Advertisement

6000 ಕೋಟಿ ರೂ. ಅನುದಾನ: ಬಿಬಿಎಂಪಿ ಚುನಾವಣೆಗೆ ತಯಾರಿ ಆರಂಭಿಸಿದ ಬಿಜೆಪಿ

11:40 AM Jan 07, 2022 | Team Udayavani |

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಸರಕಾರ ಎಲ್ಲ ರೀತಿಯಿಂದಲೂ ಸಿದ್ಧತೆ ಆರಂಭಿಸಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 6000 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರಾಜಧಾನಿಯ ಜನರ ಮೆಚ್ಚುಗೆ ಗಳಿಸುವುದಕ್ಕೆ ತಾಲೀಮು ಆರಂಭಿಸಿದೆ.

Advertisement

ಕಳೆದ ಬುಧವಾರ ಬಿಜೆಪಿಯ ಬೆಂಗಳೂರು ನಗರ ಘಟಕದ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ,”ಬಿಬಿಎಂಪಿ ಚುನಾವಣೆ ಯಾವಾಗ ? ಬೆಂಗಳೂರು ಅಭಿವೃದ್ಧಿಗೆ ನಿಮ್ಮ ನಿಲುವು ತಿಳಿಸಿ “ ಎಂದು ಪಕ್ಷದ ಹಿರಿಯ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಇದ್ಯಾವುದಕ್ಕೂ ಉತ್ತರಿಸದ ಬೊಮ್ಮಾಯಿ “ಬೆಂಗಳೂರಿಗೆ ನಾನು ಏನು ಮಾಡುತ್ತೇನೆಂದು ಕಾದು ನೋಡಿ’’ ಎಂದು ಹೇಳಿಕೆ ನೀಡಿದ್ದರು. ಚುನಾವಣೆ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಅಮೃತ್ ನಗರೋತ್ಥಾನ ಯೋಜನೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ಅನ್ವಯವಾಗುವಂತೆ 6000 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರತಿ ವರ್ಷ 2000 ಕೋಟಿ ರೂ.. ನೆರವಿನ ರೂಪದಲ್ಲಿ ಬಿಬಿಎಂಪಿಗೆ ಹರಿದು ಬರಲಿದೆ.

ಬಿಜೆಪಿ ಮೂಲಗಳ ಪ್ರಕಾರ ಈ ನಿರ್ಧಾರದ ಮೂಲಕ ಸಿಎಂ ಬೊಮ್ಮಾಯಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ಬೊಮ್ಮಾಯಿಯವರ ಕಾರ್ಯ ನಿರ್ವಹಣೆ ಬಗ್ಗೆ ಅಸಮಾಧಾನಗೊಂಡಿದ್ದ ಬೆಂಗಳೂರಿನ ಶಾಸಕರು ಕೆಲ ದಿನಗಳ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. ಆದರೆ ಅನುದಾನ ಬಿಡುಗಡೆ ಮೂಲಕ ಅವರ ಅಸಮಾಧಾನ ನಿಯಂತ್ರಿಸಲಾಗಿದೆ. ಜತೆಗೆ ಬಿಬಿಎಂಪಿ ಚುನಾವಣೆಗೆ ಮುನ್ನ ಎಷ್ಟು ಸಾಧ್ಯವೋ ಅಷ್ಟು ಮೂಲ ಸೌಕರ್ಯವನ್ನು ಬೆಂಗಳೂರಿನ ಜನತೆಗೆ ಒದಗಿಸಲು ಸರಕಾರ ತೀರ್ಮಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next