Advertisement

ಮತದಾನ ಆಲಸ್ಯ, ಟ್ರಿಪ್‌ ತಪ್ಪಿಸಲು ಜನ ಜಾಗೃತಿ

12:23 PM Apr 29, 2023 | Team Udayavani |

ಬೆಂಗಳೂರು: “ರಾಜಧಾನಿಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಪಣತೊಟ್ಟಿದ್ದು, ಚುನಾವಣಾ ಆಯೋಗದ ಜತೆಗೂಡಿ ನಿರಂತರವಾಗಿ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನವು ಫ‌ಲ ನೀಡುವ ವಿಶ್ವಾಸವಿದೆ’ ಇದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮಾತುಗಳು.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾನದ ಪ್ರಮಾಣ ಹೆಚ್ಚಳಕ್ಕಾಗಿ ಚುನಾವಣಾ ಆಯೋಗದ ಜತೆಗೂಡಿ ಪ್ರತಿದಿನ ವಿಧಾನಸಭಾ ಕ್ಷೇತ್ರಾವಾರು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ಬಗ್ಗೆ “ಉದಯವಾಣಿ’ಗೆ ಸಂದರ್ಶನ ನೀಡಿದ ತುಷಾರ್‌ ಗಿರಿನಾಥ್‌, ಈ ಬಾರಿ ಯುವ ಸಮೂಹ ಮತದಾನದ ಬಗ್ಗೆ ಉತ್ಸುಕವಾಗಿದೆ ಎಂದು ಹೇಳುತ್ತಾರೆ.

“ಐಟಿ-ಬಿಟಿ ಹಬ್‌’ಎಂದು ಕರೆಸಿಕೊಂಡಿರುವ ಬೆಂಗಳೂರಿನಲ್ಲಿ ಸುಶಿಕ್ಷಿತರೇ ಅಧಿಕ ಸಂಖ್ಯೆಯಲ್ಲಿ ನೆಲೆಸಿದ್ದರೂ ವಿಧಾನಸಭಾ ಚುನಾವಣೆ ವೇಳೆ ಅಧಿಕ ಸಂಖ್ಯೆಯಲ್ಲಿ ಮತದಾನದ ಪ್ರಕ್ರಿಯಿಂದ ಯಾಕೆ ದೂರ ಉಳಿಯುತ್ತಾರೆ?

ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಹಲವು ಮಂದಿ ಉದ್ಯೋಗಿಗಳಿದ್ದಾರೆ. ಆದರೆ ಮತದಾನ ಮಾಡುವುದು ಎಂದರೆ ಅವರಿಗೆ ಒಂದು ರೀತಿಯ ಆಲಸ್ಯ. ಮತದಾನದ ದಿನದಂದು ಕೆಲವರು ಕುಟುಂಬ ಸಮೇತ ಟ್ರಿಪ್‌ಗೆ ಯೋಜನೆ ರೂಪಿಸಿರುತ್ತಾರೆ. ಆದರೆ ಈ ಬಾರಿ ಹಾಗೇ ಆಗಬಾರದು ಎಂಬ ಉದ್ದೇಶದಿಂದ ಐಟಿ-ಬಿಟಿ ಕಂಪನಿಗಳಿಗೆ ಭೇಟಿ ನೀಡಿ ಮತದಾನದ ಮಹತ್ವದ ಬಗ್ಗೆ ಉದ್ಯೋಗಿಗಳಿಗೆ ಅರಿವು ಮೂಡಿಸಲಾಗಿದೆ. ಕಂಪನಿಯ ಉದ್ಯೋಗಿಗಳಿಗೆ ವೇತನ ಸಮೇತ ರಜೆ ನೀಡುವ ಭರವಸೆಯನ್ನು ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳು ನೀಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲೇಜುಗಳಿಗೆ ಭೇಟಿ ನೀಡಿ ಮೊದಲ ಬಾರಿಗೆ ಮತದಾನ ಮಾಡುವ ಯುವ ಸಮೂಹದ ಜತೆ ನಡೆಸುತ್ತಿರುವ ಸಂವಾದಕ್ಕೆ ಸ್ಪಂದನೆ ಹೇಗಿದೆ ?

