Advertisement
ಹೊಸದಿಲ್ಲಿ: ಭಾರತದಲ್ಲಿ ಈಗಷ್ಟೇ ಬ್ಯಾಟರಿ ಚಾಲಿತ ಸ್ಕೂಟರ್, ಕಾರುಗಳು ಬಂದಿವೆ. ಪೂರ್ಣ ಪ್ರಮಾಣದಲ್ಲಿ ಇದು ಎಲ್ಲ ವಾಹನಗಳಲ್ಲಿ ಅಳವಡಿಕೆಯಾಗಲು ಎಷ್ಟೋ ವರ್ಷಗಳೇ ಬೇಕು, ಅಂತಹ ತಂತ್ರಜ್ಞಾನ ಏನಿದ್ದರೂ ಸ್ವೀಡನ್ ಜರ್ಮನಿಗೆ ಸೀಮಿತ ಎಂದುಕೊಂಡಿದ್ದರೆ ಬಿಟ್ಟಾಕಿ!ವಿಷಯ ಏನೆಂದರೆ, ಭಾರತದಲ್ಲಿ ಈಗಾಗಲೇ ಬ್ಯಾಟರಿ ಶಕ್ತಿ ಚಾಲಿತ ಲಾರಿ ಓಡಾಡುತ್ತಿದೆ. ಅದೂ 60 ಟನ್ ಭಾರದ ಲಾರಿ. ದಿಲ್ಲಿ ಮೂಲದ ನವೋದ್ಯಮ ಕಂಪೆನಿ ಇನ್‌ಫ್ರಾಪ್ರೈಮ್ ಲಾಜಿಸ್ಟಿಕ್ಸ್ ಟೆಕ್ನಾಲಜಿ (ಐಪಿಎಲ್‌ಟಿ) ಇದನ್ನು ಆವಿಷ್ಕರಿಸಿದ್ದು ರಸ್ತೆಗಳಲ್ಲಿ ಬಳಕೆಯಾಗುತ್ತಿದೆ. 60 ಟನ್‌ನ ಸಾಮಾನ್ಯ ಡೀಸೆಲ್ ಎಂಜಿನ್ ಲಾರಿಯನ್ನು ಬ್ಯಾಟರಿ ಅಳವಡಿಸಿ ವಿದ್ಯುತ್ ಚಾಲಿತವನ್ನಾಗಿ ಮಾಡಲಾಗಿದೆ. ಇದು ಈಗಾಗಲೇ ಪೂರ್ವ ಭಾರತದ ಹೈವೇಗಳಲ್ಲಿ ಓಡಾಡುತ್ತಿದೆ.
ಖಾಲಿ ಲಾರಿಯಾದರೆ ಸಿಂಗಲ್ ಚಾರ್ಜ್‌ಗೆ ಗಂಟೆಗೆ 400 ಕಿ.ಮೀ. ದೂರಕ್ಕೆ ಕ್ರಮಿಸುವ ಇದು ಲೋಡ್ ಇದ್ದರೆ 200 ಕಿ.ಮೀ. ದೂರದವರೆಗೆ ಕ್ರಮಿಸುತ್ತದೆ. ಅಲ್ಲದೇ ಹೆಚ್ಚು ಲೋಡ್ ಎಳೆಯುವ ಶಕ್ತಿ ಹೊಂದಿದೆ. ಇಂತಹ ಬ್ಯಾಟರಿ ಚಾಲಿತ ಲಾರಿ ಆವಿಷ್ಕರಿಸಿದ್ದರೂ ಅದಕ್ಕಿರುವ ಪ್ರಮುಖ ಸವಾಲೆಂದರೆ ಬ್ಯಾಟರಿಯನ್ನು ತಂಪಾಗಿ ಇರಿಸಿಕೊಳ್ಳುವುದು. ಇದಕ್ಕಾಗಿ ಪ್ರತ್ಯೇಕ ಕೂಲರ್ ಕೂಡ ಬ್ಯಾಟರಿ ಬಾಕ್ಸ್‌ನ ಕೆಳಭಾಗದಲ್ಲಿ ಅಳವಡಿಸಲಾಗಿದೆ. ಲಾರಿಯ ಕ್ಯಾಬಿನ್ ಹಿಂಭಾಗ ಬ್ಯಾಟರಿ ಮತ್ತು ಈ ಕೂಲರ್ ಅಳವಡಿಸಲಾಗಿದೆ. ಕಿ.ಮೀ.ಗೆ 10 ರೂ. ವೆಚ್ಚ
ಆಗಸ್ಟ್ 1ರಂದು ಮೊದಲ ಬಾರಿಗೆ ಈ ಟ್ರಕ್ ರಸ್ತೆಗೆ ಬಂದಿದ್ದು, ಮುಂದಿನ 1.5 ತಿಂಗಳಲ್ಲಿ ಇಂತಹ ಐದು ಲಾರಿಗಳನ್ನು ರಸ್ತೆಗೆ ಬಿಡಲು ಕಂಪೆನಿ ಉದ್ದೇಶಿಸಿದೆ. ಅಲ್ಲದೇ 2020ರ ವೇಳೆಗೆ 50-60 ಟ್ರಕ್ ಮಾರುಕಟ್ಟೆಗೆ ಬಿಡಲು ಉದ್ದೇಶಿಸಲಾಗಿದೆ. ಈ ಎಲೆಕ್ಟ್ರಿಕ್ ಟ್ರಕ್ ಸಂಚಾರಕ್ಕೆ ಕಿ.ಮೀ.ಗೆ 10 ರೂ. ವೆಚ್ಚವಾಗುತ್ತದೆ. ಸಾಮಾನ್ಯ ಡೀಸೆಲ್ ಟ್ರಕ್ ಆದರೆ ಕಿ.ಮೀ.ಗೆ 30 ರೂ.ವರೆಗೆ ವೆಚ್ಚವಿದೆ. 165 ಕೆ.ವ್ಯಾ. ಶಕ್ತಿಯ ಬ್ಯಾಟರಿ ಹೊಂದಿದ್ದು, ಕೇವಲ 90 ನಿಮಿಷದಲ್ಲಿ ಶೇ.100ರಷ್ಟು ಚಾರ್ಜ್ ಆಗುತ್ತದೆ.