Advertisement

“ಅನಾಥ’ವಾಹನಗಳ ವಿರುದ್ಧ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಜಂಟಿ ಆಪರೇಷನ್‌

06:01 PM Dec 04, 2021 | Team Udayavani |

ಬೆಂಗಳೂರು : ಪಾದಚಾರಿ ಮಾರ್ಗ, ಮೇಲು ಸೇತುವೆ ಕೆಳಭಾಗದಲ್ಲಿ “ಬೀಡುಬಿಟ್ಟಿರುವ’ ವಾಹನಗಳ ತೆರವಿಗೆ ಬಿಬಿಎಂಪಿ ಹಾಗೂ ಸಂಚಾರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಈ ಸಂಬಂಧ ಬಿಬಿಎಂಪಿ ತೆರವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಪಾದಚಾರಿ ಮಾರ್ಗ, ಮೇಲು ಸೇತುವೆ ಕೆಳಭಾಗದಲ್ಲಿ ದಿನಗಟ್ಟಲೆ ನಿಂತಿರುವ ವಾಹನಗಳ ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರನ್ನೊಳಗೊಂಡ “ಗುರುತಿಸುವಿಕೆ ತಂಡ’ಗಳನ್ನು ರಚಿಸಲಾಗಿದೆ. ಈ ತಂಡದಲ್ಲಿ ಬಿಬಿಎಂಪಿಯ ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ವಲಯದ ಮುಖ್ಯ ಎಂಜಿನಿ ಯರ್‌ಗಳು, ಸಂಚಾರ ವಿಭಾಗದ ಡಿಸಿಪಿಗಳು,ಆಯಾ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ಗಳು ಇರಲಿದ್ದಾರೆ.ಈ ಬಗ್ಗೆ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರ ಜನಸಂಪರ್ಕ ದಿವಸ್‌ ಕಾರ್ಯಕ್ರಮದಲ್ಲಿ ದೂರು ಬಂದಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪೊಲೀಸ್‌ ಆಯುಕ್ತರು, ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಪತ್ರ ಬರೆದಿದ್ದರು. ನಮ್ಮ ಇಲಾಖೆಯ ಸಹಕಾರವೂ ಸಿಗಲಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿ ಹೊರಡಿಸಲಾಗಿದೆ. ತಂಡದ ಕಾರ್ಯವೇನು? ಈ ತಂಡ ಮೊದಲಿಗೆ ವಾಹನ ನಿಲುಗಡೆ ಸ್ಥಳ ಮಹಜರು ಮಾಡಿ, ಅಂದಾಜು ಎಷ್ಟು ದಿನಗಳಿಂದ ವಾಹನ ನಿಂತಿದೆ? ಲೋಕೇಷನ್‌ ಸಮೇತ ವಾಹನ ಫೋಟೋ ತೆಗೆದು, ವಾಹನ ನೋಂದಣಿ ಸಂಖ್ಯೆ, ಎಂಜಿನ್‌ ನಂಬರ್‌, ವಾಹನ ಸ್ಥಿತಿ ಬಗ್ಗೆ ಫೋಟೋ ಪಡೆದುಕೊಳ್ಳಬೇಕು. ಬಳಿಕ ಟೋಯಿಂಗ್‌ ಮಾಡಿ ಆಯಾ ವಲಯದ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ಬಳಿಕ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿಗೆ ಮಾಹಿತಿ ನೀಡಿ, ಅಪರಾಧ ಪ್ರಕರಣಗಳು ದಾಖಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ವಾಹನದ ಮಾಲೀಕನಿಗೆ ನೋಟಿಸ್‌ ಜಾರಿ ಮಾಡಿ, ಆತ ಬಾರದಿದ್ದರೆ ಕ್ರಮ ಕೈಗೊಂಡು ಇ-ಆಕ್ಷನ್‌ ಮೂಲಕ ಹರಾಜು ಹಾಕಿ ಬಳಿಕ ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಮಾಹಿತಿ ನೀಡಬೇಕು.