Advertisement

ಜಯನಗರದ ವಿಜಯ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಯುವ ಮತದಾರರ ಜತೆಗೆ ಸಂವಾದ ನಡೆಸಲಾಗಿದೆ. ಯುವ ಸಮೂಹ ಈ ಹಿಂದಿಗಿಂತ ಈಗ ಮತದಾನದಲ್ಲಿ ಪಾಲ್ಗೊಳ್ಳುವ ಹುರುಪಿನಲ್ಲಿದ್ದಾರೆ. ಕೆಲವು ವಿದ್ಯಾರ್ಥಿಗಳು ಆನ್‌ ಲೈನ್‌ನಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಿ ಎಂದು ಕೇಳಿದ್ದೂ ಇದೆ. ಶಾಂತಿಯುತ ಚುನಾವಣೆಗೆ ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ? ಪೊಲೀಸ್‌ ಇಲಾಖೆ ಜತೆಗೂಡಿ ಶಾಂತಿಯುತ ಚುನಾವಣೆಗೆ ಆಯೋಗ ಕ್ರಮ ವಹಿಸಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವ ಕಾರ್ಯ ಕೂಡ ಅಂತಿಮ ಹಂತದಲ್ಲಿದೆ

ಪೇಟಿಎಂ, ಗೂಗಲ್‌ ಪೇ ಸೇರಿದಂತೆ ಆನ್‌ಲೈನ್‌ ನಲ್ಲಿ ಅಕ್ರಮ ಹಣವರ್ಗಾವಣೆ ತಡೆಗೆ ಏನು ಕ್ರಮ ಕೈಗೊಳ್ಳಲಾಗಿದೆ?

ಪೇಟಿಎಂ ಮತ್ತು ಗೂಗಲ್‌ ಪೇ ಸೇರಿದಂತೆ ಆನ್‌ಲೈನ್‌ ಮೂಲಕ ಮತದಾರರಿಗೆ ಅಕ್ರಮ ಹಣ ವರ್ಗಾವಣೆ ಆಗಿರುವುದು ಇಲ್ಲಿವರೆಗೂ ಕಂಡು ಬಂದಿಲ್ಲ. ಈ ಸಂಬಂಧ ಯಾವುದೇ ದೂರುಗಳು ದಾಖಲಾಗಿಲ್ಲ. ಆದರೆ ಈ ಕುರಿತು ನಿಗಾ ವಹಿಸಲಾಗಿದೆ.

ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟವರಿಗೆ ಗೌಪ್ಯ ಮತದಾನ ವ್ಯವಸ್ಥೆ ಕಲ್ಪಿಸಿದ್ದು ಎಷ್ಟು ಮಂದಿ ನೋಂದಣಿಯಾಗಿದ್ದಾರೆ?

80 ವರ್ಷಕ್ಕಿಂತ ಮೇಲ್ಪಟ್ಟವರು, ಅಂಗವಿಕಲರು ಹಾಗೂ ಹಾಸಿಗೆ ಬಿಟ್ಟು ಏಳಲಾಗದ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌, ವೋಟರ್‌ ಹೆಲ್ಪ್ಲೈನ್‌ ಅಥವಾ ಸಕ್ಷಮ್‌ ಆ್ಯಪ್‌ನಲ್ಲಿ ನೋಂದಣಿ ಕಡ್ಡಾಯ ಮಾಡಲಾಗಿದೆ. ಈವರೆಗೂ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮಂದಿ ನೋಂದಣಿ ಆಗಿದ್ದಾರೆ. ಮತದಾರರ ಮನೆಗೆ ಪೊಲೀಸ್‌ ಭದ್ರತೆಯಲ್ಲಿ ಅಂಚೆ ಮತಚೀಟಿ ರವಾನೆ ಆಗಲಿದೆ. ಮನೆಯಲ್ಲೇ ಗೌಪ್ಯ ಮತದಾನಕ್ಕೆ ಅವಕಾಶವಿದ್ದು ಈ ಪ್ರಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗುತ್ತದೆ.

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next