ಆರೋಗ್ಯದಲ್ಲಿ ಸ್ನಾನ ಬಹುಮುಖ್ಯ ಪಾತ್ರ ವಹಿಸುತ್ತದೆಂದು ತಿಳಿದ ಸಂಗತಿ. ಸ್ನಾನ ಸ್ವತ್ಛತೆಯ ಪ್ರಮುಖ ಅಂಶವಾಗಿದೆ. ಪ್ರಫುಲ್ಲಕರವಾದ ಮನಸ್ಸು ಇರಬೇಕಾದರೆ ಸ್ನಾನ ಮಾಡಬೇಕು ಎಂದು ಆಯುರ್ವೇದ ಹೇಳುತ್ತದೆ.
ಹೇಗೆ ಸ್ನಾನ ಮಾಡಬೇಕು ಎಂಬುದು ಮುಖ್ಯಪ್ರಶ್ನೆ. ಸ್ನಾನದ ನೀರಿಗೆ ಕೆಲವು ಗಿಡಮೂಲಿಕಾ ಕಷಾಯ ತಯಾರಿಸಿ ಸೇರಿಸಿ ಸ್ನಾನ ಮಾಡಿದರೆ ತ್ವಚೆಗೆ ಯೌವನ ಕಾಂತಿ ಬರುತ್ತದೆ. ನೀರುಗುಳ್ಳೆ ಮೈಮೇಲೆ ಎದ್ದಾಗ ಬೇವಿನಸೊಪ್ಪು ಬೆರೆಸಿ ಕುದಿಸಿ ಆರಿಸಿದರೆ ನೀರಿನ ಸ್ನಾನ ಹಿತಕರ. ಶೀತ, ಕಫ ಇರುವ ಚಿಕ್ಕ ಮಕ್ಕಳಿಗೆ ನೀಲಗಿರಿ ತೈಲ ಬೆರೆಸಿದ ನೀರಿನ ಸ್ನಾನ ಹಿತಕರ. ಸೆಕೆ, ಉರಿಯೂತ, ಚುಚ್ಚುವ ತುರಿಕೆಯುಳ್ಳ ತ್ವಚೆಯು ತಂಪಾಗಿ ತೊಂದರೆಗಳು ನಿವಾರಣೆಯಾಗುತ್ತವೆ. ರಕ್ತಪರಿಚಲನೆ ಸರಾಗವಾಗುತ್ತದೆ. ಬುದ್ಧಿ ಚುರುಕಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಗುಲಾಬಿ ಹೂವಿನ ದಳಗಳನ್ನು ಉಪಯೋಗಿಸಿದರೆ ತ್ವಚೆಗೆ ನವಚೇತನ ನೀಡುತ್ತದೆ.
ಕಾಮಕಸ್ತೂರಿ ಎಲೆಗಳಿಂದ ತಯಾರಿಸಿದ ಕಷಾಯ ಬೆರೆಸಿ ಸ್ನಾನ ಮಾಡುವುದರಿಂದ ತ್ವಚೆಯು ರೇಶಿಮೆಯಂತೆ ನುಣುಪಾಗುತ್ತದೆ. ತ್ವಚೆಯಲ್ಲಿರಬಹುದಾದ ನವೆ ತೊಲಗಿ ಸ್ವತ್ಛವಾಗುತ್ತದೆ. ರೋಸ್‌ಮೇರಿ ಸ್ನಾನದ ನೀರಿಗೆ ಸೇರಿಸುವುದರಿಂದ ಸ್ನಾಯುಗಳ ಬಿಗಿತ ಸಡಿಲವಾಗಿ ಆರಾಮದಾಯಕ ಎನಿಸುತ್ತದೆ. ತಲೆನೋವು ಉಪಶಮನ ಹೊಂದಿ ರಕ್ತಪರಿಚಲನೆ ಸರಾಗವಾಗುತ್ತದೆ. ತ್ವಚೆಗೆ ರೋಗನಿರೋಧಕ ಶಕ್ತಿ ಸೇರುತ್ತದೆ. ಸುಗಂಧವು ಮನಕ್ಕೆ ಹಿತವಾಗಿರುತ್ತದೆ. ಲ್ಯಾವೆಂಡರ್ ಇಸೆನ್ಸಿಯಲ್ ಆಯಿಲ್ ನಿಮ್ಮ ಸ್ನಾನದ ನೀರನ್ನು ಘಮ್ಮೆನಿಸುತ್ತದೆ. ಸುಟ್ಟ ಗಾಯವನ್ನು ಉಪಶಮನಗೊಳಿಸುವ ಶಕ್ತಿ ಇದಕ್ಕಿದೆ. ತ್ವಚೆ ನವಚೈತನ್ಯ ಹೊಂದುತ್ತದೆ. ನರಗಳಿಗೆ ಶಕ್ತಿ ಹಾಗೂ ಸಮಾಧಾನ ನೀಡುತ್ತದೆ. ಮನಸ್ಸು ನಿರಾಳವಾಗುತ್ತದೆ.
