ಬೆಂಗಳೂರು: ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಕೋವಿಡ್‌ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ 19 ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟಿಸಿದರು. ಬಿಬಿಎಂಪಿ ಅಧಿಕಾರಿ ಸಿಬ್ಬಂದಿ ಸಾಮೂಹಿಕವಾಗಿ ರಜೆ ಹಾಕಿ ಕೇಂದ್ರ ಕಚೇರಿ ಆವರಣಕ್ಕೆ ಸೀಮಿತವಾಗಿ ಪ್ರತಿಭಟನೆ ರ್ಯಾಲಿ ನಡೆಸಿದರು.
ಈ ವೇಳೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿ, ಬಿಬಿಎಂಪಿ ಆಯುಕ್ತ ಎನ್.ಮಂಜು ನಾಥ ಪ್ರಸಾದ್, ವೃಂದ ಮತ್ತು ನೇಮಕಾತಿ ನಿಯಮ ದಲ್ಲಿರುವ ಲೋಪದೋಷದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಚರ್ಚೆ ಮಾಡಿ ಕ್ರಮಕೈಗೊಳ್ಳಲಾಗುವುದು. ಪಾಲಿಕೆಯ ಆಯುಕ್ತರ ವ್ಯಾಪ್ತಿಗೆ ಬರುವ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ ಎ. ಅಮೃತ್ ರಾಜ್, ಬಿಬಿಎಂಪಿ ನೌಕರರ ಪ್ರತಿಭಟನೆಗೆ ರಾಜ್ಯದ ವಿವಿಧ ಪಾಲಿಕೆ ಸದಸ್ಯರು ಬೆಂಬಲ ವ್ಯಕ್ತಪಡಿಸಿ ದಾವಣಗೆರೆ, ಮಂಗಳೂರು, ಬೆಳಗಾವಿ ಸೇರಿದಂತೆ ಇನ್ನಿತರ ಕಡೆ ಪ್ರತಿಭಟನೆ ನಡೆಸಿದ್ದಾರೆ ಎಂದರು.
ಬೈಪಾಸ್ ರಸ್ತೆ ನಿರ್ಮಾಣ ನಿಯಮ ಉಲ್ಲಂಘನೆ: ನೀರಲಕೇರಿ
ಪಾಲಿಕೆಯಲ್ಲಿ ಎರವಲು ಸೇವೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಅಧಿಕಾರ ಅವಧಿ ಮುಗಿದ ಕೂಡಲೇ ವರ್ಗಾವಣೆ ಮಾಡಬೇಕು. ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯದ ವೇಳೆ ಕೊವಿಡ್ ನಿಂದ ಮೃತಪಟ್ಟ 18 ಜನರ ಕುಟುಂಬದವರಿಗೆ ಈಗಾಗಲೇ ಘೋಷಿಸಿರುವಂತೆ 30 ಲಕ್ಷ ರೂ. ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ಬೇಡಿಕೆ ಈಡೇರಿಕಗೆ ಒತ್ತಾಯಿಸಲಾಗಿದೆ ಎಂದರು.
ಇನ್ನು ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗುರುವಾರ ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಎರಡು ಗಂಟೆ ಹೆಚ್ಚು ಕೆಲಸ ಮಾಡುವುದಕ್ಕೆ ಮನವಿ ಮಾಡಿದರು.