Advertisement

ಬಿಬಿಎಂಪಿ-ಬಿಎಂಟಿಸಿ ಜಟಾಪಟಿ

12:03 PM Jul 29, 2018 | |

ಬೆಂಗಳೂರು: ಬಿಬಿಎಂಪಿ ರಸ್ತೆಗಳಿಂದ ಬಿಎಂಟಿಸಿ ಬಸ್‌ಗಳು ಹಾಳಾಗುತ್ತಿವೆ… ಬಿಎಂಟಿಸಿ ಬಸ್‌ಗಳಿಂದಲೇ ಪಾಲಿಕೆ ರಸ್ತೆಗಳು ಹಾಳಾಗಿವೆ ಎಂಬ ವಿಚಾರ ಬಿಬಿಎಂಪಿ ವಿಶೇಷ ಸಭೆಯಲ್ಲಿ ಬಿಎಂಟಿಸಿ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ನಡುವಿನ ಚರ್ಚೆಗೆ ಕಾರಣವಾಯಿತು. 

Advertisement

ಬಿಎಂಟಿಸಿ ಸಂಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಶನಿವಾರ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ “ಸೆಸ್‌ ಸಂಗ್ರಹ’ ವಿಚಾರ ಪ್ರಸ್ತಾಪಿಸಿದ ಪಾಲಿಕೆಯ ಅಧಿಕಾರಿಗಳು ಬಿಎಂಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. 

ಮೊದಲಿಗೆ ವಿಷಯ ಪ್ರಸ್ತಾಪಿಸಿದ ಮೇಯರ್‌, ಪಾಲಿಕೆಯ ರಸ್ತೆಗಳಿಂದ ಬಸ್‌ಗಳು ಹಾಳಾಗುತ್ತಿದ್ದು, ಪಾಲಿಕೆಯೇ ಬಿಎಂಟಿಸಿಗೆ ತೆರಿಗೆ ನೀಡಬೇಕೆಂದು ಹೇಳುತ್ತೀರಾ. ಆದರೆ, ಬಿಎಂಟಿಸಿ ಬಸ್‌ಗಳಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾಲಿಕೆಯ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ ನೀವೇ ಪಾಲಿಕೆಗೆ ಸೆಸ್‌ ಪಾವತಿಸಬೇಕು ಎಂದರು. 

ಅದಕ್ಕೆ ಸಮಜಾಯಿಷಿ ನೀಡಿದ ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಚನ್ನಬಸಪ್ಪ, ಇತರೆ ದೇಶಗಳಲ್ಲಿ ನಗರ ಸಾರಿಗೆಯನ್ನು ನಗರಾಡಳಿತದಿಂದಲೇ ನಿರ್ವಹಿಸಲಾಗುತ್ತದೆ. ಸದ್ಯ ಬಿಎಂಟಿಸಿ ನಷ್ಟದಲ್ಲಿದ್ದು, ಪಾಲಿಕೆಯಿಂದ ತೆರಿಗೆ ಸೆಸ್‌ ಪಡೆಯುವ ಮೂಲಕ ನಷ್ಟ ಭರಿಸುವ ಕುರಿತು ಚಿಂತಸಲಾಗಿದೆ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್‌, ನಗರದ ರಸ್ತೆಗಳ ಅಭಿವೃದ್ಧಿಗೆ ಪಾಲಿಕೆಯಿಂದ ಪ್ರತಿವರ್ಷ 1200 ಕೋಟಿ ರೂ. ವ್ಯಯಿಸಲಾಗುತ್ತಿದೆ. ಆದರೆ, ಬಿಎಂಟಿಸಿ ಬಸ್‌ಗಳಿಂದ ರಸ್ತೆಗಳು ಹಾಳಾಗುತ್ತಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ.

Advertisement

ಕೆಎಂಸಿ ಕಾಯ್ದೆಯ ನಿಯಮ 279ರ ಪ್ರಕಾರ ಬಿಎಂಟಿಸಿ ಬಸ್‌ಗಳಿಂದ ಸೆಸ್‌ ಸಂಗ್ರಹಿಸಲು ಪಾಲಿಕೆಗೆ ಅವಕಾಶವಿದೆ. ಪಾಲಿಕೆಯೂ ಆರ್ಥಿಕವಾಗಿ ನಷ್ಟದಲ್ಲಿದ್ದು, ಬಿಎಂಟಿಸಿ ವತಿಯಿಂದ ಸೆಸ್‌ ಸಂಗ್ರಹಿಸಲು ಕ್ರಮಕೈಗೊಳ್ಳಬೇಕು ಎಂದು ಮೇಯರ್‌ರನ್ನು ಒತ್ತಾಯಿಸಿದರು. 