ಇದೇ ರೀತಿ ಪುದೀನಾ, ತುಳಸಿ, ಪನ್ನೀರೆಲೆ, ಕಹಿಬೇವು ಎಲೆ ಉಪಯೋಗಿಸಿ ತ್ವಚೆಗೆ ತಾಜಾತನ ಮತ್ತು ಕಾಂತಿಯನ್ನು ನೀಡಬಹುದು. ನಿಂಬೆ ಸಿಪ್ಪೆಯನ್ನು ಸ್ನಾನದ ನೀರಿನಲ್ಲಿ ಹಾಕಿಡುವುದರಿಂದ ಆಹ್ಲಾದಕರವಾದ ನಿಂಬೆವಾಸನೆಯುಕ್ತ ನೀರು ಸ್ನಾನಕ್ಕೆ ಸಿದ್ಧವಾಗುತ್ತದೆ. ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಸ್ನಾನದ ನೀರಿಗೆ ಬೆರೆಸುವುದರಿಂದ ಚರ್ಮಕ್ಕೆ ಹೆಚ್ಚಿನ ತೈಲಾಂಶ ದೊರಕುತ್ತದೆ. ಕೆಲವು ಬಾರಿ ಸೋಪ್‌ನ ಬಳಕೆಯಿಂದ ಅಥವಾ ಚರ್ಮದ ಮೇಲೆ ಅದರ ರಾಸಾಯನಿಕಗಳು ಪ್ರಭಾವ ಬೀರಿ ಚರ್ಮ ಒರಟಾಗಿ, ಒಣಗಿದಂತೆ ಕಾಣಬಹುದು. ಅಂತಹ ಸಮಯ ನಿಮ್ಮ ಸ್ನಾನದ ನೀರಿಗೆ ಐದು ಟೇಬಲ್ ಸ್ಪೂನ್ ಸೇವಿನ್ ವಿನೆಗರ್ ಅನ್ನು ಬೆರೆಸಿ ಸ್ನಾನ ಮಾಡುವುದು ಒಳ್ಳೆಯದು. ಸ್ನಾನಕ್ಕೆ ಸಾಬೂನೇ ಬೇಕು ಎಂದೇನಿಲ್ಲ. ಚರ್ಮ ಒಣದಾಗಿದ್ದರೆ ಸ್ನಾನಕ್ಕೆ ಕಡಲೆಹಿಟ್ಟು ಬಳಸಿ. ಸೂಕ್ಷ್ಮ ಚರ್ಮವಾಗಿದ್ದರೆ ಬಾರ್ಲಿ ಹಿಟ್ಟು ಒಳ್ಳೆಯದು. ಎಣ್ಣೆ ಚರ್ಮಕ್ಕೆ ಹೆಸರುಹಿಟ್ಟು ಸೂಕ್ತ. ಆಯಾ ಹಿಟ್ಟನ್ನು ನೀರು ಅಥವಾ ಹಾಲಿನಲ್ಲಿ ಕಲಸಿ ಪೇಸ್ಟ್ ಮಾಡಿ ದೇಹಕ್ಕೆ ಲೇಪಿಸಿ ಉಜ್ಜಿಕೊಂಡು ನಂತರ ಸ್ನಾನ ಮಾಡಿದರೆ ಮನಸ್ಸು ಉಲ್ಲಸಿತ. ದೇಹ, ಆರೋಗ್ಯವು ಸುಸ್ಥಿರ, ಚರ್ಮ ಹೊಳಪು ಕಾಂತಿಯಿಂದ ಕೂಡಿರುತ್ತದೆ.
– ಸ್ವಾತಿ