Advertisement

ಅಳಿವಿನಂಚಿನಲ್ಲಿರುವ ಗೀಜಗದ ಹಕ್ಕಿ ಗೂಡುಗಳು… ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ

06:56 PM May 29, 2023 | Team Udayavani |
ರಬಕವಿ-ಬನಹಟ್ಟಿ : ಹೆಣಿಕೆ ಎಂದಾಕ್ಷಣ ನೆನಪಿಗೆ  ಬರುವುದು ಮೊದಲು ಮಹಿಳೆಯರು. ಈ ವೃತ್ತಿ ಅವರಿಗೆ ದೇವರು ಕೊಟ್ಟ ವರವಿರಬಹುದು. ಅವರು ತಮ್ಮ ಕೈಚಳಕ ತೋರಿಸುವುದರಲ್ಲಿ ಪ್ರವೀಣರು.ಆದರೆ ಹಕ್ಕಿಗಳಲ್ಲಿ  ಇದು ವ್ಯತಿರಿತಕ್ತವಾಗಿದ್ದನ್ನು ಕಾಣಬಹುದು. ನೇಯ್ಗೆ ಹಕ್ಕಿ ಎಂದೆ ಕರೆಯಿಸಿಕೊಳ್ಳುವ ಗಂಡು ಗೀಜಗ ಗೂಡು ಹೆಣೆಯುವುದರಲ್ಲಿ ಎತ್ತಿದ ಕೈ. ಈ ಗಂಡು ಹಕ್ಕಿಗೆ ದೇವರು ನೀಡಿದ ವರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸುಂದರ ಕಟ್ಟಡ ನಿರ್ಮಾಣಕ್ಕೆ ಇಂಜನೀಯರನ ಅವಶ್ಯವಿದೆ. ಗಿಜಗ ಹಕ್ಕಿ ತನ್ನ ಮನೆಗೆ ತಾನೆ ಇಂಜನೀಯರ. ಇದು ಯಾರಿಗೂ ನಿಲುಕದ ಹಾಗೆ  ಬಾವಿ ಹಾಗೂ ದೊಡ್ಡದೊಡ್ಡ ಕಾಲುವೆಗಳಲ್ಲಿ ನಿರಂತರ ಹರಿಯುವ ನೀರಿನ ಪಕ್ಕ, ಬಾಗಿದ ಗಿಡಗಂಟಿಗಳ ತುತ್ತ ತುದಿಗಳಲ್ಲಿ ಗಟ್ಟಿಮುಟ್ಟಾಗಿರುವ ಸುಂದರವಾದ ಗೂಡು ಕಟ್ಟುತ್ತದೆ. ಯಾವ ಬಿರುಗಾಳಿ ಮಳೆಗೂ ಜಗ್ಗದೆ, ಹನಿ ನೀರು ಕೂಡಾ ಗೂಡಿನ ಒಳಕ್ಕೆ ನುಸುಳದಂತೆ ನಿರ್ಮಿಸುವ ಕಲೆ ಇಂಜನೀಯರನ್ನು ನಾಚಿಸುವಂತಿದೆ.
ಗೀಜಗದ ಹೆಣಿಕೆಗೆ ಸರಿಸಾಟಿ ಯಾರಿಲ್ಲ: ಗೂಡು ಹೆಣೆಯುವುದರಲ್ಲಿ ಗೀಜಗನಿಗೆ ಎಷ್ಟೊಂದು ಆಸಕ್ತಿ, ಶೃದ್ಧೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಷಿಸಲು ತನ್ನದಾದ ಒಂದು ಪುಟ್ಟ ಸಂಸಾರ ಹೂಡಲು ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ. ಈ ಸುಂದರ ಹಕ್ಕಿಗೆ ಇಕ್ಕಳದಂತಹ ತನ್ನ ಚುಂಚಿನಲ್ಲಿ ಸಟಪಟನೆ ನೇಯುವ ಇದರ ಕಸೂತಿ ಕೆಲಸದ ಮುಂದೆ ಯಾವುದೇ ತಂತ್ರಜ್ಞಾನ ಸರಸಟಿಯಾಗದು.
ಹುಲ್ಲು ಕಡ್ಡಿಗೆ ಮುಂಗಾರು ಸಹಕಾರ : ಮುಂಗಾರು  ಬೆಳೆಯ ಮಧ್ಯೆ ಹಿಂಗಾರು ಮಳೆ ಆರಂಭದ ಹಂತದಲ್ಲಿ ಈ ಗೀಜಗಗಳು ಗೂಡು ಕಟ್ಟಲು ಆರಂಬಿಸುತ್ತ್ತಿರುವುದು ನಿಸರ್ಗದ ಕೊಡುಗೆ. ಏಕೆಂದರೆ ಮುಂಗಾರು ಮಳೆಯಿಂದ ಹುಲ್ಲುಕಡ್ಡಿಗಳೆಲ್ಲ ಹುಲುಸಾಗಿ ಬೆಳೆದಿರುತ್ತವೆ. ಗೂಡು ಕಟ್ಟಲು ಹುಲ್ಲುಕಡ್ಡಿ  ಹೇರಳವಾಗಿ ಬೇಕು ಉದ್ದನೇಯ ಹುಲ್ಲು ಹುಡುಕಲು ಗೀಜಗಕ್ಕೆ ಹೆಣಗಾಟವಾದರೂ ಕೂಡ ಮುಂಗಾರು ಮಳೆ ಅದಕ್ಕೆ ಸಹಕಾರ ನೀಡಿದಂತಾಗುತ್ತದೆ.