ಇದನ್ನೂ ಓದಿ : ಶಿವಮೊಗ್ಗ: ಲಂಚ ಪಡೆಯುತ್ತಿದ್ದ ಅಧಿಕಾರಿ ಬಂಧನ

ಪ್ರಮುಖ ಹಂತಗಳೇನು? ಮೊದಲ ದಿನ ವಾಹನಗಳ ಗುರುತಿಸಿ, ಸ್ಥಳ ಮಹಜರು ಮಾಡಬೇಕು. 2ನೇ ದಿನ ಬಿಬಿಎಂಪಿ ಕಾಯ್ದೆ ಅನ್ವಯ ವಾಹನದ ಮೇಲೆ ನೋಟಿಸ್‌ ಅಂಟಿಸಬೇಕು. ಮಾಲೀಕನಿಗೂ ನೋಟಿಸ್‌ ಜಾರಿ ಮಾಡಬೇಕು. ಮಾಲೀಕ ಬಾರದಿದ್ದಾಗ ಹತ್ತು ದಿನಗಳ ನಂತರ ವಾಹನವನ್ನು ಟೋಯಿಂಗ್‌ ಮಾಡಬೇಕು. 14ನೇ ದಿನ ಮುಂದಿನ 7 ದಿನಗಳ ಒಳಗೆ ವಾಹನ ಮಾಲೀಕರು ಬರಬೇಕು ಎಂದು ಸಾರ್ವಜನಿಕ ಪ್ರಕಟಣೆ ಹೊರಡಿಸಬೇಕು. 21ನೇ ದಿನ ಎಂಎಸ್‌ಟಿಸಿ ಇ-ಪೋರ್ಟ್‌ ಲ್‌ನಲ್ಲಿ ಹರಾಜಿಗೆ ವಾಹನದ ಮಾಹಿತಿ ನೊಂದಾಯಿಸಬೇಕು. 30 ದಿನ ನಂತರ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಒಂದು ವೇಳೆ ವಾಹನ ಮಾಲೀಕ ದಂಡ ಕಟ್ಟಲು ಮುಂದಾದರೆ, ಅದಕ್ಕಾಗಿ ಬಿಬಿಎಂಪಿಯ ಪ್ರತಿ ವಲಯದಲ್ಲಿ ಪ್ರತ್ಯೇಕವಾಗಿ ತೆರೆದಿರುವ ಬ್ಯಾಂಕ್‌ ಖಾತೆಗೆ ನಗದು ಜಮೆ ಮಾಡಬೇಕು. ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ಹಂತದ ಅಧಿಕಾರಿ ಮತ್ತು ಏಜೆನ್ಸಿ ನಡುವೆ ಒಪ್ಪಂದ ಮಾಡಿಕೊಳ್ಳಬೇಕು.

ಮಾಲೀಕ ಬಂದರೆ ಹಣ ವಾಪಸ್‌

Advertisement

ಒಂದು ವೇಳೆ ಇ-ಪೋರ್ಟಲ್‌ ಮೂಲಕ ವಾಹನ ಹರಾಜು ಹಾಕಿದ ಬಳಿಕ ಮಾಲೀಕ ಬಂದು ಸೂಕ್ತ ದಾಖಲೆಗಳನ್ನು ಒದಗಿಸದರೆ, ಆ ಹಣವನ್ನು ಹಿಂದಿರುಗಿಸಲಾಗುತ್ತದೆ. ಬಿಬಿಎಂಪಿ ಖಾತೆಯಲ್ಲೇ ಹಣ ಇರುವುದರಿಂದ ದಂಡ ಕಟ್ಟಿಸಿಕೊಂಡು ಹರಾಜು ಆದ ಹಣವನ್ನು ವಾಹನ ಮಾಲೀಕನಿಗೆ ಹಿಂದಿರುಗಿಸಲಾಗುತ್ತದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next