Advertisement

ಬೀದಿ ನಾಯಿಗಳ ಹೆಸರಲ್ಲೂ ಬರಲಿದೆ ಬಿಬಿಎಂಪಿ ಆ್ಯಪ್‌!

11:40 AM Nov 24, 2018 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಮದ್ದು ನೀಡಲು ಮುಂದಾಗಿರುವ ಬಿಬಿಎಂಪಿ, ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ನಾಯಿಗಳಿಗೆ ಮೈಕ್ರೋಚಿಪ್‌ ಅಳವಡಿಸಲು ಚಿಂತಿಸಿದೆ.

Advertisement

ನಾಗರಿಕರಿಗೆ ಮರ ಹಂಚಲು “ಬಿಬಿಎಂಪಿ ಗ್ರೀನ್‌’, ಸಮಸ್ಯೆಗಳ ಪರಿಹಾರಕ್ಕಾಗಿ “ಸಹಾಯ’, ಮನೆಯ ಸಂಖ್ಯೆ ತಿಳಿಯಲು “ಡಿಜಿ7′, ಶೌಚಾಲಯಗಳ ಮಾಹಿತಿಗೆ “ಇ-ಟಾಯ್ಲೆಟ್‌’, ಇಂದಿರಾ ಕ್ಯಾಂಟಿನ್‌ ಮಾಹಿತಿಗೆ “ಇಂದಿರಾ ಕ್ಯಾಂಟೀನ್‌’, ನಗರದ ಸ್ವತ್ಛತೆಗೆ “ಕ್ಲೀನ್‌ ಬೆಂಗಳೂರು’ ಹೀಗೆ ವಿವಿಧ ಉದ್ದೇಶಗಳಿಗಾಗಿ ಹತ್ತಾರು ಆ್ಯಪ್‌ಗ್ಳನ್ನು ಅಭಿವೃದ್ಧಿಪಡಿಸಿರುವ ಬಿಬಿಎಂಪಿ, ಇದೀಗ ಬೀದಿ ನಾಯಿ ಹೆಸರಿನಲ್ಲಿ ನಡೆಯುವ ಅಕ್ರಮಗಳ ತಡೆಗೆ ವಿಶೇಷ ಆ್ಯಪ್‌ ತರಲು ಮುಂದಾಗಿದೆ.

ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಪ್ರತಿವರ್ಷ ಸಾವಿರಾರು ನಾಯಿಗಳನ್ನು ಎಬಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಪಾಲಿಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದರೂ ಬೀದಿ ನಾಯಿಗಳ ಹಾವಳಿ ತಪ್ಪಿಲ್ಲ. ಇತ್ತೀಚಿಗೆ ಬೀದಿ ನಾಯಿಗಳ ದಾಳಿಯಿಂದ ಬಾಲಕ ಮೃತಪಟ್ಟಿದ್ದರೆ, ಹತ್ತಾರು ಕಡೆಗಳಲ್ಲಿ ಹಿರಿಯರು ಹಾಗೂ ಮಕ್ಕಳನ್ನು ನಾಯಿಗಳು ಗಾಯಗೊಳಿಸಿವೆ. ಜತೆಗೆ ಸಮರ್ಪಕವಾಗಿ ಎಬಿಸಿ ಚಿಕಿತ್ಸೆ ನಡೆಯುತ್ತಿಲ್ಲ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರೇ ಬಿಬಿಎಂಪಿ ಆಯುಕ್ತರಿಗೆ ಇ-ಮೇಲ್‌ ಮೂಲಕ ದೂರು ನೀಡಿದ್ದರು.

ಆ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಹೆಸರಿನಲ್ಲಿ ನಡೆಯುತ್ತಿವೆ ಎನ್ನಲಾದ ಅಕ್ರಮಗಳಿಗೆ ಕಡಿವಾಣ ಹಾಕಲು ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಪರೀಕ್ಷೆ ನಡೆಸಲಾಗುತ್ತಿದೆ. ಜನವರಿಯಲ್ಲಿ ಹೊಸದಾಗಿ ಕರೆಯಲು ಉದ್ದೇಶಿಸಿರುವ ಟೆಂಡರ್‌ನಲ್ಲಿ ಆ್ಯಪ್‌ ಬಳಕೆ ಕಡ್ಡಾಯಗೊಳಿಸುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಆ್ಯಪ್‌ ಕಾರ್ಯನಿರ್ವಹಣೆ ಹೇಗೆ?: ಪಾಲಿಕೆಯಿಂದ ಎಬಿಸಿ ಶಸ್ತ್ರಚಿಕಿತ್ಸೆಯ ಗುತ್ತಿಗೆ ಪಡೆಯುವ ಸಂಸ್ಥೆಗಳು ತಾವು ಹಿಡಿದ ಶ್ವಾನದ ಫೋಟೋವನ್ನು ಆ್ಯಪ್‌ ಬಳಸಿ ತೆಗೆಯಬೇಕು. ಜತೆಗೆ ಶ್ವಾನದ ಮುಖಲಕ್ಷಣ, ಗಂಡು-ಹೆಣ್ಣು, ಅಂದಾಜು ವಯಸ್ಸು, ಯಾವ ಲಸಿಕೆ ನೀಡಲಾಗಿದೆ ಹೀಗೆ ಎಲ್ಲ ಮಾಹಿತಿ ದಾಖಲಿಸಬೇಕು. ಇನ್ನು ನಾಯಿಗಳನ್ನು ಹಿಡಿದ ಸ್ಥಳದ ಮಾಹಿತಿ ಸ್ವಯಂಚಾಲಿತವಾಗಿ ಆ್ಯಪ್‌ನಲ್ಲಿ ದಾಖಲಾಗಲಿದ್ದು, ಚಿಕಿತ್ಸೆ ನಂತರ ನಾಯಿಗಳನ್ನು ವಾಪಸ್‌ ಬಿಟ್ಟಿರುವ ಫೋಟೋಗಳನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು.

