡಿ.ಕೆ. ಶಿವಕುಮಾರ್‌ ಯಾವುದಾದರೊಂದು ಸ್ವರೂಪದಲ್ಲಿ ವಿಭಜನೆ ಸೂಕ್ತ ಎಂದು ಪ್ರತಿಪಾದಿಸಿದರು ಎಂದು ತಿಳಿದು ಬಂದಿದೆ.

ಎಷ್ಟು ವಿಭಜನೆ: ವಿಭಜನೆಗೆ ಸಂಬಂಧಪಟ್ಟಂತೆ ಎರಡು ಪ್ರಸ್ತಾಪಗಳು ಈಗಾಗಲೇ ರಾಜ್ಯ ಸರ್ಕಾರದ ಮುಂದೆ ಇದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಎಂದು 5 ಭಾಗವಾಗಿ ವಿಭಜಿಸಿ ಪ್ರತಿ ಪಾಲಿಕೆಗೆ ತಲಾ 80 ಸದಸ್ಯರು ಆಯ್ಕೆಯಾಗುವ ರೀತಿ ಒಟ್ಟು 400 ಸದಸ್ಯರಿಗೆ ಚುನಾವಣೆ ನಡೆಸುವುದು ಒಂದು ಭಾಗ. ಆಗ ಬೆಂಗಳೂರು ಹೊರವಲಯದಲ್ಲಿದ್ದು ಕೈಗಾರಿಕಾ ಹಬ್‌ಗಳಾಗಿ ಬೆಳೆದಿರುವ ಪ್ರದೇಶಗಳನ್ನು ಸೇರಿಸಿಕೊಳ್ಳಬೇಕೆಂಬ ಪ್ರಸ್ತಾಪ ಇದರಲ್ಲಿದೆ. ಇಲ್ಲವಾದರೆ ಗ್ರೇಟರ್‌ ಬೆಂಗಳೂರು ಎಂದು ಪರಿಗಣಿಸಿ ಬೆಂಗಳೂರಿಗೆ ಮೂರು ಮೇಯರ್‌ಗಳನ್ನು ನೇಮಿಸುವುದು ಇನ್ನೊಂದು ಪ್ರಸ್ತಾಪ. ಈ ಎಲ್ಲ ವಿಚಾರಗಳ ಬಗ್ಗೆ ಸಭೆಯಲ್ಲಿ ಸುದೀರ್ಘ‌ವಾಗಿ ಚರ್ಚೆಯಾಗಿದೆ.

Advertisement

ಆದರೆ, ಯಾವುದೇ ಕಾರಣಕ್ಕೂ ವಿಭಜನೆ ಇತ್ಯಾದಿ ವಿಚಾರಗಳ ಕಾರಣಕ್ಕಾಗಿ ಚುನಾವಣೆ ನಿರ್ಧರಿಸುವುದು ಮತ್ತೆ ನ್ಯಾಯಾಲಯದ ಅಂಗಳಕ್ಕೆ ವರ್ಗಾವಣೆ ಯಾಗುವುದು ಬೇಡ. ಆದಷ್ಟು ಬೇಗ ಬಿಬಿಎಂಪಿಗೆ ಜನಪ್ರತಿನಿಧಿಗಳು ಲಭಿಸುವಂತಾಗಲಿ ಎಂಬ ಆಶಯವನ್ನು ಬಹುತೇಕ ಶಾಸಕರು ವ್ಯಕ್ತಪಡಿಸಿದ್ದಾರೆ. ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿಟ್ಟುಕೊಂಡು ಚರ್ಚೆಯ ಬಳಿಕವೇ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯುವುದು ಪಕ್ಕಾ ಆದರೆ ವಿಭಜನೆ ಸಾಧ್ಯತೆ ಕಡಿಮೆ.

ನಗರದಲ್ಲಿ ಕಾಂಗ್ರೆಸ್‌ ಬಲವೃದ್ಧಿಗೆ ಸಮಿತಿ: ಸಭೆಯಲ್ಲಿ ಬ್ರ್ಯಾಂಡ್‌ ಬೆಂಗಳೂರು ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಬೆಂಗಳೂರು ಸೇರಿ ನಗರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬರದೇ ಇರುವ ಬಗ್ಗೆ ರಾಹುಲ್‌ ಗಾಂಧಿ ಕೇಳಿದ ಪ್ರಶ್ನೆ ಬಗ್ಗೆಯೂ ಚರ್ಚೆ ನಡೆದಿದೆ.

ಬೆಂಗಳೂರು ಬೆಳೆಸಿದ್ದು ಕಾಂಗ್ರೆಸ್‌. ಆದರೆ, ಜನ ಬಿಜೆಪಿಗೆ ಮತ ಹಾಕುತ್ತಾರೆ. ಈ ಬಗ್ಗೆ ನಾವು ಜನರಿಗೆ ಅರಿವು ಮೂಡಿಸಬೇಕು. ಜನರ ಮನಸು ಗೆಲ್ಲಲು ವಿಶೇಷ ಯೋಜನೆ ರೂಪಿಸಿದರೆ ಬಿಬಿಪಿಎಂಪಿ ಚುನಾವಣೆ ಯಲ್ಲೂ ಅನುಕೂಲವಾಗುತ್ತದೆ ಎಂಬ ಪ್ರಸ್ತಾಪಿಸ ಲಾಗಿದೆ. ಇದಕ್ಕಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿರಿ-ಕಿರಿ ನಾಯಕರನ್ನು ಒಳಗೊಂಡ ಸಮಿತಿ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದಷ್ಟು ಬೇಗ ಈ ಸಮಿತಿ ರಚನೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next