ಬಿಎಂಟಿಸಿ ಬಸ್‌ಗಳು ಸಮರ್ಪಕವಾಗಿ ಸೇವೆ ಒದಗಿಸುತ್ತಿಲ್ಲವೆಂದು ಹಲವಾರು ಸದಸ್ಯರು ಹೇಳಿದರು. ಬಸ್‌ಗಳು ಸರಿಯಾಗಿ ಸಂಚಾರ ಮಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇದರೊಂದಿಗೆ ಚಾಲಕರು ನಿಲ್ದಾಣವಲ್ಲದ ಕಡೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ಜನರಿಗೆ ಸಮಸ್ಯೆಯಾಗಿದೆ.

ಇನ್ನು ತಮ್ಮ ವಾರ್ಡ್‌ ರಸ್ತೆಗಳು ಕಿರಿದಾಗಿರುವುದರಿಂದ ಮಿನಿಬಸ್‌ಗಳನ್ನು ಕಳುಹಿಸಬೇಕೆಂಬ ಒತ್ತಾಯಗಳು ಕೇಳಿಬಂದವು. ಅವೆಲ್ಲವನ್ನೂ ಆಲಿಸಿದ ಚನ್ನಬಸಪ್ಪ ಅವರು, ಬಸ್‌ ಸಮಸ್ಯೆಯಿರುವ ವಾರ್ಡ್‌ಗಳನ್ನು ಪಟ್ಟಿಮಾಡಿಕೊಂಡಿದ್ದು,

ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹಿರಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ನಗರದಲ್ಲಿ ಅಗತ್ಯ ಬಸ್‌ಗಳ ಸಂಖ್ಯೆ ಹೆಚ್ಚಿಸಲು ಹಾಗೂ ನಮ್ಮ ಮೆಟ್ರೋಗೆ ಸಂಪರ್ಕ ಸೇತುವೆಯಾಗಿ ಬಿಎಂಟಿಸಿ ಬಸ್‌ಗಳು ಸಂಚರಿಸುವ ವಿಷಯ ಕುರಿತು ನಿರ್ಣಯ ಕೈಗೊಳ್ಳಲಾಯಿತು. 

ಜಾಹೀರಾತಿಗಾಗಿ ಬಸ್‌ ಶೆಲ್ಟರ್‌: ನಗರದಲ್ಲಿ ಒಂದು ಬಸ್‌ ನಿಲ್ದಾಣದ ಬಳಿ ಮೂರ್‍ನಾಲ್ಕು ಬಸ್‌ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಜನರಿಗೆ ಅನುಕೂಲವಾಗುವ ಜಾಗದ ಬದಲಿಗೆ ಜಾಹೀರಾತು ಸಮರ್ಪಕವಾಗಿ ಕಾಣುವ ಜಾಗಗಳಲ್ಲಿ ಶೆಲ್ಟರ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಎಲ್ಲ ಪಕ್ಷಗಳ ಪಾಲಿಕೆ ಸದಸ್ಯರು ಆರೋಪಿಸಿದರು. 

ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಬಸ್‌ ಶೆಲ್ಟರ್‌ಗಳು ಜಾಹೀರಾತಿಗೆ ಸೀಮಿತವಾಗಿದ್ದು, ಜಾಹೀರಾತು ಚೆನ್ನಾಗಿ ಕಾಣುವ ಜಾಗದಲ್ಲಿ ಶೆಲ್ಟರ್‌ಗಳನ್ನು ನಿರ್ಮಿಸಲು ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ನಗರದ ಹೊರ ವಲಯದಲ್ಲಿ ಜಾಹೀರಾತುಗಳನ್ನು ಯಾರು ನೋಡುವುದಿಲ್ಲವೆಂಬ ಕಾರಣದಿಂದ ಅಲ್ಲಿ ಯಾರು ಶೆಲ್ಟರ್‌ ನಿರ್ಮಿಸಲು ಮುಂದಾಗುವುದಿಲ್ಲ ಎಂದು ಆರೋಪಿಸಿದರು. 