Advertisement

ಪಾಲಿಕೆಯಿಂದ ಮೇಲ್ವಿಚಾರಣೆ: ನಾಯಿಗಳನ್ನು ಯಾವ ದಿನ ಸೆರೆ ಹಿಡಿಯಲಾಗಿದೆ, ಯಾವ ಸ್ಥಳದಲ್ಲಿ ಹಿಡಿಯಲಾಗಿದೆ ಎಂಬ ಮಾಹಿತಿ ಆ್ಯಪ್‌ನಿಂದ ಪಾಲಿಕೆಗೆ ಲಭ್ಯವಾಗಲಿದೆ. ಜತಗೆ ಆ್ಯಪ್‌ನ ಸಂಪೂರ್ಣ ಮೇಲ್ವಿಚಾರಣೆಯನ್ನು ಪಾಲಿಕೆಯಿಂದಲೇ ನಡೆಯಲಿದೆ. ಇನ್ನು ಗುತ್ತಿಗೆ ಸಂಸ್ಥೆಗಳು ಚಿಕಿತ್ಸೆ ನಂತರ ಹಿಂದೆ ನಾಯಿಯನ್ನು ಸೆರೆಯಿಡಿದ ಸ್ಥಳದ 50 ಮೀ. ವ್ಯಾಪ್ತಿಯೊಳಗೆ ಬಿಡಬೇಕು. ಒಂದೊಮ್ಮೆ ಬೇರೆ ಸ್ಥಳದಲ್ಲಿ ಬಿಟ್ಟರೆ ಪಾಲಿಕೆಗೆ ಮಾಹಿತಿ ದೊರೆಯಲಿದೆ.

ಶ್ವಾನಗಳಿಗೆ ಮೈಕ್ರೋ ಚಿಪ್‌: ಬೀದಿ ನಾಯಿಗಳಿಗೆ ಎಬಿಸಿ ಶಸ್ತ್ರಚಿಕಿತ್ಸೆ ಆಗಿರುವುದನ್ನು ಖಾತರಿಪಡಿಸಿಕೊಳ್ಳಲು ಕಾಲರ್‌ ಅಥವಾ ಮೈಕ್ರೋಚಿಪ್‌ ಅಳವಡಿಸಲು ಪಾಲಿಕೆ ಚಿಂತಿಸಿದೆ. ಅದರಂತೆ ನಾಯಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಸಂಸ್ಥೆಯು ಚಿಕಿತ್ಸೆ ನಡೆಸಿದ ಬಳಿಕ ನಾಯಿಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕಾಲರ್‌ ಅಥವಾ ಮೈಕ್ರೋಚಿಪ್‌ ಅಳವಡಿಸಬೇಕು. ಇದರಿಂದಾಗಿ ಮುಂದೆ ನಾಯಿಗಳನ್ನು ಹಿಡಿದಾಗ ಎಬಿಸಿ ಆಗಿದೆಯೇ ಇಲ್ಲವೆ ಎಂಬುದು ತಿಳಿಯಲಿದ್ದು, ಇದಕ್ಕಾಗಿ ವಿಶೇಷವಾಗಿ ಸ್ಕ್ಯಾನರ್‌ನ್ನು ಬಳಸುವ ಚಿಂತನೆಯಿದೆ.

ಬೀದಿ ನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಎಬಿಸಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ವಿಶೇಷ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಪರೀಕ್ಷೆಗೆ ಒಳಪಡಿಸಲಾಗಿದೆ. ಜನವರಿಯಲ್ಲಿ ಕರೆಯುವ ಹೊಸ ಟೆಂಡರ್‌ನಲ್ಲಿ ಆ್ಯಪ್‌ ಬಳಕೆ ಕಡ್ಡಾಯಗೊಳಿಸಲಾಗುವುದು.
-ರಂದೀಪ್‌, ವಿಶೇಷ ಆಯುಕ್ತರು (ಘನತ್ಯಾಜ್ಯ ನಿರ್ವಹಣೆ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next