ಗೂಡುಕಟ್ಟುವ ವಿಧಾನ : ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತು ಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಿಸಬೇಕು. ಗೀಜಗ ಗೂಡನ್ನು ಹಸಿರಾದ  ಎಳೆಗಳಿಂದ ನಿರ್ಮಾಣ ಮಾಡುತ್ತದೆ.ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿತಂದು ಪರೀಕ್ಷೀಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡು ಹಕ್ಕಿ ಗೂಡನ್ನು ಅರ್ಧ ನಿರ್ಮಿಸಿದ ನಂತರಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ  ಇಷ್ಟವಾದರೆ ಮುಂದುವರೆಸುತ್ತದೆ ಇಲ್ಲದಿದ್ದರೆ ಮರಳಿ ಕಟ್ಟುತ್ತದೆ. ಗೂಡ ಅಪೂರ್ಣವಾಗಿರುವಾಗಲೆ ಹೆಣ್ಣು ಹಕ್ಕಿ ಪ್ರವೇಶಿಸಿ ಮೊಟ್ಟೆ ಇಡುತ್ತದೆ. ನಂತರ ಗಂಡು ಹಕ್ಕಿ ಇತರರು ಪ್ರವೇಶಿಸದಂತೆ ಕೆಳಗಿನ ಬಾಯಿಯವರೆಗೂ  ಮುಚ್ಚಿಬಿಡುತ್ತದೆ. ಗಂಡು ಹಕ್ಕಿ ತಾನು ಹೆಣೆದ ಗೂಡನ್ನು ಮರಿಗಳ ಪೋಷಣೆಗೆ ಬಿಟ್ಟು ಇನ್ನೊಂದು ಗೂಡನ್ನು ಕಟ್ಟಿಕೊಳ್ಳುತ್ತದೆ. ತಾಯಿ ಮತ್ತು ಮರಿಗಳಿಗೆ ಆಹಾರ ಚುಂಚಲ್ಲಿ ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಇದು ಗೂಡು ಕಟ್ಟುವುದು ಸರ್ವೆ ಸಾಮಾನ್ಯ.
ಉದರ ಪೋಷಣೆಗೆ ಹಿಂಗಾರಿ ಹಿತಕರ : ಹಿಂಗಾರಿ ಮಳೆ ಆರಂಭವಾಗುವಷ್ಟರಲ್ಲಿ ರೈತರ ಹೊಲದಲ್ಲಿನ ಸಜ್ಜಿ, ಮುಂಗಾರು ಜೋಳ ಹೀಗೆ ತೆನೆತೆನೆಗಳಲ್ಲಿ ಕಾಳು ಬೆಳೆಗಳು ಕಾಳಿನ ಹಂತದಲ್ಲಿರುವಾಗಲೇ ಈ ಗೀಜಗ ತನ್ನ ಮರಿಗಳನ್ನು ಬೆಳೆಸುವುದರೊಂದಿಗೆ ಸಂಸಾರವನ್ನು ವೃದ್ಧಿಸಿಕೊಳ್ಳುತ್ತದೆ.
ಇಕ್ಕೆಲಗಳಲ್ಲಿ ಗಡುಸಾದ ಗಿಡಗಂಟಿಗಳು ಇರುವುದನ್ನು ಗಮನಿಸಿ ಗೂಡು ನಿರ್ಮಿಸುತ್ತದೆ. ಮರಿಗಳು ಬೆಳದು ಬಲಿಷ್ಟವಾಗುವವರೆಗೂ ಆಹಾರ ತರುತ್ತದೆ. ಜಮೀನುಗಳಲ್ಲಿನ ಕೀಟಗಳನ್ನು ತಿನ್ನುವ ಪಕ್ಷಿ ಇದೀಗ ಆಧುನೀಕತೆಯಿಂದ ಮರೆಯಾಗುತ್ತಿವೆ. ಅವುಗಳ ಗೂಡುಗಳನ್ನು ಈಗ ಕಾಣುವುದು ತುಂಬಾ ವಿರಳ. ಅಪರೂಪದ ಈ ಪಕ್ಷಿ ಸಂಕುಲ ಉಳಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ.
ಗೀಜುಗ ವಿಶೇಷವಾಗಿ ಗೂಡು ನಿರ್ಮಾಣ ಮಾಡುತ್ತವೆ. ಅವು ನೋಡಲು ತುಂಬಾ ವೈಶಿಷ್ಟö್ಯವಾಗಿವೆ. ಆಧುನಿಕತೆಯಿಂದಾಗಿ ಬಾವಿ, ಹಳ್ಳ, ಕೆರೆ ಸಮೀಪದ ಗಿಡಗಂಟಿಗಳಲ್ಲಿ ಕಾಣಸಿಗುತ್ತಿದ್ದ ಗೀಜುಗ ಈಗ ಕಣ್ಮರೆಯಾಗುತ್ತಿರುವುದು ನಿಜವಾಗಿಯೂ ದುಖಃದ ಸಂಗತಿ.
– ರಾಜಕುಮಾರ ಪಿಟಗಿ, ಪಕ್ಷಿ ಪ್ರೇಮಿ ಹಾಗೂ ಪಕ್ಷಿಗಳ ಛಾಯಾಗ್ರಾಹಕರು
– ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next