Advertisement

ಭಟ್ಟರಹಳ್ಳಿ ಕೆರೆ ಒಡಲಿಗೇ ಕನ್ನ

01:09 PM Dec 06, 2019 | Suhan S |

ನೆಲಮಂಗಲ: ಕೆರೆಯಲ್ಲಿ ಹೂಳೆತ್ತುವ ನೆಪದಲ್ಲಿ ತೆಗೆದ ಗುಂಡಿಗಳು ಜನರಿಗೆ ಮೃತ್ಯುಕೂಪದಂತಾಗಿದ್ದು, ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

Advertisement

ತಾಲೂಕಿನ ಭಟ್ಟರಹಳ್ಳಿಯ ಕೆರೆಯು ನಾಲೈದು ಎಕರೆ ವಿಸ್ತಾರವಾಗಿದ್ದು, ಮುಂಗಾರು ಮಳೆಯ ಕೃಪೆಯಿಂದ ಗ್ರಾಮದ ಸುತ್ತಮುತ್ತಲ ದನಕರುಗಳಿಗೆ ಕುಡಿಯುವ ನೀರಿನ ಆಶ್ರಯವಾಗಿತ್ತು. ಆದರೆ ಕೆಲ ಪಟ್ಟಭದ್ರರು ಕೆರೆಯ ಮಣ್ಣನ್ನು ಜೆಸಿಬಿ, ಟ್ರ್ಯಾಕ್ಟರ್‌ ಮೂಲಕ ನೂರಾರು ಲೋಡ್‌ ಗಳಷ್ಟು ಸಾಗಾಟ ಮಾಡಿರುವುದರಿಂದ ಬೃಹದಾಕಾರದ ಗುಂಡಿಗಳು ನಿರ್ಮಾಣವಾಗಿದ್ದು, ಕೆರೆಯ ಸಮೀಪ ಹೋಗಲು ಜಾನವಾರುಗಳಿಗಷ್ಟೆ ಅಲ್ಲದೆ ಗ್ರಾಮಸ್ಥರಿಗೂ ಆತಂಕ ಎದುರಾಗಿದೆ.

ಖಾಸಗಿಯಾಗಿ ಮಾರಾಟ: ಕೆರೆಯ ಹೂಳೆತ್ತುವ ಅನಿವಾರ್ಯವಿದ್ದರೆ, 2 ರಿಂದ 2.5 ಅಡಿಗಳಷ್ಟು ಮಾತ್ರ ಅಧಿಕಾರಿಗಳ ಅನುಮತಿ ಪಡೆದು ಅವರ ಸಮ್ಮುಖದಲ್ಲಿ ತೆಗೆಯಬೇಕು. ಆದರೆ ಸರಕಾರಿ ಕೆರೆಯಮಣ್ಣನ್ನು ಅನುಮತಿಯಿಲ್ಲದೆ ಇಟ್ಟಿಗೆ ಗೂಡು, ಖಾಸಗಿ ವ್ಯಕ್ತಿಗಳ ತೋಟಗಳಿಗೆ, ದಾಸ್ತಾನು ಮಳಿಗೆ ನಿರ್ಮಾಣ ಸ್ಥಳಗಳಿಗೆ ಟ್ರ್ಯಾಕ್ಟರ್‌ ಲೋಡ್‌ಗೆ 600 ರಿಂದ 800ರೂ ನಂತೆ ಮಾರಾಟ ಮಾಡುವ ಮೂಲಕ ಕೆರೆಯ ಒಡಲಿಗೆ ಕನ್ನವಾಕುತ್ತಿದ್ದಾರೆ.

ಮೃತ್ಯುಕೂಪ: ಮುಂಗಾರು ಮಳೆಯಿಂದ ಸ್ವಲ್ಪ ಪ್ರಮಾಣದಲ್ಲಿ ತುಂಬಿದ್ದ ಕೆರೆ ಮುಂದಿನ ದಿನಗಳಲ್ಲಿ ಮಳೆಯಾದರೆ ಮಣ್ಣುಗಳ್ಳರು ತೆಗೆದ ಗುಂಡಿಗಳಲ್ಲಿ ನೀರು ತುಂಬಲಿದೆ, ಇದರಿಂದ ದನಕರುಗಳು ನೀರು ಕುಡಿಯಲು, ಜನರು ಬಟ್ಟೆ ತೊಳೆಯಲು, ಮಕ್ಕಳು ಈಜಾಡಲು ಹೋದರೆ ಸಾವು ನಿಶ್ಚಿತ, 10 ಅಡಿಗೂ ಹೆಚ್ಚು ಆಳವಾಗಿರುವ ಗುಂಡಿಗಳು ಮೃತ್ಯುಕೂಪದಂತೆ ಜನರನ್ನು ಆತಂಕಕ್ಕೆ ಕಾರಣವಾಗಿದ್ದು, ಅನಾಹುತಗಳನ್ನು ಸ್ವಾಗತಿಸುತ್ತಿವೆ.

ಅಧಿಕಾರಿಗಳ ನಿರ್ಲಕ್ಷ್ಯ:ಸರಕಾರಿ ಆಸ್ತಿ ರಕ್ಷಿಸಬೇಕಾದ ಅಧಿಕಾರಿಗಳು ಕೆರೆಯ ಒಡಲಿಗೆ ಕನ್ನಹಾಕಿ, ಮಣ್ಣಿನ ಸಾಗಾಟ ಮಾಡುತಿದ್ದರೂ, ಜಾಣ ಕುರುಡರಂತೆ ವರ್ತಿಸುತಿದ್ದಾರೆ. ಅಧಿಕಾರಿಗಳ ಕುಮ್ಮಕುನಿಂದಲೇ ಅಕ್ರಮ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಕೆರೆಯ ಜಾಗ ಜಿಲ್ಲಾಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ.ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದರೆ ನಮಗೂ ಸಂಬಂಧ ಪಡುತ್ತದೆ.ಮಣ್ಣು ತೆಗೆಯುತ್ತಿರುವ ಬಗ್ಗೆ ಮಾಹಿತಿಯಿಲ್ಲ. ಸ್ಥಳ ಪರಿಶೀಲಿಸಿ ಕಾನೂನುಕ್ರಮ ಕೈಗೊಳ್ಳಲಾಗುತ್ತದೆ.ಪ್ರಶಾಂತ್‌, ಯಂಟಗನಹಳ್ಳಿ ಗ್ರಾಪಂ ಪಿಡಿಓ

 

-ಕೊಟ್ರೇಶ್‌.ಆರ್‌

Advertisement

Udayavani is now on Telegram. Click here to join our channel and stay updated with the latest news.

Next