ಡಕೋಟ ಬಸ್‌ಗಳಿವೆ: ದೊಮ್ಮಲೂರಿನಲ್ಲಿ ಹೆಚ್ಚಿನ ಸಂಖ್ಯೆಯ ಡಕೋಟ ಬಸ್‌ಗಳು ಓಡಾಡುತ್ತಿದ್ದು, ಮೇಲ್ಸೇತುವೆ ಏರಲು ಭಾರಿ ಸದ್ದು ಮಾಡುತ್ತವೆ. ಇಂತಹ ಬಸ್‌ಗಳನ್ನು ಬದಲಿಸಬೇಕಿದೆ ಎಂದು ಲಕ್ಷ್ಮೀನಾರಾಯಣ ಆರೋಪಿಸಿದರು. 
ಅದಕ್ಕೆ ಉತ್ತರಿಸಿದ ಚನ್ನಬಸಪ್ಪ, ದೇಶದಲ್ಲಿಯೇ ಬಿಎಂಟಿಸಿ ಬಸ್‌ಗಳು ಪ್ರಥಮ ಸ್ಥಾನದಲ್ಲಿವೆ. ಈ ಮೊದಲು ತಿಂಗಳಿಗೆ 1 ಸಾವಿರ ಬಸ್‌ಗಳು ದುರಸ್ತಿಯಾಗುತ್ತಿದ್ದವು. ಆದರೆ, ಆ ಪ್ರಮಾಣ ಇಂದು 100ಕ್ಕೆ ಇಳಿಸಿದೆ ಎಂದು ಉತ್ತರಿಸಿದರು. 

ಫೀಡರ್‌ ಸೇವೆ ಒದಗಿಸಿ: ಸಾರ್ವಜನಿಕರು ನಮ್ಮ ಮೆಟ್ರೋ ಸಾರಿಗೆಯನ್ನು ಹೆಚ್ಚು ಬಳಸುತ್ತಿದ್ದಾರೆ. ಹೀಗಾಗಿ ಮೆಟ್ರೋ ನಿಲ್ದಾಣಗಳಿಂದ ಅವರ ಸ್ಥಳಕ್ಕೆ ತಲುಪಲು ಸಹಕಾರಿಯಾಗುವಂತೆ ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕಿದೆ. ಇದರಿಂದಾಗಿ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ತಿಳಿಸಿದರು. 

ಬಸ್‌ಗಳು ರಸ್ತೆಯಲ್ಲೇ ನಿಲ್ಲುತ್ತವೆ: ರಾತ್ರಿ ವೇಳೆ ಬಸ್‌ಗಳನ್ನು ಡಿಪೋಗಳಲ್ಲಿ ನಿಲ್ಲಿಸದೆ ಧನ್ವಂತರಿ ರಸ್ತೆಯಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿದೆ. ಹೀಗಾಗಿ ಬಸ್‌ಗಳನ್ನು ಡಿಪೋಗಳಲ್ಲಿ ನಿಲ್ಲುವಂತೆ ಸೂಚಿಸಬೇಕು ಎಂದು ಗಾಂಧಿನಗರ ವಾರ್ಡ್‌ ಪಾಲಿಕೆ ಸದಸ್ಯ ಲತಾ ಅವರು ಆಗ್ರಹಿಸಿದರು. 

ತೆರಿಗೆ ಸಂಗ್ರಹಿಸಿ: ನಮ್ಮ ಮೆಟ್ರೋ ಮಾರ್ಗವನ್ನು ಪಾಲಿಕೆಯ ಜಾಗದಲ್ಲಿ ನಿರ್ಮಿಸಲಾಗಿದ್ದು, ಮೆಟ್ರೋ ಪಿಲ್ಲರ್‌ಗಳಿಗೆ ಹಾಕಲಾಗಿರುವ ಜಾಹೀರಾತು ಫ‌ಲಕಗಳಿಂದ ಮೆಟ್ರೋನವರು ತೆರಿಗೆ ಪಡೆಯುತ್ತಿದ್ದಾರೆ. ನಿಯಮದಂತೆ ಜಾಹೀರಾತು ತೆರಿಗೆ ಪಾಲಿಕೆಗೆ ಸೇರಬೇಕಿದ್ದು, ಪಾಲಿಕೆಯ ಅಧಿಕಾರಿಗಳು ಈ ಕುರಿತು ಕ್ರಮಕ್ಕೆ ಮುಂದಾಗಬೇಕು ಎಂದು ಶಾಸಕ ಮುನಿರತ್ನ ಸಲಹೆ ನೀಡಿದರು. 

ದಟ್ಟಣೆ ನಿವಾರಣೆಗೆ ಹೊರವಲಯದಲ್ಲಿ ನಿಲ್ದಾಣ ಮಾಡಿ: ಹೊರ ಭಾಗದ ಜನರು ನಗರಕ್ಕೆ ಬಳ್ಳಾರಿ, ತುಮಕೂರು, ಬನ್ನೇರುಘಟ್ಟ, ಹಳೆ ಮದ್ರಾಸ್‌ ರಸ್ತೆ ಸೇರಿದಂತೆ ಒಟ್ಟು 18 ರಸ್ತೆಗಳಿಂದ ಪ್ರವೇಶಿಸುತ್ತಾರೆ. ಹೊರ ಭಾಗದಿಂದ ಬರುವ ಬಸ್‌ಗಳಿಗೆ ಅಲ್ಲಿಯೇ ಒಂದು ನಿಲ್ದಾಣ ಮಾಡಿ ಅಲ್ಲಿಂದ ನಿಗದಿತ ಸಮಯಕ್ಕೆ ಬಿಎಂಟಿಸಿ ಬಸ್‌ಗಳು ಸಂಚಾರ ಮಾಡುವಂತೆ ಮಾಡಿದರೆ, ನಗರದಲ್ಲಿ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಸಲಹೆ ನೀಡಿದರು. 

