ಚಿತ್ರರಂಗಕ್ಕೆ ಬರುವ ಒಂದಷ್ಟು ಮಂದಿ ಹೊಸ ನಟರು ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡೇ ಬರುತ್ತಾರೆ. ನಟನೆ, ಡ್ಯಾನ್ಸ್, ಫೈಟ್ … ಹೀಗೆ ಹಲವು ವಿಭಾಗಗಳಲ್ಲಿ ತರಬೇತಿಯನ್ನು ಪಡೆದು ಬರುವ ಜೊತೆಗೆ ಫಿಟ್‌ನೆಸ್ ಬಗ್ಗೆಯೂ ಹೆಚ್ಚು ಗಮನಹರಿಸುತ್ತಿದ್ದಾರೆ. ಸಿನಿಮಾದ ಹಾಡು, ಫೈಟ್‌ಗಾಗಿ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಮಾಡುವ ಅನೇಕ ಯುವ ನಟರಿದ್ದಾರೆ. ಈಗ ಆ ಸಾಲಿಗೆ ಧನ್ವೀರ್ ಕೂಡಾ ಸೇರ್ಪಡೆಯಾಗಿದ್ದಾರೆ. ಯಾವ ಧನ್ವೀರ್ ಎಂದರೆ “ಬಜಾರ್’ ಸಿನಿಮಾ ಬಗ್ಗೆ ಹೇಳಬೇಕು. “ಸಿಂಪಲ್’ ಸುನಿ “ಬಜಾರ್’ ಸಿನಿಮಾವನ್ನು ನಿರ್ದೇಶಿಸುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಆ ಸಿನಿಮಾದಲ್ಲಿ ನಾಯಕರಾಗಿರುವವರೇ ಈ ಧನ್ವೀರ್.
ಕೆಲ ತಿಂಗಳ ಹಿಂದೆ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಮುಹೂರ್ತ ಮಾಡಿಕೊಂಡ ಈ ಚಿತ್ರ ಈಗ ಸಂಪೂರ್ಣ ಮುಗಿದಿದ್ದು, ಡಬ್ಬಿಂಗ್ ಹಂತದಲ್ಲಿದೆ. ಈ ಚಿತ್ರಕ್ಕಾಗಿ ಧನ್ವೀರ್ ಮಾಡಿಕೊಂಡಿರುವ ಸಿಕ್ಸ್‌ಪ್ಯಾಕ್ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಚಿತ್ರದ ಹಾಡು ಹಾಗೂ ಫೈಟ್‌ಗಾಗಿ ಧನ್ವೀರ್ ದೇಹ ದಂಡಿಸಿ ಸಿಕ್ಸ್‌ಪ್ಯಾಕ್ ಮಾಡಿ, ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೊದಲ ಚಿತ್ರದಲ್ಲೇ ಭರ್ಜರಿಯಾಗಿ ಎಂಟ್ರಿಕೊಡಲು ಧನ್ವೀರ್ ರೆಡಿಯಾಗಿದ್ದಾರೆ. ಸಿಕ್ಸ್‌ಪ್ಯಾಕ್‌ಗಾಗಿ ಧನ್ವೀರ್ ತಮ್ಮ ಮಿತ ಆಹಾರದ ಜೊತೆಗೆ ವಕೌìಟ್ ಮಾಡಿ, ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, “ಬಜಾರ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಬೆಂಗಳೂರು ಸುತ್ತಮುತ್ತ ಹಾಗೂ ಥೈಲ್ಯಾಂಡ್‌ನಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಥೈಲ್ಯಾಂಡ್‌ನ “ನೋಮ್ಯಾನ್ ಐಲ್ಯಾಂಡ್’ ಸೇರಿದಂತೆ ಹಲವು ಸುಂದರ ತಾಣಗಳಲ್ಲಿ “ಬಜಾರ್’ ಚಿತ್ರೀಕರಣ ನಡೆಸಲಾಗಿದೆ.
ಇಲ್ಲಿ ಲವ್‌ಸ್ಟೋರಿ ಜೊತೆಗೆ ಪಾರಿವಾಳ ರೇಸ್ ಕೂಡಾ ಈ ಚಿತ್ರದ ಹೈಲೈಟ್. ಪಾರಿವಾಳ ರೇಸ್ ಅನ್ನು ಮೂಲವಾಗಿಟ್ಟುಕೊಂಡು “ಬಜಾರ್’ ಚಿತ್ರದ ಕಥೆ ಸಾಗಿದೆ. ಚಿತ್ರದ ಬಗ್ಗೆ ಮಾತನಾಡುವ ಸುನಿ, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಮರ್ಷಿಯಲ್ ಆಗಿ ಏನೇನು ಬೇಕೋ, ಅವೆಲ್ಲವನ್ನು ಸೇರಿಸಿದ್ದೇವೆ. ಮುಖ್ಯವಾಗಿ ಈ ಸಿನಿಮಾ ಪಾರಿವಾಳ ರೇಸ್ ಜೊತೆಗೆ ಸಾಗುತ್ತದೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಪಾರಿವಾಳ ರೇಸ್ ಬಗ್ಗೆ ಬಂದಿರಬಹುದು. ಆದರೆ, ಇಲ್ಲಿ ತುಂಬಾ ಆಳವಾಗಿ ಅದರ ಬಗ್ಗೆ ತೋರಿಸುತ್ತಿದ್ದೇವೆ. ಸುಮಾರು 500ಕ್ಕೂ ಹೆಚ್ಚು ಪಾರಿವಾಳಗಳಿರುವ ಪ್ರಕಾಶ್ ನಗರ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಈ ಚಿತ್ರದಲ್ಲಿ ರೇಸ್ ಜೊತೆಗೆ ರೌಡಿಸಂ, ಲವ್ ಕೂಡಾ ಇದೆ. ಧನ್ವೀರ್ ತುಂಬಾ ಚೆನ್ನಾಗಿ ನಟಿಸಿದ್ದು, ಮುಂದೆ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಾರೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಸುನಿ.
“ಬಜಾರ್’ ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದ್ದು, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್‌ನಲ್ಲಿ “ಬಜಾರ್’ ತೆರೆಗೆ ಬರಬಹುದು.