ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದ ರೂವಾರಿ, ವಿಶ್ವ ಕೊಂಕಣಿ ಸರದಾರ ಬಿರುದಾಂಕಿತ ದಿ| ಬಸ್ತಿ ವಾಮನ ಶೆಣೈ ಅವರ ಸಾರ್ಥಕ ಸಾಧನೆಯನ್ನು ಶಾಶ್ವತ ವಾಗಿರಿಸುವ ಆಶಯದಿಂದ ವಿಶ್ವ ಕೊಂಕಣಿ ಕೇಂದ್ರವು ಲೋಹದ ಪ್ರತಿಮೆ ನಿರ್ಮಿಸಿ ಗೌರವ ಸಲ್ಲಿಸಲು ನಿರ್ಧರಿಸಿದೆ.
ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಮು ದಾಯದ ಶ್ರೇಯಸ್ಸು ಮತ್ತು ಸಂಘಟನೆಗಾಗಿ ಶ್ರಮಿಸಿದ್ದ ಅವರು ಕೊಂಕಣಿ ಸಾರಸತ್ವ ಲೋಕದಲ್ಲಿ ಅಪಾರ ಮನ್ನಣೆ, ಗೌರವಾದಾರಗಳಿಗೆ ಪಾತ್ರರಾಗಿದ್ದರು.
ಕೊಂಕಣಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ನೆನಪಿನಲ್ಲಿ ನಗುಮೊಗ, ವಿನಮ್ರ ನಿಲುವಿನ ದಿ| ಬಸ್ತಿ ವಾಮನ ಶೆಣೈ ಅವರನ್ನು ಯಥಾವತ್ ಬಿಂಬಿಸುವ ಹಿತ್ತಾಳೆಯ 250 ಕೆ.ಜಿ. ತೂಕ
ಹಾಗೂ 6.5 ಅಡಿ ಎತ್ತರದ ಪ್ರತಿಮೆಯು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಮುಖ ಮಂಟಪದಲ್ಲಿ ಅನಾವರಣಕ್ಕೆ ಸಜ್ಜು ಗೊಂಡಿದೆ.
ಮಂಗಳೂರಿನ ವಿಭಿನ್ ಸಂಸ್ಥೆಯ ಉಸ್ತುವಾರಿಯಲ್ಲಿ ಈ ಪ್ರತಿಮೆಯನ್ನು ಉತ್ತರ ಪ್ರದೇಶದ ಅಲೀಘರ್‌ನ ಲೋಹ ಶಾಲೆಯಲ್ಲಿ ಮೂರು ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಮೊದಲಿಗೆ ಆವೆ ಮಣ್ಣಿನ ಪ್ರತಿಕೃತಿಯನ್ನು ರಚಿಸಿ ಆ ಬಳಿಕ ಹಿತ್ತಾಳೆ ಲೋಹದ ಎರಕ ಹೊಯ್ಯುವ ಮೂಲಕ “ಬಸ್ತಿ ವಾಮನ ಮಾಮು’ ಅವರ ಪ್ರತಿ ರೂಪಕ್ಕೆ ಲೋಹದ ಸ್ಪರ್ಶ ನೀಡಲಾಗಿದೆ. ವಿಶ್ವ ಕೊಂಕಣಿ ಕೇಂದ್ರದ ಮಹಾ ಪೋಷಕ, ಗೌರವ ಅಧ್ಯಕ್ಷ ಡಾ| ಪಿ. ದಯಾನಂದ ಪೈ ಅವರ ಪ್ರಾಯೋಜಕತ್ವದಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ಪ್ರತಿಮೆ ನಿರ್ಮಾಣವಾಗಿದೆ.
“ಬಸ್ತಿ ಮಾಮ್’ ಎಂದೇ ಜನ ಜನಿತ ರಾಗಿದ್ದ ಬಸ್ತಿ ವಾಮನ ಶೆಣೈ, 1991- 92ರಲ್ಲಿ ಕೊಂಕಣಿ ಭಾಷೆಗೆ ಸಾಂವಿಧಾನಿಕ ಸ್ಥಾನಮಾನ ಹಾಗೂ ಕೊಂಕಣಿ ಅಕಾಡೆಮಿ ಸ್ಥಾಪನೆ ಆಗ ಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟು ಕೊಂಕಣಿ ಜಾಥಾಕ್ಕೆ ಸಿದ್ಧತೆಗಳು ನಡೆಯುತ್ತಿದ್ದಾಗ ತನ್ನ ಬ್ಯಾಂಕ್ ವೃತ್ತಿಯಿಂದ ನಿವೃತ್ತಿ ಪಡೆದು ಜಾಥಾದ ಸಂಚಾಲಕತ್ವ ವಹಿಸಿದವರು. ಕೊಂಕಣಿ ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಗೊಳ್ಳುವಲ್ಲಿಯೂ ವಾಮನ ಶೆಣೈ ಅವರ ಪಾತ್ರ ಮಹತ್ವದ್ದು. ಸಾಮಾಜಿಕ ಸಂಘಟನೆ, ಹೋರಾಟದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. ಎರಡು ಅವಧಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ವಾಮನ ಶೆಣೈ ಅವರ ಸಾಧನೆಗೆ ಹಲವು ಪ್ರಶಸ್ತಿ, ಸಮ್ಮಾನಗಳ ಜತೆಗೆ ವಿಶ್ವ ಕೊಂಕಣಿ ಸರದಾರ, ವಿಶ್ವ ಸಾರಸ್ವತ ಸರದಾರ ಎಂಬ ಬಿರುದುಗಳು ಪ್ರಾಪ್ತವಾಗಿವೆ. ಮಂಗಳೂರಿನಲ್ಲಿ ವ್ಯವಸ್ಥಿತವಾದ ಕೊಂಕಣಿ ಸಾಹಿತ್ಯ, ಸಾಂಸ್ಕೃತಿಕ ವಿಶ್ವ ಕೊಂಕಣಿ ಕೇಂದ್ರವನ್ನು ದಾನಿಗಳ ನೆರವಿನಲ್ಲಿ ಸಾಕಾರಗೊಳಿಸಿದ ದಿ| ಬಸ್ತಿ ಮಾಮ್ ಅವರ ಪ್ರತಿಮೆ ಅದೇ ಕೇಂದ್ರದಲ್ಲಿ ಕಂಗೊಳಿಸಲಿದೆ.
ವಿಶ್ವ ಕೊಂಕಣಿ ಸರದಾರ ಬಸ್ತಿ ವಾಮನ ಶೆಣೈ ಅವರ ಎಂದಿನ ವಿನಮ್ರ ನಿಲುವಿನ ಈ ವಿಗ್ರಹ ಸ್ವರೂಪ ಯಥಾವತ್ತಾಗಿ ಬಿಂಬಿತವಾಗಿದ್ದು ಅವರ ನಿಕಟವರ್ತಿಗಳಿಗೆ, ಅಭಿಮಾನಿಗಳಿಗೆ ಇದು ಸ್ಫೂರ್ತಿದಾಯಕವಾಗಿದೆ. ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ. 8ರಂದು ಸಂಜೆ 5ಕ್ಕೆ ಗೋವಾ ಮುಖ್ಯಮಂತ್ರಿ ಡಾ| ಪ್ರಮೋದ್ ಸಾವಂತ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರತಿಮೆ ಅನಾವರಣಗೊಳ್ಳಲಿದೆ.
– ಗುರುದತ್ ಬಂಟ್ವಾಳಕರ್, ಸಿಇಒ, ವಿಶ್ವ ಕೊಂಕಣಿ ಕೇಂದ್ರ