ಅಕ್ಟೋಬರ್‌ನಲ್ಲಿ ಎಲೆಕ್ಟ್ರಿಕಲ್‌ ಬಸ್‌: ಎಲೆಕ್ಟ್ರಿಕ್‌ ಬಸ್‌ಗಳ ಖರೀದಿಗೆ ಕಾರ್ಯಾದೇಶ ನೀಡಲು ಸಿದ್ಧವಾಗಿದ್ದು, ಈ ಕುರಿತು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ 80 ಎಲೆಕ್ಟ್ರಿಕ್‌ ಬಸ್‌ಗಳನ್ನು ಖರೀದಿಸಲಾಗುವುದು. ಅದರಂತೆ ಅಕ್ಟೋಬರ್‌ ತಿಂಗಳ ವೇಳೆಗೆ ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಚನ್ನಬಸಪ್ಪ ತಿಳಿಸಿದರು. 

ಕರೆದರೂ ಬಾರದ “ಕೊಳಚೆ’ ಮಂಡಳಿ ಅಧಿಕಾರಿಗಳು: ಬಿಬಿಎಂಪಿ ವತಿಯಿಂದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಅದರಂತೆ ಸಭೆಯಲ್ಲಿ ಭಾಗವಹಿಸುವಂತೆ ಮಂಡಳಿಯ ಅಧಿಕಾರಿಗಳಿಗೂ ಪತ್ರ ಬರೆಯಲಾಗಿತ್ತು. ಆದರೆ, ಯಾವೊಬ್ಬ ಅಧಿಕಾರಿಯೂ ಸಭೆಯಲ್ಲಿ ಹಾಜರಾಗದ ಕಾರಣದ ಆ ವಿಷಯವನ್ನು ಕೈಬಿಟ್ಟು ಪಾಲಿಕೆ ಸದಸ್ಯರು ಬಿಎಂಟಿಸಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡಿದರು. 

ಸಭೆಯ ಆರಂಭದಲ್ಲಿಯೇ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಕೊಳಗೇರಿ ಅಭಿವೃದ್ಧಿ ಮಂಡಳಿ ಬಗ್ಗೆ ಪ್ರಸ್ಥಾಪಿಸಿ ಖಾಸಗಿ ಜಮೀನಿನಲ್ಲಿ ಶೆಡ್‌ಗಳನ್ನು ಹಾಕಿಕೊಂಡಿರುವವರಿಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ, ಅವರಿಗೆ ಹಕ್ಕುಪತ್ರ ನೀಡದ ಹಿನ್ನೆಲೆಯಲ್ಲಿ ಅವರು ತೆರಿಗೆ ಪಾವತಿಸಲು ಸಿದ್ಧವಿದ್ದರೂ ತೆರಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದರು. 

ಪಾಲಿಕೆಯಿಂದ ಕೊಳಗೇರಿ ಪ್ರದೇಶಗಳಿಗೆ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ, ಆ ಪ್ರದೇಶಗಳಲ್ಲಿ ಹಕ್ಕುಪತ್ರ ನೀಡದ ಕಾರಣ ನಮಗೆ ತೆರಿಗೆ ಬರುತ್ತಿಲ್ಲ. ಹೀಗಾಗಿ ನಗರದಲ್ಲಿನ ಎಲ್ಲ ಕೊಳೆಗೇರಿಯ ಜನರಿಗೆ ಹಕ್ಕು ಪತ್ರ ನೀಡುವ ಕುರಿತು ಸರ್ಕಾರಕ್ಕೆ ಪತ್ರ ಬರೆಯಬೇಕಿದೆ ಎಂದು ಹೇಳಿದರು. ಪ್ರತಿಪಕ್ಷನಾಯಕ ಪದ್ಮನಾಭರೆಡ್ಡಿ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ವಿಧಾನ ಪರಿಶತ್‌ ಸದಸ್ಯ ಪಿ.ಆರ್‌.ರಮೇಶ್‌ ಸೇರಿದಂತೆ ಪ್ರಮುಖರು ಅದಕ್ಕೆ ದನಿಗೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next