Advertisement

ಗ್ರಂಥಾಲಯಗಳಿಗೆ ಬಿಬಿಎಂಪಿ ಅಡ್ಡಗಾಲು!

12:50 AM May 04, 2019 | Team Udayavani |

ಬೆಂಗಳೂರು: ಡಿಜಿಟಲ್‌ ತಂತ್ರಜ್ಞಾನ ಅಳವಡಿಸಿಕೊಂಡು ಯುವ ಓದುಗರ ಸೆಳೆಯಬೇಕಿದ್ದ ನಗರದ ಸಾರ್ವಜನಿಕ ಗ್ರಂಥಾಲಯಗಳಿಗೆ ಬಿಬಿಎಂಪಿಯೇ ಅಡ್ಡಗಾಲಾಗಿದೆ. ಇ-ಬುಕ್‌, ಡಿಜಿಟಲ್‌ ತಂತ್ರಜ್ಞಾನ ಅಳವಡಿಸಿಕೊಳ್ಳುವ ಆಸಕ್ತಿ ಇದ್ದರೂ, ಬಿಬಿಎಂಪಿ ಸೂಕ್ತ ಸಮಯದಲ್ಲಿ ಸೆಸ್‌ ಹಣ ಬಿಡುಗಡೆ ಮಾಡದ ಕಾರಣ ಗ್ರಂಥಾಲಯಗಳ ಆಧುನಿಕರಣ ಕನಸಾಗೇ ಉಳಿದಿದೆ.

Advertisement

ಬಿಬಿಎಂಪಿ, ಐದು ವರ್ಷಗಳಿಂದ ಗ್ರಂಥಾಲಯಗಳಿಗೆ 346.36 ಕೋಟಿ ರೂ. ಸೆಸ್‌ ಹಣ ಬಾಕಿ ಉಳಿಸಿಕೊಂಡಿದೆ. ಇದು ಗ್ರಂಥಾಲಯ ನಿರ್ವಹಣೆ ಮೇಲೆ ಪರಿಣಾಮ ಬೀರಿದೆ. ಹಣ ಬಿಡುಗಡೆಯಾದರೆ, ಗ್ರಂಥಾಲಯಗಳು ಹೊಸ ರೂಪ ಪಡೆದುಕೊಳ್ಳುತ್ತಿದ್ದವು. ಆದರೆ, ಕೈಯಲ್ಲಿ ತುಪ್ಪ ಇದ್ದರೂ ಬೆಣ್ಣೆಗಾಗಿ ತಡಕಾಡಿದರು ಎನ್ನುವ ಪರಿಸ್ಥಿತಿಗೆ ಗ್ರಂಥಾಲಯಗಳು ಬಂದು ತಲುಪಿವೆ.

ಗ್ರಂಥಾಲಯ ಇಲಾಖೆಗೆ ಬಿಬಿಎಂಪಿ ಮಾತ್ರವಲ್ಲದೆ, ಸ್ಥಳೀಯ ಸಂಸ್ಥೆಗಳು 54 ಕೋಟಿ ರೂ., ಗ್ರಾ.ಪಂಗಳು 73 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ನಗರದ ಐದು ವಲಯಗಳಲ್ಲಿ 200 ಸಾರ್ವಜನಿಕ ಗ್ರಂಥಾಲಯಗಳಿವೆ. ಇವುಗಳಲ್ಲಿ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳಿಗೆ ಸ್ವಂತ ಕಟ್ಟಡ ಇಲ್ಲ. ಒಂದೊಮ್ಮೆ ಬಾಕಿ ಮೊತ್ತ ಸಿಕ್ಕರೆ, ಸ್ವಂತ ಕಟ್ಟಡಗಳನ್ನು ಹೊಂದುವ ಕನಸು ಇಲಾಖೆಯದ್ದು.

ಶೇ.6ರಷ್ಟು ತೆರಿಗೆ ಸಂಗ್ರಹ: ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ನಿಯಮ 30 ಮತ್ತು 31ರಂತೆ ರಾಜ್ಯದಾದ್ಯಂತ ಇರುವ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯ ಶೇ.6ರಷ್ಟು ಹಣ ಗ್ರಂಥಾಲಯ ಸೆಸ್‌ ಫ‌ಂಡ್‌ಗೆ ಸೇರುತ್ತದೆ. ಇದನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ನೀಡಬೇಕು. ಆದರೆ, ಇದು ದು ವರ್ಷಗಳಿಂದ ಬಿಡುಗಡೆಯೇ ಆಗಿಲ್ಲ.

ನಮ್ಮನ್ನೇನೂ ಕೇಳಬೇಡಿ!: ಗ್ರಂಥಾಲಯ ಅಭಿವೃದ್ಧಿ, ಬಾಕಿ ಮೊತ್ತ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದರೆ ಗ್ರಂಥಾಲಯ ಅಧಿಕಾರಿಗಳಿಂದ ಕೇಳಿಬರುತ್ತಿರುವ ಉತ್ತರ, “ನಮ್ಮನೇನೂ ಕೇಳಬೇಡಿ’. ಪತ್ರಿಕೆಗಳಲ್ಲಿ ವರದಿ ಪ್ರಕಟವಾದರೆ, ಆ ವರದಿ ತೋರಿಸುವ ಪಾಲಿಕೆ ಅಧಿಕಾರಿಗಳು, “ನಿಮಗೆ ಹಣ ಕೊಡುವುದಿಲ್ಲ. ನೀವೇ ಇವರಿಗೆ (ಮಾಧ್ಯಮಗಳಿಗೆ) ಮಾಹಿತಿ ನೀಡುತ್ತಿದ್ದೀರ’ ಎಂದು ದಬ್ಟಾಳಿಕೆ ಮಾಡಿದ್ದೂ ಇದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಅಧಿಕಾರಿ.

Advertisement

ಬಿಬಿಎಂಪಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಇರುವಷ್ಟು ಹಣದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿದ್ದೇವೆ. ಹೇಳಿಕೊಳ್ಳುವಂಥ ಸಮಸ್ಯೆಗಳೇನು ಇಲ್ಲ
-ಡಾ. ಸತೀಶ್‌ ಕುಮಾರ್‌ ಎಸ್‌. ಹೊಸಮನಿ, ಗ್ರಂಥಾಲಯ ಇಲಾಖೆ ನಿರ್ದೇಶಕ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next