ಬಸ್ರೂರು: ಕೋಣಿಯಲ್ಲಿ ಆರಂಭವಾಗಿರುವ ಈ ಉಪ ಕೇಂದ್ರದಿಂದ ಈ ಭಾಗದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತಾಗಬೇಕು. ಸುಮಾರು 20,000ಕ್ಕೂ ಹೆಚ್ಚು ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಕೋಣಿಯ ಆರೋಗ್ಯ ಉಪಕೇಂದ್ರ ಸುಮಾರು ಮೂರುವರೆ ಸಾವಿರ ಜನರಿಗೆ ಅನುಕೂಲವಾಗಲಿದೆ ಎಂದು ಕುಂದಾಪುರ ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ಅವರು ಶುಕ್ರವಾರ ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದಡಿ ಬರುವ ಕೋಣಿಯಲ್ಲಿನ ಉಪ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೋಣಿ ಗ್ರಾ. ಪಂ. ಅಧ್ಯಕ್ಷ ಕೆ. ಸಂಜೀವ ಮೊಗವೀರ ಮಾತನಾಡಿ, ಆರೋಗ್ಯ ಉಪ ಕೇಂದ್ರದ ಪ್ರಯೋಜನ ಕೋಣಿ ಗ್ರಾಮದ ಎಲ್ಲ ಜನರಿಗೆ ತಲುಪುವಂತಾಗಲಿ. ಕೋಣಿ ಗ್ರಾಮದಲ್ಲಿ ಇದುವರೆಗೂ ಆರೋಗ್ಯ ಸೌಲಭ್ಯಕ್ಕಾಗಿ ಬಸ್ರೂರು, ಕುಂದಾಪುರಕ್ಕೆ ಹೋಗಬೇಕಾಗಿದೆ. ಈಗ ಇಲ್ಲಿನ ಉಪ ಆರೋಗ್ಯದಿಂದ ಜನರಿಗೆ ಪ್ರಯೋಜನವಾಗಲಿದೆ ಎಂದರು.
ಬಸ್ರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸುಶೀಲಾ ಅವರನ್ನು ಸಮ್ಮಾನಿಸಲಾಯಿತು. ಜಿ.ಪಂ. ಸದಸ್ಯೆ ಲಕ್ಷ್ಮೀ ಮಂಜು ಬಿಲ್ಲವ ಅವರು ಕೋಣಿ ಉಪ ಆರೋಗ್ಯ ಕೇಂದ್ರದ ನಾಮಫಲಕವನ್ನು ಅನಾವರಣಗೊಳಿಸಿದರು.
ಕೋಣಿ ತಾ. ಪಂ. ಸದಸ್ಯ ಚಂದ್ರಲೇಖಾ ಎಸ್. ಪೂಜಾರಿ ಉಪಸ್ಥಿತರಿದ್ದರು.ಬಸೂÅರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ವಿದ್ಯಾ ಸ್ವಾಗತಿಸಿದರು. ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮೋಹನ್ ರಾವ್ ವಂದಿಸಿದರು.